ಮರಳಿ ದಡ ಸೇರಿದ ಬೋಟ್​ಗಳು

ಹೊನ್ನಾವರ/ಭಟ್ಕಳ: ವಾಯುಭಾರ ಕುಸಿತ ಹಿನ್ನೆಲೆ ಹೊನ್ನಾವರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್​ಗಳು ಶುಕ್ರವಾರ ಸಂಜೆ ಸ್ವ- ಸ್ಥಾನಕ್ಕೆ ವಾಪಾಸಾಗಿವೆ. ಶನಿವಾರದಿಂದ ಮೂರು ದಿನಗಳ ಕಾಲ ಕಡ್ಡಾಯವಾಗಿ ಮೀನುಗಾರಿಕೆಗೆ ತೆರಳದಿರಲು ಬೋಟ್ ಮಾಲೀಕರು ನಿರ್ಧರಿಸಿದ್ದಾರೆ. ಭಟ್ಕಳದ ಮೀನುಗಾರರು ವಾತಾವರಣವನ್ನು ನೋಡಿ ಮುಂದಿನ ತಿರ್ವನ ಕೈಗೊಳ್ಳಲಾಗುವುದು ಎಂದಿದ್ದಾರೆ.

ಕಳೆದೆರಡು ದಿನಗಳಿಂದ ಉಂಟಾಗುತ್ತಿರುವ ವಿಪರೀತ ಮಳೆ- ಗಾಳಿಯಿಂದಾಗಿ ಮೀನುಗಾರಿಕೆ ನಡೆಸಲು ಕಷ್ಟವಾಗಿದೆ. ಕರಾವಳಿ ಭಾಗದಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಹೊನ್ನಾವರ ಕಾಸರಕೋಡದ ಟೊಂಕಾ ಮತ್ತು ಶರಾವತಿ ನದಿ ದಂಡೆಯಲ್ಲಿನ ಬಂದರು ಪ್ರದೇಶಗಳಲ್ಲಿನ 500ಕ್ಕೂ ಹೆಚ್ಚು ಬೋಟ್​ಗಳು ಶನಿವಾರ ಕಾರ್ಯಚಟುವಟಿಕೆ ಸ್ಥಗಿತಗೊಳಿಸಲಿವೆ.

ತಾಲೂಕು ವ್ಯಾಪ್ತಿಯ ಪಾವಿನಕುರ್ವಾ, ರ್ಕ, ಟೊಂಕಾ ಹಾಗೂ ಮಂಕಿ ಸಮುದ್ರ ತೀರ ಪ್ರದೇಶಗಳಲ್ಲಿನ ಬೋಟ್ ಹಾಗೂ ನಾಡದೋಣಿಗಳು ಶುಕ್ರವಾರ ಮೀನುಗಾರಿಕೆ ನಡೆಸಿಲ್ಲ. ಸಮುದ್ರದ ನೀರಿನಮಟ್ಟ ಜಾಸ್ತಿಯಾಗಿದ್ದು, ಕೆಲ ತೀರ ಪ್ರದೇಶಗಳಲ್ಲಿ ಅಲೆಗಳ ಏರಿಳಿತ ಹೆಚ್ಚಾಗಿರುವುದು ಕಂಡುಬಂತು.

ನೀರಿಗೆ ಇಳಿಯದಂತೆ ಸೂಚನೆ: ಮೀನುಗಾರರು ಅ.9ರವರೆಗೆ ಕಡಲಿಗಿಳಿಯಬಾರದು ಎಂದು ಕರಾವಳಿ ಕಾವಲು ಸೂಚನೆ ನೀಡಿತ್ತು. ಆದರೆ, ಭಟ್ಕಳ ತಾಲೂಕಿನ ಕಡಲ ತೀರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಶುಕ್ರವಾರ ರಾತ್ರಿ ಸ್ಥಿತಿಯನ್ನು ಅವಲೋಕಿಸಲಾಗುವುದು. ನಂತರ ಮೀನುಗಾರಿಕೆಗೆ ತೆರಳಬೇಕೋ ಬೇಡವೋ ಎನ್ನುವುದು ನಿರ್ಧರಿಸುತ್ತೇವೆ. ಫರ್ಸಿನ್ ಮತ್ತು ಫಿಶಿಂಗ್ ಬೋಟುಗಳು ಮೀನುಗಾರಿಕೆಗೆ ತೆರಳಿದರು ದಡದಿಂದ ಹತ್ತಿರವಿರುವ ನೇತ್ರಾಣಿ ಗುಡ್ಡದ ಬಳಿಯಲ್ಲಿ ಇರುತ್ತವೆ. ಈ ವೇಳೆ ಒಂದು ವೇಳೆ ವಾತವರಣದಲ್ಲಿ ಬದಲಾವಣೆ ಕಂಡುಬಂದರೆ ಕೂಡಲೆ ದಡಕ್ಕೆ ಬರಲು ಅವಕಾಶವಿದೆ. ಆದರೆ, ಗಿಲ್​ನೆಟ್ ಬೋಟುಗಳು ಆಳ ಸಮುದ್ರದಲ್ಲಿ ಇರುವುದರಿಂದ ಅವರಿಗೆ ಈ ಅವಕಾಶವಿಲ್ಲ. ಹಾಗಾಗಿ ಅವರಿಗೆ ಕಡಲಿಗಿಳಿಯುವುದನ್ನು ಮಂಗಳೂರಿನಲ್ಲಿ ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಫರ್ಸಿನ್ ಬೋಟ್ ಸಂಘದ ಕಾರ್ಯದರ್ಶಿ ವೆಂಕಟ್ರಮಣ ಮೊಗೇರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಉತ್ತರ ಕನ್ನಡದಲ್ಲಿ ಮಳೆ: ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಹೊನ್ನಾವರ, ಕಾರವಾರ ಹಾಗೂ ಭಟ್ಕಳದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಘಟ್ಟದ ಮೇಲಿನ ತಾಲೂಕುಗಳಲ್ಲೂ ಮಳೆಯಾಗಿದೆ. ಸದ್ಯ ಕಡಲು ಶಾಂತವಾಗಿದ್ದು ಪ್ರಕ್ಷುಬ್ಧ ಆಗಬಹುದು ಎಂಬ ಮಾಹಿತಿಯನ್ನು ಹವಾಮಾನ ಇಲಾಖೆಯವರು ನೀಡಿದ್ದಾರೆ.