ಮರವೂರು ಡ್ಯಾಂನಲ್ಲೂ ನೀರಿಲ್ಲ

>

ಭರತ್ ಶೆಟ್ಟಿಗಾರ್ ಮಂಗಳೂರು
ಬಹುಗ್ರಾಮ ಕುಡಿಯು ನೀರು ಯೋಜನೆಯಲ್ಲಿ ನಗರ ಹೊರವಲಯದ 8 ಗ್ರಾಪಂಗಳ 14 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅಣೆಕಟ್ಟಿನಲ್ಲಿಯೂ ನೀರು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದ್ದು, ಬರಿದಾಗುವ ಆತಂಕವುಂಟಾಗಿದೆ.
ಅಣೆಕಟ್ಟಿನಲ್ಲಿ 3.5 ಮೀ. ಎತ್ತರದವರೆಗೆ ನೀರು ಸಂಗ್ರಹ ಸಾಮರ್ಥ್ಯವಿದ್ದು, ಪ್ರಸ್ತುತ ಈ ಮಟ್ಟದಿಂದ ನೀರು ಕೆಳಗಿದೆ. 8 ಕಿ.ಮೀ ವರೆಗೆ 200 ಮೀ.ಅಗಲವಾಗಿ ನೀರು ನಿಂತಿದೆ. ನೀರಿನ ಒಳಹರಿವು ಸಂಪೂರ್ಣ ಸ್ಥಗಿತವಾಗಿದ್ದು, ದಡದಲ್ಲಿ ನಿಂತು ನೋಡಿದಾಗ ತಳ ಕಾಣಿಸುತ್ತದೆ. ಒಂದೆರಡು ಕಡೆ ನೀರಿನ ಮಧ್ಯದಲ್ಲಿ ದಿಬ್ಬ ಗೋಚರಿಸುತ್ತದೆ. 10-15 ದಿನದೊಳಗೆ ಜಿಲ್ಲೆಯಲ್ಲಿ ಮಳೆಯಾಗದಿದ್ದರೆ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆಯಿದೆ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು.

ಹೆಚ್ಚಾಗಿದೆ ನೀರಿನ ನಷ್ಟ: ನದಿ ಪಾತ್ರದಲ್ಲಿ ಕೃಷಿಕರು ಪಂಪ್‌ಸೆಟ್ ಅಳವಡಿಸಿ ನೀರು ತೆಗೆಯುತ್ತಿದ್ದಾರೆ. ಜತೆಗ ಬಿಸಿಲ ಶಾಖದಿಂದಾಗಿ ನೀರಿನ ಆವಿಯಾಗುವಿಕೆ ಪ್ರಮಾಣವೂ ಹೆಚ್ಚಾಗಿದೆ. ಅಣೆಕಟ್ಟಿನ ಸುತ್ತಮುತ್ತ ಇರುವುದು ಮರಳು ಜಾತಿಯ ಮಣ್ಣಾಗಿದ್ದು, ಇದು ನೀರನ್ನು ಎಳೆದುಕೊಳ್ಳುತ್ತದೆ. ಕಳೆದ ವರ್ಷ ನೀರಿನ ನಷ್ಟ ಶೇ.20ರಷ್ಟಿತ್ತು, ಈ ಬಾರಿ ಶೇ.30-40ರಷ್ಟು ಹೆಚ್ಚಾಗಿದೆ.

ರೇಷನಿಂಗ್ ನಿರ್ಧಾರ ಕೈಗೊಂಡಿಲ್ಲ: ತುಂಬೆ ಅಣೆಕಟ್ಟಿನಿಂದ ಮಂಗಳೂರು ನಗರಕ್ಕೆ ಪೂರೈಕೆಯಾಗುವ ನೀರನ್ನು ರೇಷನಿಂಗ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ಆದರೆ ಮರವೂರು ಡ್ಯಾಂನಿಂದ ಪ್ರತಿದಿನ ನೀರು ಪೂರೈಕೆ ಮಾಡಲಾಗುತ್ತಿದೆ. ಸದ್ಯಕ್ಕೆ ರೇಷನಿಂಗ್ ಮಾಡುವ ನಿರ್ಧಾರ ಕೈಗೊಂಡಿಲ್ಲ. ಮರವೂರು ಡ್ಯಾಂ ಮೇಲ್ಭಾಗದಲ್ಲಿರುವ ಅದ್ಯಪಾಡಿ ಅಣೆಕಟ್ಟಿನಲ್ಲಿಯೂ ಇದೇ ಪರಿಸ್ಥಿತಿಯಿದೆ. ಆದರೂ ನೀರಿಗೆ ಸಮಸ್ಯೆಯಾದರೆ ಅಲ್ಲಿ ಗೇಟ್ ಓಪನ್ ಮಾಡಿ ಸ್ವಲ್ಪ ನೀರು ಪಡೆಯಬಹುದು ಪ್ರಸ್ತುತ ಅಣೆಕಟ್ಟು ನಿರ್ಮಿಸಿದ ಸಂಸ್ಥೆಯೇ ನೀರು ಪೂರೈಕೆ, ನಿರ್ವಹಣೆಯ ಉಸ್ತುವಾರಿಯನ್ನೂ ವಹಿಸಿಕೊಂಡಿದೆ.

