ಮಾ.14ರಂದು ಷಾ ಉಡುಪಿಗೆ

<ಮೋದಿ ವಿಜಯ ಸಂಕಲ್ಪ ಯಾತ್ರೆ>
ಉಡುಪಿ: ಲೋಕಸಭಾ ಚುನಾವಣೆ ಘೋಷಣೆಯಾಗುವ ಮೊದಲೇ ಕರಾವಳಿಯಲ್ಲೂ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದು, ರಾಜಕೀಯ ಪಕ್ಷಗಳು ಪ್ರಚಾರ ಸಭೆಗಳನ್ನು ರೂಪಿಸುತ್ತಿವೆ.

ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ರಾಷ್ಟ್ರೀಯ, ರಾಜ್ಯ ನಾಯಕರು ಕರಾವಳಿಗೆ ಒಂದು ಸುತ್ತು ಭೇಟಿ ನೀಡಿದ್ದಾರೆ, ಮುಂದುವರಿದ ಭಾಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕರಾವಳಿ ಪ್ರವಾಸಕ್ಕೂ ಸಿದ್ಧತೆ ನಡೆದಿದೆ.

ಈಗ ರಾಜ್ಯ ಬಿಜೆಪಿ ಆರಂಭಿಸಿರುವ ಮೋದಿ ವಿಜಯ ಸಂಕಲ್ಪ ಯಾತ್ರೆ ಹಿನ್ನೆಲೆಯಲ್ಲಿ ಮಾರ್ಚ್ 14ರಂದು ಉಡುಪಿ ಜಿಲ್ಲೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಆಗಮಿಸಲಿದ್ದಾರೆ. ಮಾ.13ರಂದು ಕೊಡಗಿನಲ್ಲಿ ವಿವಿಧ ಸಭೆಗಳಲ್ಲಿ ಭಾಗವಹಿಸಿ ಬಳಿಕ ಜಿಲ್ಲೆಗೆ ಆಗಮಿಸುವ ಅವರು, ನಾಲ್ಕು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶ, ಶಕ್ತಿಕೇಂದ್ರ ಪ್ರಮುಖರ ಸಭೆ, ವಿವಿಧ ಪ್ರಕೋಷ್ಠಗಳ ಸಂಚಾಲಕರ ಸಭೆ, ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಲಿದ್ದಾರೆ. ಆದರೆ ಬಹಿರಂಗ ಸಮಾವೇಶ ನಿಗದಿಯಾಗಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮಾರ್ಚ್ 14ರ ಅಮಿತ್ ಷಾ ಭೇಟಿಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಪ್ರವಾಸ ಸಾಧ್ಯತೆಗಳಿವೆ ಎಂಬ ಮಾಹಿತಿ ಇದೆ. ಇದು ಖಚಿತವಾಗಿಲ್ಲ.