ಅಜ್ಜಿಮನೆ ಬೇಸಿಗೆ ಶಿಬಿರದಲ್ಲಿ ರಂಗ ಚಿಂತಕ ಡಿ.ರಾಘವೇಂದ್ರ ಶೆಟ್ಟಿ ಅಭಿಪ್ರಾಯ

ಮರಿಯಮ್ಮನಹಳ್ಳಿ: ಬಾಲ್ಯದಲ್ಲೆ ಮಕ್ಕಳಿಗೆ ರಂಗಕಲೆಯನ್ನು ಉಣಬಡಿಸುವುದರಿಂದ ಎಂಎಂಹಳ್ಳಿಯಲ್ಲಿ ಇನ್ನಷ್ಟು ರಂಗಕಲೆ ಬೆಳೆಯುತ್ತದೆ ಎಂದು ರಂಗ ಚಿಂತಕ ಡಿ.ರಾಘವೇಂದ್ರ ಶೆಟ್ಟಿ ಹೇಳಿದರು.

ಪಟ್ಟಣದ ಶ್ರೀ ಅನ್ನದಾನೇಶ್ವರ ಶಾಖಾಮಠದಲ್ಲಿ ರಂಗಚೌಕಿ ಕಲಾ ಟ್ರಸ್ಟ್ ಆಯೋಜಿಸಿರುವ 20 ದಿನಗಳ ಅಜ್ಜಿಮನೆ ಬೇಸಿಗೆ ರಂಗ ಶಿಬಿರ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಕಲೆ ಗೌರವಿಸುವ ಕಲಾವಿದರನ್ನು ಕಲೆಯು ಒಂದು ದಿನ ವಿಶ್ವದ ಎತ್ತರಕ್ಕೆ ಕೊಂಡೊಯ್ಯುತ್ತದೆ. ಕಲೆ ಎಲ್ಲರನ್ನೂ ತನ್ನತ್ತ ಸೆಳೆಯುವ ಅಗಾಧ ಶಕ್ತಿಯನ್ನು ಹೊಂದಿದೆ. ಇತ್ತೀಚೆಗೆ ರಂಗಭೂಮಿ ಕಲಾವಿದರು ಕ್ಷೀಣಿಸುತ್ತಿರುವ ಬೆನ್ನಲ್ಲೆ ರಂಗಕಲೆ ಉಳುವಿಗಾಗಿ ಯುವ ಕಲಾವಿದ ನೀನಾಸಂ ಪದವೀಧರ ಸರದಾರ, ರಂಗಚೌಕಿ ಟ್ರಸ್ಟ್ ಮೂಲಕ ಮಕ್ಕಳಿಗೆ ರಂಗಕಲೆ, ಹಳ್ಳಿ ಆಟಗಳು, ಜನಪದ ಗೀತೆಗಳು, ರಂಗಗೀತೆಗಳು, ನಾಟಕ, ನೃತ್ಯ, ಮುಖವಾಡ ತಯಾರಿಕೆ, ಚಿತ್ರಕಲೆ, ಕಾಸ್ಟ್ಯೂಮ್ ಡಿಸೈನಿಂಗ್, ಮಕ್ಕಳ ಸಂತೆ ಸೇರಿ ಹತ್ತಾರು ಕಲೆಯನ್ನು ಮಕ್ಕಳಿಗೆ ಕಲಿಸುವ ಪ್ರಯತ್ನ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಶ್ರೀ ಅನ್ನದಾನೇಶ್ವರ ಶಾಖಾಮಠದ ಶ್ರೀರಾಜಯ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ಕೆ.ನಾಗರತ್ನಮ್ಮ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಅಕಾಡೆಮಿ ಸದಸ್ಯೆ ಮಾತ ಮಂಜಮ್ಮ ಜೋಗ್ತಿ, ಉಜ್ಜಯಿನಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಮಂಜುನಾಥ, ಉಪನ್ಯಾಸಕ ಎಂ.ಸೋಮೇಶ್ ಉಪ್ಪಾರ್, ರಂಗಚೌಕಿ ಕಲಾ ಟ್ರಸ್ಟ್ ಅಧ್ಯಕ್ಷ ಸರದಾರ ಬಾರಿಗಿಡ, ಪುಷ್ಪಾ ಸರದಾರ, ಶಿವುಕುಮಾರ್, ಹನುಮಂತಪ್ಪ, ಯು.ನೇತ್ರಾ ಇತರರಿದ್ದರು.