ನವಾಡ: ಬಿಹಾರದ ನವಾಡ ಜಿಲ್ಲೆಯಲ್ಲಿ ಮಾವೋವಾದಿಗಳ ಆರ್ಭಟಕ್ಕೆ ಕಟ್ಟಡ ಕಾರ್ಮಿಕರು ನಲುಗಿ ಹೋಗಿದ್ದಾರೆ. ನವಾಡ ಜಿಲ್ಲೆಯ ಬಕಸೌತಿ ಗ್ರಾಮದ ಸಮೀಪ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಮೇಲೆ ಭಾನುವಾರ ತಡರಾತ್ರಿ ಹಲ್ಲೆ ನಡೆಸಿದ ನಕ್ಸಲರು ವಾಹನಗಳಿಗೆ ಬೆಂಕಿ ಹೆಚ್ಚಿ ಹೋಗಿದ್ದಾರೆ.
ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, 30-40 ಸದಸ್ಯರಿದ್ದ ಮಾವೋವಾದಿಗಳ ಗುಂಪು ಕಟ್ಟಡ ಕಾರ್ಮಿಕರಿದ್ದ ಸ್ಥಳಕ್ಕೆ ಭಾನುವಾರ ತಡರಾತ್ರಿ ಆಗಮಿಸಿದೆ. ಅಲ್ಲಿದ್ದ 17 ಕಾರ್ಮಿಕರನ್ನು ಕೈಗಳನ್ನು ಕಟ್ಟಿ ಸಮೀಪದ ನದಿ ತೀರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ನಿರ್ಮಾಣ ಹಂತದ ಸೇತುವೆ ಸಮೀಪ ಅವರನ್ನು ಕಟ್ಟಿ ಹಾಕಿ ಮನಸೋ ಇಚ್ಛೆ ಥಳಿಸಿದ್ದಾರೆ. ಬಳಿಕ ಒಂದು ಪಿಕ್ ಅಪ್ ವ್ಯಾನ್ ಮತ್ತು ಜೆಸಿಬಿಗೆ ಬೆಂಕಿ ಹಚ್ಚಿದ್ದಾರೆ.
ಇಷ್ಟಾದ ಬಳಿಕ ಹಿಂದಿರುಗುವ ವೇಳೆ ಕಾರ್ಮಿಕ ಬಳಿ ಇದ್ದ ಮೊಬೈಲ್ಗಳನ್ನು, ಹಣ ಮತ್ತು ಇತರೆ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ಈ ರೀತಿ ವಾಪಸಾಗುವ ವೇಳೆ ಅವರು ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ವಿಜಯದ ಕೇಕೆ ಹಾಕಿ ಹೋಗಿದ್ದಾರೆ.
ಗಾಯಗೊಂಡಿರುವ ಕಾರ್ಮಿಕರನ್ನು ಗೋವಿಂದಪುರ ಸಮುದಾಯ ಆರೋಗ್ಯಕೇಂದ್ರಕ್ಕೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿಯ ಉದ್ದೇಶ ಏನು ಎಂಬುದು ಇನ್ನೂ ಬಹಿರಂಗವಾಗಿಲ್ಲ. (ಏಜೆನ್ಸೀಸ್)