ದಿನಕ್ಕೆ 5 ಎಂಎಲ್‌ಡಿ ನೀರು ಪಂಪಿಂಗ್: ಅಣೆಕಟ್ಟಿನಿಂದ ದಿನಕ್ಕೆ 5 ಎಂಎಲ್‌ಡಿ (50 ಲಕ್ಷ ಲೀಟರ್) ನೀರನ್ನು ಪಂಪ್‌ಮಾಡಿ ಶುದ್ಧೀಕರಿಸಿ ಗ್ರಾಮಗಳಿಗೆ ಸರಬರಾಜು ಮಾಡಲಾಗುತ್ತದೆ. ಬಜ್ಪೆ ಸಿದ್ಧಾರ್ಥ ನಗರದಲ್ಲಿರುವ 3 ಲಕ್ಷ ಲೀ. ಸಾಮರ್ಥ್ಯದ ಟ್ಯಾಂಕನ್ನು ದಿನಕ್ಕೆ 4-5 ಸಲ ತುಂಬಿಸಲಾಗುತ್ತದೆ. ಬಜ್ಪೆ ಪೇಟೆಯಲ್ಲಿ 2 ಲಕ್ಷ ಲೀ. ಟ್ಯಾಂಕ್ ಇದ್ದು, ಅದಕ್ಕೆ 10 ಲಕ್ಷ ಲೀಟರ್ ಪ್ರತಿ ದಿನ ಪೂರೈಸಲಾಗುತ್ತದೆ. ಮೂಡುಶೆಡ್ಡೆಯಲ್ಲಿರುವ ಟ್ಯಾಂಕ್‌ನಲ್ಲಿ 4 ಲಕ್ಷ ಲೀಟರ್ ಪ್ರತಿ ದಿನ ತುಂಬಿಸಲಾಗುತ್ತದೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 11-12ರ ವರೆಗೂ ನೀರು ಪೂರೈಕೆ ಮಾಡಲಾಗುತ್ತದೆ. ಬಜ್ಪೆ, ಜೋಕಟ್ಟೆ, ಮರವೂರು, ಕೆಂಜಾರು, ಪೆರ್ಮುದೆ, ಕುತ್ತೆತ್ತೂರು, ಮೂಡುಶೆಡ್ಡೆ, ಪಡುಶೆಡ್ಡೆ, ತೆಂಕ ಎಕ್ಕಾರು, ಬಡಗ ಎಕ್ಕಾರು, ಬಾಳ, ಕಳವಾರು, ಸೂರಿಂಜೆ ಮತ್ತು ದೇಲಂತಬೆಟ್ಟು ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತದೆ.

ವಿದ್ಯುತ್ ಬಿಲ್ ಪಾವತಿಸದ ಗ್ರಾಪಂ: ನಿರಂತರ ನೀರು ಪೂರೈಕೆ ಮಾಡಿದರೂ ಪಂಚಾಯಿತಿಗಳು ವಿದ್ಯುತ್ ಬಿಲ್ ಪಾವತಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ನೀರು ಪಂಪಿಂಗ್‌ಗೆ ತಗಲುವ ಒಟ್ಟು ವಿದ್ಯುತ್ ಬಿಲ್‌ನ ಶೇ.35ರಷ್ಟನ್ನು 8 ಪಂಚಾಯಿತಿಗಳು ಸೇರಿ ಭರಿಸಬೇಕಾಗಿದೆ. ಉಳಿದ ಶೇ.65 ಮೊತ್ತವನ್ನು ಸರ್ಕಾರ ಭರಿಸುತ್ತದೆ. ಆದರೆ ಪ್ರಸ್ತುತ ಯಾವುದೇ ಪಂಚಾಯಿತಿಗಳು ನೀರಿನ ಬಿಲ್ ಪಾವತಿಸುತ್ತಿಲ್ಲ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಈ ಕುರಿತು ಹಲವು ನೋಟಿಸ್ ನೀಡಲಾಗಿದ್ದರೂ ಪಂಚಾಯಿತಿಗಳು ಸ್ಪಂದಿಸಿಲ್ಲ. ಹೀಗೆ ಮುಂದುವರಿದರೆ, ಮೆಸ್ಕಾಂನವರು ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಸಾಧ್ಯತೆಯಿದೆ ಎನ್ನುತ್ತಾರೆ ಅಧಿಕಾರಿಗಳು.

