ಪಾರ್ಕಿಂಗ್‌ನಿಂದ ಮರವಂತೆ ಕಡಲ ತೀರ ಕಣ್ಮರೆ

«ಹೈವೇ ಪಕ್ಕದಲ್ಲಿ ವಾಹನ ನಿಲುಗಡೆ ಪ್ರವಾಸಿಗರಿಗೆ ಕಿರಿಕಿರಿ * ಅಪಘಾತಕ್ಕೆ ಆಹ್ವಾನ ನೀಡುವ ವಾಹನಗಳ ಸಾಲು»

ಶ್ರೀಪತಿ ಹೆಗಡೆ ಹಕ್ಲಾಡಿ ಮರವಂತೆ
ಪ್ರಕೃತಿಯ ಸುಂದರ ಸೊಬಗನ್ನು ಸವಿಯಲು ತ್ರಾಸಿ ಮರವಂತೆ ಬೀಚ್‌ಗೆ ಬರುವ ಪ್ರವಾಸಿಗರು ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್‌ನಿಂದ ತೊಂದರೆ ಅನುಭವಿಸುವಂತಾಗಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸಿ ಅಪಘಾತಕ್ಕೆ ಆಹ್ವಾನ ನೀಡುತ್ತಿರುವುದಲ್ಲದೆ, ಪರಿಸರ ಮಾಲಿನ್ಯದ ಜತೆ ಇಡೀ ಕಡಲ ತೀರ ಅಪಾಯಕಾರಿ ವಲಯವಾಗಿ ಪರಿವರ್ತನೆಯಾಗಿದೆ!
ಒಂದು ಕಡೆ ಮರವಂತೆ ತ್ರಾಸಿ ಕಡಲ ತೀರ ಅಭಿವೃದ್ಧಿ ಹಿನ್ನೆಲೆಯಲ್ಲಿ ನಡೆಯುತ್ತಿರುವ ಕಾಮಗಾರಿ, ಸೀವಾಕ್ ನಿರ್ಮಾಣಕ್ಕೆ ಕಲ್ಲು ಹಾಕುವ ಕೆಲಸದ ನಿಮಿತ್ತ ಹತ್ತಾರು ವಾಹನಗಳ ಅಬ್ಬರದ ನಡುವೆ ಕಡಲ ತಡಿ ವಾಹನ ಸಾಂದ್ರತೆಯಿಂದ ನಲುಗುತ್ತಿದ್ದರೆ, ತ್ರಾಸಿ ತಿರುವಿನಿಂದ ಸೀ ಲ್ಯಾಂಡ್ ತನಕ ವಾಹನಗಳ ನಿಲುಗಡೆಗೆ ಇಡೀ ಕಡಲ ತೀರ ಮರೆಯಾಗಿ ಹೆದ್ದಾರಿ ಪ್ರಯಾಣ ಪ್ರಯಾಸದಾಯಕವಾಗಿದೆ.
ಮರವಂತೆ ಸಮುದ್ರ ಹಾಗೂ ನದಿ ನಡುವಿನ ಹೈವೇ ಪ್ರಯಾಣ, ಪಶ್ವಿಮ ಘಟ್ಟಗಳ ಸಾಲು, ಕುದ್ರುಗಳ ಸಮುಚ್ಚಯ, ಸೂರ್ಯಾಸ್ತಮಾನ ಕೂಡಾ ಬಹಳ ಪ್ರಸಿದ್ಧ. ರಜಾ ದಿನ, ಭಾನುವಾರ, ಶನಿವಾರದಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕವಾಗಿದ್ದು, ಪ್ರಕೃತಿ ಸೊಬಗು ವೀಕ್ಷಣೆಗೆ ವಾಹನ ನಿಲುಗಡೆ ಅಡ್ಡಿಯಾಗಿ ಪರಿಣಮಿಸಿದೆ.
ತಾಪಂ ಸಭೆಯಲ್ಲಿ ಮಾರ್ದನಿ: ಕುಂದಾಪುರ ತಾಲೂಕು ತ್ರೈಮಾಸಿಕ ಸಭೆಯಲ್ಲಿ ವಾಹನ ನಿಲುಗಡೆ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಸೂಚನೆ ನೀಡಿದ್ದರು. ಕುಂದಾಪುರ ಡಿಎಸ್ಪಿ ಬಿ.ಪಿ.ದಿನೇಶ್ ಕುಮಾರ್ ವಾಹನ ನಿಲುಗಡೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದರೂ ಕೂಡ ವಾಹನ ನಿಲುಗಡೆ ಅಬಾಧಿತವಾಗಿ ನಡೆಯುತ್ತಿದೆ.
ನಿಯಮ ಗಾಳಿಗೆ: ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಪಕ್ಕದಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಬಾರದು ಎಂಬ ನಿಯಮ ತ್ರಾಸಿ ಮರವಂತೆ ಕಡಲ ತೀರದಲ್ಲಿ ಗಾಳಿಗೆ ತೂರಲಾಗಿದೆ. ತ್ರಾಸಿ ಮತ್ತು ಸೀಲ್ಯಾಂಡ್ ಕ್ರಾಸ್ ಹಾಗೂ ಶ್ರೀ ವರಾಹ ಮಾರಸ್ವಾಮಿ ದೇವಸ್ಥಾನ ಬಳಿ ಅತೀ ಸೂಕ್ಷ್ಮ ಪ್ರದೇಶವಾಗಿದ್ದು, ಅಪಘಾತ ವಲಯ ಎಂದು ಗುರುತಿಸಿಕೊಂಡಿದೆ. ಈ ಪರಿಸರದಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲ. ಆದರೆ ನೂರಾರು ವಾಹನಗಳು ರಾತ್ರಿ ಹಾಗೂ ಹಗಲು ನಿಲ್ಲುವುದರಿಂದ ವಾಹನ ಚಾಲಕರ ದೇಹಬಾಧೆಗೆ ಕಡಲ ತೀರ ಮಲಿನವಾಗುತ್ತಿದೆ.

