ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಲಿ

ಮರಿಯಮ್ಮನಹಳ್ಳಿ( ಬಳ್ಳಾರಿ): ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪುರಸ್ಕಾರ ನೀಡುವಂತೆ ಪಟ್ಟಣದ ದುರ್ಗದಾಸ್ ಕಲಾಮಂದಿರದಲ್ಲಿ ಭಾನುವಾರ ಲಲಿತಕಲಾ ರಂಗದ ಸದಸ್ಯರು ಒತ್ತಾಯಿಸಿದರು. ಹಿರಿಯ ರಂಗ ಕಲಾವಿದ ಮ.ಬ.ಸೋಮಣ್ಣ ಮಾತನಾಡಿ, ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಹತ್ತಾರು ಕ್ಷೇತ್ರಗಳಿಗೆ ತಮ್ಮ ಜೀವತಾವಧಿಯನ್ನು ಮುಡುಪಾಗಿಟ್ಟು, ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕೇಂದ್ರ ಸರ್ಕಾರ ಈ ಬಗ್ಗೆ ಚಿಂತಿಸಿ ಶ್ರೀಗಳಿಗೆ ಭಾರತ ರತ್ನ ನೀಡಿ ಗೌರವಿಸಬೇಕು ಎಂದರು. ಶ್ರೀಗಳ ಆರೋಗ್ಯ ಚೇತರಿಕೆಗೆ ಕಲಾವಿದರು ಪ್ರಾರ್ಥಿಸಿದರು. ಲಲಿತಕಲಾರಂಗದ ಅಧ್ಯಕ್ಷ ಹುರುಕೊಳ್ಳಿ ಮಂಜುನಾಥ, ಜಿ.ಎಂ.ಕೊಟ್ರೇಶ್, ಬಿಎಂಎಸ್. ಮೃತ್ಯುಂಜಯ, ಎಚ್.ರಸೂಲ್ ಸಾಹೇಬ್, ಕೆ.ಮಲ್ಲನಗೌಡ, ಜಿ.ಸೋಮಶೇಖರ್. ಜಿ.ಮಲ್ಲಪ್ಪ, ಸಿ.ಕೆ.ನಾಗರಾಜ್, ವಿ.ಶೋಭಾ, ಜಿ.ನಂದಿನಿ, ಎಲ್.ನೇತ್ರಾ ಇತರರಿದ್ದರು.

ಶಾಲೆ ಮಕ್ಕಳಿಂದ ಸಾಮೂಹಿಕ ಪ್ರಾರ್ಥನೆ
ಕುರುಗೋಡು: ಸಿದ್ಧಗಂಗಾ ಶ್ರೀಗಳ ಆರೋಗ್ಯ ಚೇತರಿಕೆಗಾಗಿ ತಾಲೂಕಿನ ಎಮ್ಮಿಗನೂರು ಶ್ರೀ ಜಡಿಸಿದ್ಧೇಶ್ವರ ಶಾಲೆ ಮಕ್ಕಳು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಎಸ್.ರಾಮು ಮಾತನಾಡಿ, ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮಿಗಳ ಆಶ್ರಯದಲ್ಲಿ ಕೋಟಿಗೂ ಅಧಿಕ ವಿದ್ಯಾರ್ಥಿಗಳು ಸುಂದರ ಜೀವನವನ್ನು ರೂಪಿಸಿಕೊಂಡಿದ್ದಾರೆ. ಅವರ ಸೇವೆ ಅಜರಾಮರ. ಕೇಂದ್ರ ಸರ್ಕಾರ ಸ್ವಾಮೀಜಿಗಳಿಗೆ ಭಾರತ ರತ್ನ ಪುರಸ್ಕಾರ ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದರು. ಶಿಕ್ಷಕರಾದ ಲೋಕೇಶ ಹೂಗಾರ, ಧನಂಜಯ, ಎರಿಸ್ವಾಮಿ ಇದ್ದರು.