ಈ ಹಿಂದಿನ ವರ್ಷಗಳಲ್ಲಿ ನೀರಿಗೆ ಸಮಸ್ಯೆಯಾಗಿಲ್ಲ. ಆದರೆ ಈ ಬಾರಿ ನೀರು ಸ್ವಲ್ಪ ಕಡಿಮೆಯಾಗಿದ್ದು, ಮೇ 15ರವರೆಗೆ ನೀರಿಗೆ ತೊಂದರೆಯಾಗದು ಎನ್ನುವ ವಿಶ್ವಾಸವಿದ್ದು, ಈ ವೇಳೆ ಮಳೆಯೂ ಆರಂಭವಾದರೆ ಚಿಂತೆಯಿಲ್ಲ. ಸದ್ಯ ದಿನಕ್ಕೆ 18 ಗಂಟೆ ನಿರಂತರ ನೀರು ಪೂರೈಕೆ ನಡೆಯುತ್ತಿದೆ.
ಶಿವಸುಬ್ರಹ್ಮಣ್ಯ ಉಸ್ತುವಾರಿ ಸಂಸ್ಥೆ ಇಂಜಿನಿಯರ್

ನೀರು ಸಮಸ್ಯೆಗೆ ಪಾಲಿಕೆ ನಿರ್ಲಕ್ಷೃ ಕಾರಣ

>

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯಿತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇದರ ಗಂಭೀರತೆ ಅರಿತು ತುರ್ತುಕ್ರಮ ಕೈಗೊಳ್ಳಬೇಕೆಂದು ಮಾಜಿ ಕಾರ್ಪೋರೇಟರ್ ರೂಪಾ ಡಿ. ಬಂಗೇರ ಒತ್ತಾಯಿಸಿದ್ದಾರೆ.
ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು ಬರಗಾಲದ ಪರಿಸ್ಥಿತಿ ಎದುರಿಸುವಂತಾಗಿದೆ. ಇದಕ್ಕೆ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತದ ಬೇಜವಾಬ್ದಾರಿ ನೇರ ಕಾರಣ. ಮಳೆಗಾಲ ಮುಗಿಯುತ್ತಿದ್ದಂತೆ ಜಿಲ್ಲೆಯ ನದಿಗಳು ಬತ್ತುತ್ತಿರುವ ಬಗ್ಗೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಮುಂದೆ ಕುಡಿಯುವ ನೀರಿಗೆ ತೊಂದರೆಯಾಗಲಿದೆ ಎಂದು ಎಚ್ಚರಿಸಿದ್ದೆ. ಈ ಬಗ್ಗೆ ವೈಜ್ಞಾನಿಕ ಅಧ್ಯಯನದ ಅಗತ್ಯವಿದೆಯೆಂದು ಆಗ್ರಹಿಸಿದ್ದೆ. ಈ ಸಂದರ್ಭ ಗಂಭೀರತೆ ಪ್ರದರ್ಶಿಸದ ಆಡಳಿತ ಪಕ್ಷದವರು ಆಧ್ಯಯನ ನಡೆಸಲು ಪಾಲಿಕೆಯಲ್ಲಿ ವಿಜ್ಞಾನಿಗಳು ಇಲ್ಲ ಎಂದು ವ್ಯಂಗ್ಯವಾಗಿ ಉತ್ತರ ನೀಡಿದ್ದರು. ತುಂಬೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಸಂಗ್ರಹವಿದೆ, ಮೇ ಅಂತ್ಯದವರೆಗೆ ಏನೂ ತೊಂದರೆಯಿಲ್ಲ ಎಂದು ಉಸ್ತುವಾರಿ ಸಚಿವರಿಂದಲೂ ಹೇಳಿಕೆ ನೀಡುತ್ತಿದ್ದ ಕಾಂಗ್ರೆಸ್ ಆಡಳಿತ ಈಗ ಸಮಸ್ಯೆ ಗಂಭೀರವಾದಾಗ ಕೈ ಚೆಲ್ಲಿ ಕುಳಿತು ಸಾರ್ವಜನಿಕರ ಜೀವನದಲ್ಲಿ ಚೆಲ್ಲಾಟ ಆಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ನ್ಯಾಯಾಲಯದಲ್ಲಿ ದಾವೆ ಹೂಡಿ ಪಾಲಿಕೆಯ ಚುನಾವಣೆ ವಿಳಂಬಕ್ಕೆ ಕಾರಣವಾಗಿರುವ ಕಾಂಗ್ರೆಸ್ ಇಂದು ಸ್ಥಳೀಯ ಪ್ರತಿನಿಧಿಗಳಿಲ್ಲದೆ ಸಾರ್ವಜನಿಕರು ನೀರಿನ ಬವಣೆಯಿಂದ ಒದ್ದಾಡುವಂತಹ ಸ್ಥಿತಿ ಕಲ್ಪಿಸಿದೆ. ಪಾಲಿಕೆ ಆಡಳಿತಾಧಿಕಾರಿಗಳಾದ ಜಿಲ್ಲಾಧಿಕಾರಿ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಪರಿಹಾರೋಪಾಯ ರೂಪಿಸಿಕೊಳ್ಳಬೇಕೆಂದು ರೂಪಾ ಡಿ.ಬಂಗೇರ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ರೇಷನಿಂಗ್ ಸ್ಥಗಿತಗೊಳಿಸಿ ನಿರಂತರ ನೀರು

