ರೋಗಗ್ರಸ್ತ, ಪುಂಡ ಕೋತಿಗಳ ಸ್ಥಳಾಂತರ

ಎಂಎಂಹಳ್ಳಿಯಲ್ಲಿ ಬೋನ್ ಅಳವಡಿಕೆ | 10ಕ್ಕೂ ಹೆಚ್ಚು ಮಂಗಗಳ ಸೆರೆ

ಮರಿಯಮ್ಮನಹಳ್ಳಿ (ಬಳ್ಳಾರಿ): ಪಟ್ಟಣದ ನಿವಾಸಿಗಳಿಗೆ ಉಪಟಳ ನೀಡುತ್ತಿದ್ದ ರೋಗಗ್ರಸ್ತ ಕೋತಿಗಳ ಸ್ಥಳಾಂತರಕ್ಕೆ ಅರಣ್ಯ ಇಲಾಖೆ ಬೋನ್ ಅಳವಡಿಸಿದ್ದ ಬೋನ್‌ಗೆ ಹತ್ತಕ್ಕೂ ಹೆಚ್ಚು ಕೋತಿಗಳು ಸೆರೆಯಾಗಿವೆ.

9ನೇ ವಾರ್ಡ್‌ನ ನೆಟ್‌ವರ್ಕ್ ಟವರ್ ಬಳಿ ಅಳವಡಿಸಿದ ಬೋನ್‌ನಲ್ಲಿ 10ಕ್ಕೂ ಹೆಚ್ಚು ಕೋತಿಗಳು ಸೆರೆಯಾಗಿವೆ. ಇನ್ನು ಸುಮಾರು 30ಕ್ಕೂ ಹೆಚ್ಚು ಕೋತಿಗಳಿದ್ದು, ಕಾರ್ಯಾಚರಣೆ ಮುಂದುವರಿದಿದೆ. ಬೋನ್‌ನಲ್ಲಿ ಬಾಳೆ ಹಣ್ಣು, ಸೇಬು, ಶೇಂಗಾ, ಸೊಂಡಿಗೆ, ಚಕ್ಕಲಿ ಸೇರಿ ವಿವಿಧ ತಿನಿಸು ಇಟ್ಟಿದ್ದು, ಕೆಲ ಕೋತಿಗಳು ಟವರ್ ಏರಿ ಅರಣ್ಯ ಇಲಾಖೆ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸುತ್ತಿವೆ. ಅವುಗಳ ಸೆರೆಗೆ ಇಲಾಖೆ ಸಿಬ್ಬಂದಿ ಜತೆಗೆ ಸ್ಥಳೀಯರು ಹೆಣಗಾಡುತ್ತಿದ್ದಾರೆ.

ಸೆರೆ ಹಿಡಿದಿರುವ ಕೆಲ ಕೋತಿಗಳ ಮುಖದಲ್ಲಿ ಉಳುಕು ಗಾಯಗಳಾಗಿದ್ದು, ವಿಕಾರವಾಗಿ ಕಾಣಿಸುತ್ತಿವೆ. ಮಂಗನ ಕಾಯಿಲೆ ಭೀತಿ ಎದುರಾಗಿದೆ. ಇಷ್ಟಾದರೂ ಪಪಂ, ಆರೋಗ್ಯ ಇಲಾಖೆ ಅಧಿಕಾರಿಗಳು ಗಮನಹರಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರು ನಿರಾಳ
ಸುಮಾರು ನಾಲ್ಕು ವರ್ಷಗಳ ಹಿಂದೆ ಪಟ್ಟಣದಲ್ಲಿ ಕರಿ ಕೋತಿಗಳ ಉಪಟಳ ಹೆಚ್ಚಿತ್ತು. ಕೋತಿಗಳನ್ನು ಸೆರೆ ಹಿಡಿಯುವ ವೇಳೆ ಅರಣ್ಯ ಇಲಾಖೆ ರಕ್ಷಕ (ಗಾರ್ಡ್) ನಾಗರಾಜ್ ಮಣೆಗಾರ್ ಅವುಗಳ ದಾಳಿಗೆ ಗಾಯಗೊಂಡಿದ್ದರು. ಆದರೂ, ಕೋತಿಗಳ ಸ್ಥಳಾಂತರದಲ್ಲಿ ಯಶಸ್ವಿಯಾಗಿದ್ದರು. ಸದ್ಯ ರೋಗಗ್ರಸ್ತ ಕೋತಿಗಳ ಸೆರೆಗೆ ಅವರೇ ಆಗಮಿಸಿರುವುದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.