Wednesday, 12th December 2018  

Vijayavani

Breaking News

ರಾಜ್ಯದಲ್ಲಿ 1.78 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿ

Wednesday, 21.03.2018, 3:05 AM       No Comments

ನಗರೀಕರಣ ಹೆಚ್ಚಾದಂತೆಲ್ಲ್ಲ ದಿನದಿಂದ ದಿನಕ್ಕೆ ಅರಣ್ಯ ಪ್ರಮಾಣ ಕುಸಿಯುತ್ತಿದೆ. ಅದಕ್ಕೆ ಪೂರಕವೆಂಬಂತೆ ರಾಜ್ಯದ ವಿವಿಧೆಡೆ ಒಟ್ಟು 1.78 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಸರ್ಕಾರದ ಅಂಕಿ- ಆಂಶ ಹೇಳುತ್ತಿದ್ದು ಈ ಪೈಕಿ 25 ಸಾವಿರ ಎಕರೆ ಭೂಮಿಯನ್ನು ಮರುಸ್ವಾಧೀನಪಡಿಸಿಕೊಳ್ಳಲಾಗಿದೆ. 1.51 ಲಕ್ಷ ಎಕರೆ ಭೂಮಿ ಸ್ವಾಧೀನಕ್ಕೆ ಪಡೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಮೀಸಲು, ರಕ್ಷಿತ, ವರ್ಗೀಕರಿಸದ, ಗ್ರಾಮಾಂತರ ಮತ್ತು ಖಾಸಗಿ ಅರಣ್ಯ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. 3 ಎಕರೆಗಿಂತ ಮೇಲ್ಪಟ್ಟು ಒತ್ತುವರಿ ಮಾಡಿಕೊಂಡಿರುವ ಒಟ್ಟು 24,274 ಪ್ರಕರಣಗಳು ದಾಖಲಾಗಿದ್ದು 89 ಸಾವಿರ ಎಕರೆ ಜಾಗ ಒತ್ತುವರಿಯಾಗಿದೆ. 4346 ಅತಿಕ್ರಮಣ ಪ್ರಕರಣಗಳಲ್ಲಿ 25 ಸಾವಿರ ಎಕರೆ ಭೂಮಿಯನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಶ ಪಡಿಸಿಕೊಳ್ಳಲಾಗಿದೆ. 19 ಸಾವಿರ ಪ್ರಕರಣಗಳಲ್ಲಿ 63 ಸಾವಿರ ಎಕರೆ ಒತ್ತುವರಿಯಾಗಿರುವ ಭೂಮಿಯನ್ನು ಇನ್ನೂ ಸ್ವಾಧೀನಪಡಿಸಿಕೊಳ್ಳಬೇಕಿದೆ.

ಶಿವಮೊಗ್ಗ ಫಸ್ಟ್

ಅತಿ ಹೆಚ್ಚು ಅರಣ್ಯ ಭೂಮಿ ಶಿವಮೊಗ ಜಿಲ್ಲೆಯಲ್ಲಿ ಒತ್ತುವರಿಯಾಗಿದ್ದು ದೊಡ್ಡ ರೈತರು ನೂರಾರು ಹೆಕ್ಟೇರ್ ಒತ್ತುವರಿ ಮಾಡಿಕೊಂಡ ಉದಾಹರಣೆಗಳಿವೆ. ಒತ್ತುವರಿಯಲ್ಲಿ ಚಿಕ್ಕಮಗಳೂರು, ಉತ್ತರಕನ್ನಡ ಮತ್ತು ಕಲಬುರಗಿ ಜಿಲ್ಲೆಗಳು ನಂತರದ ಸ್ಥಾನದಲ್ಲಿವೆೆ. ಕಂದಾಯ, ಜಾನುವಾರು, ಗೋಮಾಳ, ಇನಾಂ ಭೂಮಿ ಸೇರಿ ಹಲವು ರೀತಿಯ ಒತ್ತುವರಿ ಪ್ರಕರಣಗಳು ವಿವಿಧ ಜಿಲ್ಲೆಗಳಲ್ಲಿ ದಾಖಲಾಗಿವೆ. ಇನ್ನು, ಉತ್ತರ ಕರ್ನಾಟಕ ಭಾಗದಲ್ಲಿ ಗಣಿಗಾರಿಕೆ ಹೆಸರಿನಲ್ಲಿ ಸಾವಿರಾರು ಎಕರೆ ಅರಣ್ಯ ಪ್ರದೇಶ ಲೂಟಿಯಾಗಿದೆ. ಈ ಕುರಿತು ರಾಜ್ಯ ಸರ್ಕಾರಕ್ಕೆ ಮಾಹಿತಿ ಇದ್ದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ.