ಬೀಚ್ ಬಳಿ ಹೈವೇ ಬದಿ ನಿಂತ ವಾಹನಗಳು ಏಕಾಏಕಿ ರಸ್ತೆಗೆ ಬರುವುದು ಹಾಗೂ ನಿಲುಗಡೆಗಾಗಿ ರಸ್ತೆ ಪಕ್ಕಕ್ಕೆ ತೆರಳುವುದು ಅಪಘಾತಕ್ಕೆ ಕಾರಣವಾಗುತ್ತಿದೆ. ಕಡಲ ತೀರದಲ್ಲಿ ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಮಾಡುವ ಮೂಲಕ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು.

– ರಾಘವೇಂದ್ರ ಭಟ್, ಕೃಷಿಕ, ಭಟ್ರತೋಟ ಪಡುಕೋಣೆ.

ತ್ರಾಸಿ ಮರವಂತೆ ಸಮುದ್ರ ತೀರದಲ್ಲಿ ವಾಹನ ನಿಲುಗಡೆ ನಿಷೇಧಿಸುವ ಬಗ್ಗೆ ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದು, ವಾಹನ ನಿಲುಗಡೆ ಮಾಡದಂತೆ ತಾಕೀತು ಮಾಡಲಾಗಿದೆ. ಆದರೂ ಕಡಲ ಬದಿ ವಾಹನ ನಿಲ್ಲಿಸುವ ಬಗ್ಗೆ ಮತ್ತೊಂದು ಸಭೆ ನಡೆಸಿ, ವಾಹನ ನಿಲುಗಡೆ ನಿಷೇಧಿಸಿ ಅಲ್ಲಲ್ಲಿ ನಾಮಫಲಕ ಅಳವಡಿಸಲಾಗುತ್ತದೆ. ಕಡಲ ತೀರದಲ್ಲಿ ಫುಲ್ ಟೈಮ್ ಪೊಲೀಸ್ ವ್ಯವಸ್ಥೆ ಮಾಡುವುದು ಕಷ್ಟ ಸಾಧ್ಯವಾದ್ದರಿಂದ ಹೋಮ್ ಗಾರ್ಡ್ ನೇಮಕ ಮಾಡಿ ವಾಹನ ನಿಲ್ಲಿಸದಂತೆ ಕ್ರಮ ಕೈಗೊಳ್ಳಲಾಗುತ್ತದೆ.
– ಟಿ.ಭೂಬಾಲನ್, ಎಸಿ ಕುಂದಾಪುರ