ಹಂಪಿ ಉತ್ಸವ ನಡೆದೇ ನಡೆಯಲಿದೆ

ಮರಿಯಮ್ಮನಹಳ್ಳಿ (ಬಳ್ಳಾರಿ): ರಾಜ್ಯ ಸರ್ಕಾರ ಜಿಲ್ಲೆಯ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಶೀಘ್ರದಲ್ಲೆ ಹಂಪಿ ಉತ್ಸವ ಆಚರಿಸಲು ಮುಂದಾಗಬೇಕು ಎಂದು ಸಂಸದ ಉಗ್ರಪ್ಪ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ಉತ್ಸವಗಳು ಸಂಸ್ಕೃತಿಯ ಪ್ರತೀಕವಾಗಿವೆ. ರಾಜ್ಯದ ಆಯಾ ಜಿಲ್ಲೆಯಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸುವ ಮೂಲಕ ಜನರು, ಕಲಾವಿದರ ಭಾವನೆಗಳಿಗೆ ಜೀವ ತುಂಬುವ ಕೆಲಸ ಮಾಡಬೇಕು. ಹಂಪಿ ಉತ್ಸವ ಜಿಲ್ಲೆಯ ಸ್ವಾಭಿಮಾನದ ಪ್ರತೀಕ. ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿದ್ದು, ಜಿಲ್ಲಾಡಳಿತದ ಖಜಾನೆಯಲ್ಲಿ 2.50 ಕೋಟಿ ರೂ. ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಜತೆ ಮಾತನಾಡಿ, ಹಂಪಿ ಉತ್ಸವ ಮಾಡಿಸಿಯೇ ಇರುತ್ತೇನೆ ಎಂದು ಭರವಸೆ ನೀಡಿದರು.

ಹೊಸಪೇಟೆ-ಕೊಟ್ಟೂರು ಪ್ಯಾಸೆಂಜರ್ ರೈಲ್ವೆ ಸಂಚಾರದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲೆಯ ಗಣಿಬಾಧಿತ ಪ್ರದೇಶದ ಅಭಿವೃದ್ಧಿಗೆ ಮೀಸಲಿರುವ ಆರ್ ಆಂಡ್ ಆರ್ ಹಣ ಬಿಡುಗಡೆ ಬಗ್ಗೆ ಸುಪ್ರಿಂ ಕೋರ್ಟ್ ಆದೇಶ ಬೇಕಿದೆ. 2018ರ ವಿಧಾನಸಭೆ ಚುನಾವಣೆ ಜನಾದೇಶದಂತೆ ಸಮ್ಮಿಶ್ರವಾಗಿ ಸರ್ಕಾರ ರಚನೆಯಾಗಿದೆ. ಮೋದಿ ಅವರ ಟೀಕೆ ಸರಿಯಲ್ಲ ಎಂದರು.

ಜೆಡಿಎಸ್ ಮುಖಂಡ ಎಸ್.ಕೃಷ್ಣನಾಯ್ಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಿ, ಜಿಪಂ ಸದಸ್ಯೆ ರೇಖಾ ಪೂಜಾರ್ ಪ್ರಕಾಶ್, ಟಿ.ಬಸವರಾಜ್, ಈ.ಶ್ರೀನಿವಾಸ್, ಮೊಹಮದಿ, ಜಾಫರ್ ಸಾಬ್, ಪೂಜಾರ್ ಪ್ರಕಾಶ್, ಕಲಂದರ್, ಗೋಣೆಪ್ಪ ಅಯ್ಯನಹಳ್ಳಿ, ಲಕ್ಷ್ಮಣ್ ನಾಯ್ಕ ಇತರರಿದ್ದರು.

ಹಂಪಿ ಉತ್ಸವ ಆಚರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜ.13ರಂದು ಹೊಸಪೇಟೆಯ ರೋಟರಿ ವೃತ್ತದಿಂದ ವಿವಿಧ ಸಂಘಟನೆಗಳು ಹಾಗೂ ಕಲಾವಿದರು ಹಂಪಿವರೆಗೂ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಈ ಪಾದಯಾತ್ರೆಯಲ್ಲಿ ನಾನು ಪಾಲ್ಗೊಂಡು ಪಾದಯಾತ್ರೆ ಯಶಸ್ವಿಗೆ ಶ್ರಮಿಸಿಸುತ್ತಿನೆ.
|ಉಗ್ರಪ್ಪಬಳ್ಳಾರಿ ಸಂಸದ