ದೇಶದಲ್ಲಿ ಶೇ.21.5 ಅರಣ್ಯ

ದೇಶದಲ್ಲಿ ಒಟ್ಟು ಶೇಕಡ 33ರಷ್ಟು ಅರಣ್ಯ ಪ್ರದೇಶ ಇರಬೇಕಿತ್ತು, ಆದರೆ ಶೇ.21.5ರಷ್ಟು ಮಾತ್ರ ಇದೆ. ಪಶ್ಚಿಮಘಟ್ಟ ಹಾದುಹೋಗುವ ಪ್ರದೇಶದಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಕೇಂದ್ರ ಸರ್ಕಾರ ಈ ಹಿಂದೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.

ಖಾಲಿ ಇರುವ ಹುದ್ದೆಗಳು

ಅರಣ್ಯ ಇಲಾಖೆಯಲ್ಲಿ 9462 ಕಾರ್ಯನಿರ್ವಾಹಕ ಹುದ್ದೆಗಳು ಮಂಜೂರಾಗಿದ್ದು, 7141 ಹುದ್ದೆಗಳು ಭರ್ತಿಯಾದರೆ, 2321 ಹುದ್ದೆಗಳು ಖಾಲಿ ಇವೆ. ಅದೇ ರೀತಿ 2575 ಲಿಪಿಕ ಹುದ್ದೆಗಳು ಮಂಜೂರಾಗಿದ್ದು, 1945 ಹುದ್ದೆಗಳು ಭರ್ತಿಯಾದರೆ 630 ಹುದ್ದೆಗಳು ಖಾಲಿ ಇವೆ.

ಬೆಂಕಿಬಿದ್ದ ಪ್ರಕರಣ

ರಾಜ್ಯದ ಅರಣ್ಯ ಮತ್ತು ಕೃಷಿ ಭೂಮಿಯಲ್ಲಿ ಪ್ರಸಕ್ತ ವರ್ಷ ಅಗ್ನಿ ಅವಘಡಗಳು ಹೆಚ್ಚಿವೆ. ಬೆಂಕಿ ಬಿದ್ದ 440 ಪ್ರಕರಣಗಳು ದಾಖಲಾಗಿವೆ.

ತೆರವು ಕಾರ್ಯದಲ್ಲಿ ವಿವೇಕ ಬೇಕು

ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯ ಪ್ರಶಂಸನೀಯವಾದರೂ ಈ ಪ್ರಕ್ರಿಯೆ ಯಾವುದೇ ಪ್ರಜೆಯ ಜೀವನಾಧಾರವನ್ನು ಕಸಿಯುವಂತಿರಬಾರದು ಎಂಬುದು ಗಮನಾರ್ಹ. ಭೂಮಿಯಿಲ್ಲದ ಬಡವನೊಬ್ಬ ಅರಣ್ಯಭೂಮಿಯಲ್ಲಿ ಮನೆಕಟ್ಟಿಕೊಂಡು ಕೃಷಿ ಚಟುವಟಿಕೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರೆ ಆ ಭೂಮಿಯನ್ನು ಆತನ ಹೆಸರಿಗೆ ಮಾಡಿಕೊಡುವ ಉದಾರತೆಯನ್ನು ಸರ್ಕಾರ ತೋರಬೇಕಾಗುತ್ತದೆ. ಅದೇ ಹೊತ್ತಿಗೆ ಅಗತ್ಯಕ್ಕಿಂತ ಹತ್ತಾರುಪಟ್ಟು ಭೂಮಿ ಅತಿಕ್ರಮಿಸಿದ ವ್ಯಕ್ತಿ ಎಷ್ಟೇ ದೊಡ್ಡವನಾದರೂ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುವ ಛಾತಿ ತೋರಿಸಬೇಕಾಗುತ್ತದೆ. ಅರಣ್ಯಭೂಮಿ ಅವಲಂಬಿಸಿದ ಬಡವರು ಹಾಗೂ ಅರಣ್ಯ ಎರಡನ್ನೂ ಉಳಿಸುವ ವಿವೇಕ ಆಡಳಿತಕ್ಕೆ ಅಗತ್ಯವಾಗಿದೆ.

Leave a Reply

Your email address will not be published. Required fields are marked *

Back To Top