ಅರ್ಧಕ್ಕೆ ಸ್ಥಗಿತಗೊಂಡ ಮರವಂತೆ ಬಂದರು ನಿರ್ಮಾಣ ಕಾಮಗಾರಿ

ಬಿ.ರಾಘವೇಂದ್ರ ಪೈ ಗಂಗೊಳ್ಳಿ
ರಾಜ್ಯದ ಮೊದಲ ‘ಯು’ ಶೇಪ್ ಮಾದರಿಯ ಮರವಂತೆಯ ಹೊರ ಬಂದರು ನಿರ್ಮಾಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡು ವರ್ಷ ಕಳೆದರೂ, ಇನ್ನೂ ಆರಂಭಗೊಂಡಿಲ್ಲ. ಸಾಂಪ್ರದಾಯಿಕ ಮೀನುಗಾರಿಕಾ ಬಂದರು ಎಂದೇ ಹೆಸರಾದ ಮರವಂತೆಯಲ್ಲಿ ಮೀನುಗಾರಿಕೆಗೆ ಸಮಸ್ಯೆಯಾಗುತ್ತಿದೆ. ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ 54 ಕೋಟಿ ರೂ. ವೆಚ್ಚದಲ್ಲಿ ಮರವಂತೆಯಲ್ಲಿ ಕೇರಳ ಮಾದರಿಯ ಹೊರ ಬಂದರು ನಿರ್ಮಾಣ ಕಾಮಗಾರಿ 6 ವರ್ಷಗಳ ಹಿಂದೆ ಕೈಗೆತ್ತಿಕೊಳ್ಳಲಾಗಿತ್ತು. ಇಲ್ಲಿನ 850 ಮೀ. ಉದ್ದದ ತೀರ ಪ್ರದೇಶದ ಪೈಕಿ ಉತ್ತರ ಭಾಗದಲ್ಲಿ 260 ಮೀ. ಉದ್ದ ಹಾಗೂ ದಕ್ಷಿಣ ಭಾಗದಲ್ಲಿ 355 ಮೀ. ಉದ್ದದ ಬ್ರೇಕ್‌ವಾಟರ್ (ಟೆಟ್ರಾಫಾಡ್)ನ ತಡೆಗೋಡೆ ನಿರ್ಮಿಸಿ, ಪ್ರವೇಶ ದ್ವಾರ ಮಾಡಿ, ಮೀನುಗಾರಿಕೆ ಮುಗಿಸಿ ಬರುವ ದೋಣಿ ಸುಲಭವಾಗಿ ಒಳ ಪ್ರವೇಶಿಸುವಂತೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ.

ಮರವಂತೆ ಹೊರ ಬಂದರಿನ ತಡೆಗೋಡೆ ನಿರ್ಮಾಣ ಕಾಮಗಾರಿ 2013ರಲ್ಲಿ ಆರಂಭಗೊಂಡಿದ್ದು, 2016ರಲ್ಲಿ ಮುಗಿಯಬೇಕಿತ್ತು. 2019 ಆದರೂ ಕೆಲಸ ಮುಗಿದೇ ಇಲ್ಲ. ತಮಿಳುನಾಡು ಮೂಲದ ಎನ್.ಎಸ್.ಕೆ. ಬಿಲ್ಡರ್ಸ್ ಸಂಸ್ಥೆಗೆ ಈ ಕಾಮಗಾರಿ ವಹಿಸಲಾಗಿದೆ. 54 ಕೋಟಿ ರೂ. ಪೈಕಿ 45 ಕೋಟಿ ರೂ. ಅನುದಾನ ಮಂಜೂರಾಗಿದೆ. 9 ಕೋಟಿ ರೂ. ವೆಚ್ಚದ ಕಾಮಗಾರಿ ಬಾಕಿಯಿದೆ. ಆದರೆ ವಿಳಂಬ ಕಾಮಗಾರಿಯಿಂದಾಗಿ ಈ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿದ್ದರಿಂದ ಸ್ಥಗಿತಗೊಂಡಿದೆ ಎನ್ನಲಾಗಿದೆ.

