ಕಾಸರಗೋಡು: ಕುಖ್ಯಾತ ನಕ್ಸಲ್ ಮುಖಂಡ ಸೋಮನ್‌ನನ್ನು ಭಯೋತ್ಪಾದನಾ ನಿಗ್ರಹದಳ ಶೋರ್ನೂರ್ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದೆ. ವಯನಾಡ್ ಜಿಲ್ಲೆಯ ಕಲ್ಪೆಟ್ಟ ನಿವಾಸಿಯಾಗಿರುವ ಸೋಮನ್ ‘ಮಾವೋಯಿಸ್ಟ್ ನಾಟ್ಟುಕಾಣಿ’ ದಳದ ಕಮಾಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದನು.
ಭಯೋತ್ಪಾದನಾ ನಿಗ್ರಹ ದಳ ಕಾರ್ಯಾಚರಣೆ
ಪೊಲೀಸರ ಮೇಲೆ ಹಲ್ಲೆ ಸೇರಿದಂತೆ ಹಲವು ಕೇಸುಗಳು ಆತನ ಮೇಲಿದ್ದು, ಪೊಲೀಸ್, ನಕ್ಸಲ್ ನಿಗ್ರಹದಳ ಹಾಗೂ ಭಯೋತ್ಪಾದನಾ ನಿಗ್ರಹದಳ ಆತನ ಚಲನವಲನದ ಮೇಲೆ ಕಣ್ಣಿಟ್ಟಿತ್ತು. ವಾರದ ಹಿಂದೆಯಷ್ಟೇ ನಕ್ಸಲ್ ಮುಖಂಡ ತೃಶ್ಯೂರ್ ಇವನ್ನೂರ್ ಪಡಿಞೌರತ್ತಲ ನಿವಾಸಿ ಮನೋಜ್ ಎಂಬಾತನನ್ನು ಎರ್ನಾಕುಳಂ ಸೌತ್ ರೈಲ್ವೆ ನಿಲ್ದಾಣ ಬಳಿ ಬಂಧಿಸಲಾಗಿತ್ತು. ಆತನ ವಿರುದ್ಧ 14 ಯುಎಪಿಎ ಪ್ರಕರಣಗಳಿದ್ದು, ವಯನಾಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆತನ ವಿರುದ್ಧ ಬಂಧನದ ವಾರಂಟ್ ಜಾರಿಗೊಳಿಸಿದ್ದರು. ಎರ್ನಾಕುಳಂ ಬ್ರಹ್ಮಪುರಕ್ಕೆ ಆಗಮಿಸಿ, ಅಲ್ಲಿಂದ ತನ್ನ ಕೆಲವು ಸಹಚರರಿಂದ ಹಣ ಪಡೆದು ವಾಪಸಾಗುವ ಸಂದರ್ಭ ಎರ್ನಾಕುಳಂ ರೈಲ್ವೆ ನಿಲ್ದಾಣ ಬಳಿಯಿಂದ ಆತನನ್ನು ಸೆರೆಹಿಡಿಯಲಾಗಿತ್ತು. ಈತ ಸೋಮನ್ ಗುಂಪಿನಲ್ಲಿ ಸುತ್ತಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು.
ಇತ್ತೀಚೆಗೆ ಆರಳಂ ಕೃಷಿ ವಿಭಾಗದಲ್ಲಿ ನಕ್ಸಲ್ ಮುಖಂಡರಾದ, ಮಲಪ್ಪುರಂ ನಿವಾಸಿ ಮೊಯ್ದೀನ್, ತಮಿಳುನಾಡಿನ ಸಂತೋಷ್, ಮನೋಜ್ ಎಂಬುವರ ಜತೆ ಸೋಮನ್ ತಿರುಗಾಡುತ್ತಿದ್ದ ಮಾಹಿತಿ ಎಟಿಎಸ್‌ಗೆ ಲಭಿಸಿತ್ತು.