ಎಚ್.ಡಿ.ಕೋಟೆ: ಪಟ್ಟಣದ ಗದ್ದಿಗೆ ವೃತ್ತದಿಂದ ವಡ್ಡರ ಗುಡಿ ಗ್ರಾಮ ಮಾರ್ಗವಾಗಿ ಗಾಂಧಿನಗರ ಗ್ರಾಮಕ್ಕೆ ತೆರಳುವ ಮುಖ್ಯ ಹಾಳಾಗಿ ಹಲವು ವರ್ಷಗಳಾದರೂ ದುರಸ್ತಿ ಪಡಿಸುವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ತಾಲೂಕು ಶಾಖೆ ವತಿಯಿಂದ ಗಾಂಧಿನಗರದಿಂದ ಪಟ್ಟಣದ ಗದ್ದಿಗೆ ವೃತ್ತದವರೆಗೆ ಮಂಗಳವಾರ ಜಾಥಾ ನಡೆಸಿ ಪ್ರತಿಭಟಿಸಲಾಯಿತು.
ಪ್ರತಿಭಟನಾಕಾರರು ಸುಮಾರು 12 ಕಿಲೋ ಮೀಟರ್ ಕಾಲ್ನಡಿಗೆ ಮೂಲಕ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಮತ್ತು ಪಿಡಬ್ಲುೃಡಿ ಅಧಿಕಾರಿಗಳು ರಸ್ತೆ ಮಾಡಲು ನಿರ್ಲಕ್ಷೃ ತೋರುತ್ತಿದ್ದಾರೆ ಎಂದು ಘೋಷಣೆ ಕೂಗಿ ಆಕ್ರೋಶ ಕ್ತಪಡಿಸಿದರು.
ಬಳಿಕ ಮುಖಂಡ ಸಿಪಿಎಂ ಶಿವಣ್ಣ ಮಾತನಾಡಿ, ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಸಾರ್ವಜನಿಕರು, ವಾಹನ ಸವಾರರು ಈ ರಸ್ತೆಯಲ್ಲಿ ಓಡಾಡುವುದಕ್ಕೆ ನರಕಾಯಾತನೆ ಪಡುತ್ತಿದ್ದಾರೆ.ಪಟ್ಟಣದ ಗದ್ದಿಗೆ ಸರ್ಕಲ್‌ನಿಂದ ವಡ್ಡರಗುಡಿ, ಸವ್ವೆಮಾಳಕ್ಕೆ ಹೋಗುವ ತಿರುವಿನವರೆಗೂ ರಸ್ತೆ ತೀವ್ರವಾಗಿ ಹದಗೆಟ್ಟಿದೆ. ಪಡುಕೋಟೆ ಕಾವಲ್ ಗ್ರಾಮ ಮಾರ್ಗವಾಗಿ ಗದ್ದಿಗೆ ಹೋಗುವಂತಹ ಪ್ರಯಾಣಿಕರು ಈ ರಸ್ತೆಯನ್ನೇ ಅವಲಂಬಿಸಿದ್ದು, ಗುಂಡಿಬಿದ್ದ ರಸ್ತೆಯಿಂದಾಗಿ ಜನ ದಿನನಿತ್ಯ ಬವಣೆ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿತ್ಯ ನೂರಾರು ವಿದ್ಯಾರ್ಥಿಗಳು ಶಾಲಾ–ಕಾಲೇಜುಗಳಿಗೆ, ರೋಗಿಗಳು ಆಸ್ಪತ್ರೆಗೆ ಇದೇ ರಸ್ತೆಯಲ್ಲಿ ಓಡಾಡಬೇಕು. ಸಾರಿಗೆ ಸಂಸ್ಥೆ ಬಸ್‌ಗಳು ನಿಯಮಿತವಾಗಿದ್ದು, ಜನರು ಖಾಸಗಿ ವಾಹನಗಳನ್ನೇ ಅವಲಂಬಿಸಿದ್ದಾರೆ. ಆದರೆ ರಸ್ತೆ ದುಸ್ಥಿತಿಯಿಂದಾಗಿ ಖಾಸಗಿ ವಾಹನಗಳು ಈ ರಸ್ತೆಯಲ್ಲಿ ಬರಲು ಒಪ್ಪುತ್ತಿಲ್ಲ. ತುರ್ತು ಪರಿಸ್ಥಿತಿ ಸಂದರ್ಭದಲ್ಲಂತೂ ಜನರ ಕಷ್ಟ ಹೇಳತೀರದು. ಈ ರಸ್ತೆ ಹದಗೆಟ್ಟು ಹಲವು ವರ್ಷಗಳಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ.ಇದು ನಾಚಿಗೇಡಿನ ಸಂಗತಿ. ಜನಸಾಮಾನ್ಯರ ಜನರ ಬಗ್ಗೆ ಕಾಳಜಿ ಇಲ್ಲದಿರುವುದು ಈ ರಸ್ತೆ ನೋಡಿದರೆ ತಿಳಿಯುತ್ತದೆ ಎಂದು ದೂರಿದರು.
ಈಗ ಸಾಂಕೇತಿಕವಾಗಿ ಕಾಲ್ನಡಿಗೆ ಮೂಲಕ ಪ್ರತಿಭಟನೆ ನಡೆಸಿದ್ದೇವೆ. ಮುಂದಿನ ದಿನದಲ್ಲಿ ರಸ್ತೆಯ ಅಭಿವೃದ್ಧಿಗಾಗಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ನಂತರ ಗ್ರೇಡ್ 2 ತಹಸೀಲ್ದಾರ್ ಶ್ರೀಧರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆ ಕೈಬಿಟ್ಟರು. ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ‌್ಯ, ಶಾಖಾ ಕಾರ್ಯದರ್ಶಿ ದೇವರಾಜಮ್ಮ, ಫಾರೂಕ್ ಆಲಿ, ಪ್ರಶಾಂತ್, ಪ್ರಪುಲ್ಲನ್, ಬಾಬು, ಅಂಬುಜಾಕ್ಷ, ಗ್ರಾಯತ್ರಿ, ಶೇರ್ಲಿ, ಜನಾರ್ಧನ್, ರವಿ, ಮುನಿಸ್ವಾಮಿ, ಪಿ.ರವಿ, ಅಂಬಿಕ ಪ್ರಶೂಬ್ ಇತರರಿದ್ದರು.