ಚಿರತೆ ದಾಳಿಗೆ ಆರು ಕುರಿ ಬಲಿ

ಮರಿಯಮ್ಮನಹಳ್ಳಿ: ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಬುಧವಾರ ರಾತ್ರಿ ಚಿರತೆ ದಾಳಿಗೆ ಆರು ಕುರಿಗಳು ಬಲಿಯಾಗಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ.

ಕಳೆದ ವಾರದಿಂದ ಚಿರತೆ ಪಟ್ಟಣದ 8, 9 ಹಾಗೂ 10ನೇ ವಾರ್ಡ್‌ಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಮನೆ ಮುಂದೆ ಕಟ್ಟಿ ಹಾಕಿದ್ದ ಕುರಿಗಳನ್ನು ತಿಂದಿದೆ. ಪಟ್ಟಣದ ಹೊರ ವಲಯದ ಗುಡ್ಡದ ತಿಮ್ಮಪ್ಪ ಬೆಟ್ಟದಲ್ಲಿ ಚಿರತೆಗಳಿದ್ದು, ಆಗಾಗ್ಗೆ ಪಟ್ಟಣದಲ್ಲಿ ಕಾಣಿಸಿಕೊಳ್ಳುತ್ತಿವೆ. ಕುರಿ, ನಾಯಿ, ಹಸುಗಳ ಮೇಲೆ ದಾಳಿ ಮಾಡುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಬೋನ್ ಅಳವಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಗುರುವಾರ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ದಾಳಿ ನಡೆಸಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.