ಮೀನುಗಾರಿಕೆಗೆ ಸಮಸ್ಯೆ: ಮರವಂತೆ ಹೊರ ಬಂದರಿನ ಎರಡೂ ಭಾಗಗಳಲ್ಲೂ ಬ್ರೇಕ್‌ವಾಟರ್ ಕಾಮಗಾರಿ ಅಪೂರ್ಣವಾಗಿದೆ. ಈ ಅರೆಬರೆ ಕಾಮಗಾರಿಯಿಂದ ಮೀನುಗಾರಿಕೆಗೆ ಬಹಳಷ್ಟು ಸಮಸ್ಯೆಯಾಗುತ್ತಿದೆ. ಮೀನುಗಾರಿಕೆ ಮುಗಿಸಿ ಬರುವ ಮೀನುಗಾರರು ಮರಳಿನ ಮೇಲೆಯೇ ಮೀನುಗಳನ್ನು ಇಳಿಸಬೇಕಾದ ಸ್ಥಿತಿಯಿದೆ. ಇನ್ನು ಮೀನು ಸಾಗಾಟ ವಾಹನಗಳು, ಮೀನುಗಾರರ ವಾಹನಗಳಿಗೆ ಪಾರ್ಕಿಂಗ್‌ಗೆ ಸರಿಯಾದ ವ್ಯವಸ್ಥೆಯಿಲ್ಲ. ಇಲ್ಲಿಗೆ ಸಂಪರ್ಕಿಸುವ ಮೀನುಗಾರಿಕಾ ರಸ್ತೆಯೂ ಸಂಪೂರ್ಣ ಹದಗೆಟ್ಟು ಹೋಗಿದೆ.

ಏನಿದು ಹೊರ ಬಂದರು?: ಇತರ ಮೀನುಗಾರಿಕಾ ಬಂದರು ಹಾಗೂ ಇಲ್ಲಿಗೂ ಇರುವ ಪ್ರಮುಖ ವ್ಯತ್ಯಾಸವೆಂದರೆ, ಬೇರೆಲ್ಲವೂ ಸಹಜ ಬಂದರು ಆಗಿದ್ದರೆ, ಇದು ಕೃತಕವಾಗಿ ನಿರ್ಮಿಸಿದ ಬಂದರಾಗಿದೆ. ಅಂದರೆ ಇಲ್ಲಿನ ಮೀನುಗಾರರು ಬೇರೆ ಬಂದರನ್ನು ಅವಲಂಬಿಸುವ ಬದಲು ತಮ್ಮ ಅನುಕೂಲಕ್ಕಾಗಿ ಸ್ವತಃ ಕೃತಕವಾಗಿ ನಿರ್ಮಿಸಿಕೊಂಡ ಬಂದರಾಗಿದೆ. ನಾಡದೋಣಿ ಮೀನುಗಾರಿಕೆ ಇಲ್ಲಿನ ವೈಶಿಷ್ಟ್ಯ. 300ಕ್ಕೂ ಹೆಚ್ಚು ನಾಡದೋಣಿಗಳಿದ್ದು, ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಮೀನುಗಾರರು ಇಲ್ಲಿದ್ದಾರೆ. ಇದಲ್ಲದೆ ಬೇರೆ ಕಡೆಗಳ ಮೀನುಗಾರಿಕೆ ದೋಣಿಗಳು ಇಲ್ಲಿಗೆ ಬರುತ್ತವೆ. ಕಾಮಗಾರಿ ಆರಂಭಗೊಂಡು ಆರು ವರ್ಷ ಕಳೆದರೂ ಇನ್ನೂ ಒಂದು ಹಂತ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಇದರಿಂದ ಮೀನುಗಾರಿಕೆಗೆ ಸಮಸ್ಯೆಯಾಗುತ್ತಿದ್ದು, ಬಂದರು ಕಾಮಗಾರಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕೆಂದು ಮೀನುಗಾರರು ಒತ್ತಾಯಿಸಿದ್ದಾರೆ.

ಬಾಕಿ ಇರುವ ಕಾಮಗಾರಿಯನ್ನು ಹಿಂದೆ ವಹಿಸಿಕೊಂಡ ಸಂಸ್ಥೆಯಿಂದಲೇ ಮಾಡಿಸಬೇಕೇ ಅಥವಾ ಹೊಸ ಸಂಸ್ಥೆಯಿಂದ ಮಾಡಿಸಬೇಕೇ ಎಂಬ ಬಗ್ಗೆ ಶೀಘ್ರ ನಿರ್ಧಾರ ಕೈಗೊಂಡು, ಕಾಮಗಾರಿ ಪೂರ್ಣಗೊಳಿಸಲಾಗುವುದು. ಅದಲ್ಲದೆ ಅಂದಾಜು 350 ಮೀ. ಬ್ರೇಕ್‌ವಾಟರ್ ನಿರ್ಮಾಣ ಸಂಬಂಧ ಎರಡನೇ ಹಂತದ ಯೋಜನೆಗೆ ಸರ್ವೇ ನಡೆಸಲಾಗಿದೆ. ಯೋಜನೆ ಸಿದ್ಧಪಡಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
ಕ್ಸೇವಿಯರ್ ಡಯಾಸ್, ಬಂದರು ಮತ್ತು ಮೀನುಗಾರಿಕಾ ಇಲಾಖೆ ಸಹಾಯಕ ಇಂಜಿನಿಯರ್ 

Leave a Reply

Your email address will not be published. Required fields are marked *