>

ವಿಜಯವಾಣಿ ಸುದ್ದಿಜಾಲ ಮಂಗಳೂರು
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರು ರೇಷನಿಂಗ್ ತಕ್ಷಣ ರದ್ದುಗೊಳಿಸಿ ತುಂಬೆ ಡ್ಯಾಂನಿಂದ ನಿರಂತರ ಪಂಪಿಂಗ್ ನಡೆಸಿ ನೀರು ಸಂಗ್ರಹವಿಟ್ಟುಕೊಂಡು ಕ್ರಮಬದ್ಧವಾಗಿ ವಿತರಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಡಳಿತಾಧಿಕಾರಿ ಅವರನ್ನು ಒತ್ತಾಯಿಸಿದೆ.
ಎರಡು ದಿನ ಪಂಪಿಂಗ್ ನಿಲ್ಲಿಸಿದರೆ ನಳ್ಳಿಯಲ್ಲಿ ಏರ್‌ಲಾಕ್ ಸೃಷ್ಟಿಯಾಗುವುದು ಮತ್ತು ಈ ಸಂದರ್ಭ ನಳ್ಳಿಯ ನಿರ್ವಾತ ಪ್ರದೇಶದಲ್ಲಿ ಗಾಳಿ ತುಂಬಿಕೊಳ್ಳುವುದು. ಪರಿಣಾಮ ಎರಡು ದಿನ ಪಂಪಿಂಗ್ ಬ್ರೇಕ್ ಬಳಿಕ ನಾಲ್ಕು ದಿನ ನೀರು ಒದಗಿಸುವ ವ್ಯವಸ್ಥೆ ಇದ್ದರೂ, ಶೇ.20 ಮನೆಗಳಿಗೆ ನೀರು ತಲುಪುವುದೇ ಇಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ ತಿಳಿಸಿದರು.
ಬೋಂದೆಲ್‌ನ ಕೆಲ ಪ್ರದೇಶಗಳಿಗೆ ನೀರು ತಲುಪದೆ ನಾಲ್ಕು ದಿನಗಳಾಯಿತು. ಕೆಲ ಅಧಿಕಾರಿಗಲು ಜಿಲ್ಲಾಧಿಕಾರಿಯವರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳದೆ ಹೋದರೆ ಮನಪಾ ವ್ಯಾಪ್ತಿಯ ಜನರೊಂದಿಗೆ ಮನಪಾ ಕಚೇರಿಗೆ ಮುತ್ತಿಗೆ ಹಾಕಬೇಕಾದೀತು ಮಾಜಿ ಮೇಯರ್ ಹರಿನಾಥ್ ಎಚ್ಚರಿಸಿದರು.
ಮಾಜಿ ಮೇಯರ್ ಮಹಾಬಲ ಮಾರ್ಲ, ಮನಪಾ ಸದಸ್ಯರಾದ ನವೀನ್ ಡಿ ಸೋಜ, ಲ್ಯಾನ್ಸಿಲಾಟ್ ಪಿಂಟೋ, ಜೆಸಿಂತಾ, ಮುಹಮ್ಮದ್ ಕುಂಜತ್ತಬೈಲ್, ಶಶಿಧರ ಹೆಗ್ಡೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *