ತಾಂತ್ರಿಕ ದೋಷ, ಬಹಿಷ್ಕಾರದ ನಡುವೆ ಶಾಂತಿಯುತ ಮತದಾನ

ಚಾಮರಾಜನಗರ: ಜಿಲ್ಲೆಯ ಕೆಲವೆಡೆ ವಿದ್ಯುನ್ಮಾನ ಮತಯಂತ್ರ ಕೆಲಕಾಲ ಕೈ ಕೊಟ್ಟಿದ್ದು ಮತ್ತು 2 ಗ್ರಾಮಗಳಲ್ಲಿ ಮತದಾನ ಬಹಿಷ್ಕರಿಸಿದ್ದನ್ನು ಹೊರತುಪಡಿಸಿದರೆ ಮತದಾನ ಬಹುತೇಕ ಶಾಂತಿಯುತವಾಗಿ ಮುಕ್ತಾಯವಾಯಿತು.

ಯುವಕರು, ವಯಸ್ಕರು, ಅಂಗವಿಕಲರು ಹಾಗೂ ಇತರರು ಸ್ವಯಂ ಪ್ರೇರಣೆಯಿಂದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಗಿರಿಜನರು ಸಾಂಪ್ರದಾಯಿಕ ಧಿರಿಸಿನಲ್ಲಿ ಮತಗಟ್ಟೆಗೆ ಆಗಮಿಸಿ ಮತ್ತು ವೃದ್ಧರು ಸಂಬಂಧಿಕರ ಜತೆ ತೆರಳಿ ಮತದಾನ ಮಾಡಿದರು.

ಬೆಳಗ್ಗೆ 6 ಗಂಟೆಗೆ ಮತಗಟ್ಟೆಗಳಿಗೆ ಆಗಮಿಸಿದ ಪಕ್ಷಗಳ ಪೋಲಿಂಗ್ ಏಜೆಂಟ್‌ಗಳ ಸಮ್ಮುಖದಲ್ಲಿ ಮತಗಟ್ಟೆ ಅಧಿಕಾರಿಗಳು ಇವಿಎಂ ಮತಯಂತ್ರ ಹಾಗೂ ವಿವಿ ಪ್ಯಾಟ್‌ಗಳ ರಿಹರ್ಸಲ್ ನಡೆಸಿದರು. ನಂತರ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಯಿತು.

ಸುಮಾರು 9 ಗಂಟೆವರೆಗೆ ಮತದಾನ ವಿಳಂಬಗತಿಯಲ್ಲಿ ಸಾಗಿತು. ನಂತರ ಮಧ್ಯಾಹ್ನ 12 ಗಂಟೆವರೆಗೆ ಬಿರುಸಾಗಿ ನಡೆದು, ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಬಿಸಿಲಿನ ತಾಪ ಹೆಚ್ಚಾದ್ದರಿಂದ ಮಧ್ಯಾಹ್ನ 3 ಗಂಟೆವರೆಗೆ ನಿಧಾನಗತಿಯಲ್ಲಿ ನಡೆದ ಮತದಾನವು ಸಂಜೆ 4 ರಿಂದ 6 ಗಂಟೆವರೆಗೆ ಬಿರುಸಿನಿಂದ ಕೂಡಿತ್ತು. ಈ ವೇಳೆ ಸಂಜೆಯಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತ ಚಲಾಯಿಸಿದರು.

ಬೆಳಗ್ಗೆ 9 ಗಂಟೆ ವೇಳೆಗೆ ಜಿಲ್ಲೆಯಲ್ಲಿ ಶೇ.10.18 ರಷ್ಟು ಮತದಾನವಾಗಿತ್ತು. 11 ಗಂಟೆಗೆ ಶೇ.17.57 ರಷ್ಟು ಮತದಾನವಾಗಿ ಏರಿಕೆ ಕಂಡಿತು. 1 ಗಂಟೆಗೆ ಶೇ.32.95 ರಷ್ಟು, 3 ಗಂಟೆ ವೇಳೆಗೆ ಶೇ.50.22ರಷ್ಟು, ಸಂಜೆ 5 ಗಂಟೆ ತನಕ 66.53 ರಷ್ಟು ಮತದಾನವಾಗಿತ್ತು.

ಗುಂಡ್ಲುಪೇಟೆ ಕ್ಷೇತ್ರದ ಚಿಕ್ಕತುಪ್ಪೂರು, ಕಗ್ಗಳ, ಕೆಲಸೀಪುರ, ತೆರಕಣಾಂಬಿ, ಶಿಂಡನಪುರ, ಕೊಳ್ಳೇಗಾಲ ಪಟ್ಟಣದ ಬಿಎಂಎಚ್‌ಪಿ ಶಾಲೆ, ಆರ್‌ಎಂಸಿ, ನರೀಪುರ, ಯಳಂದೂರು ತಾಲೂಕಿನ ಉಪ್ಪಿನ ಮೋಳೆ, ಹನೂರು ಕ್ಷೇತ್ರದ ದೊಡ್ಡಿಂದುವಾಡಿ ಮತಗಟ್ಟೆಗಳಲ್ಲಿದ್ದ ಮತಯಂತ್ರಗಳು ಬೆಳಗ್ಗೆ ಕೈಕೊಟ್ಟಿದ್ದರಿಂದ ಮತದಾನ ಅರ್ಧ ಗಂಟೆ ಕಾಲ ವಿಳಂಬವಾಯಿತು. ಹಾಜರಿದ್ದ ಬಿಎಲ್‌ಒಗಳು ಈ ವಿಚಾರವನ್ನು ತಂತ್ರಜ್ಞರ ಗಮನಕ್ಕೆ ತಂದು ಅಡೆತಡೆಯನ್ನು ನಿವಾರಿಸಿ ಮತದಾನಕ್ಕೆ ಅನುವು ಮಾಡಿಕೊಟ್ಟರು.

ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಿಲ್ಲ ಎಂದು ಆರೋಪಿಸಿ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಗ್ರಾಮವಾದ ದೊಡ್ಡಾಣೆ ಗ್ರಾಮಸ್ಥರು ಮತದಾನದಿಂದ ಹೊರಗುಳಿದರು. ಸುವರ್ಣಾವತಿ ಹಳೇ ಅಚ್ಚು ಕಟ್ಟು ಪ್ರದೇಶಕ್ಕೆ ನೀರು ಹರಿಸಲಿಲ್ಲ ಎಂದು ಆರೋಪಿಸಿ ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದ ಅಚ್ಚುಕಟ್ಟುದಾರರು ಮತದಾನ ಬಹಿಷ್ಕರಿಸಿದ್ದರು.

ವೃದ್ಧರು, ಅಂಗವಿಕಲರು ತಮ್ಮ ಸಂಬಂಧಿಕರ ಸಹಾಯದಿಂದ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಿದರು. ಅಂಧ ಮತದಾರರು ಸಂಬಂಧಿಕರ ಸಹಾಯ ಪಡೆದು ಮತ ಚಲಾಯಿಸಿದರು. ಕೆಲವು ಮತಗಟ್ಟೆಗಳಲ್ಲಿ ವೃದ್ಧರು, ಅಂಗವಿಕಲರನ್ನು ಗಾಲಿಕುರ್ಚಿಯಲ್ಲಿ ಕರೆದೊಯ್ದು ಮತ ಚಲಾಯಿಸಲಾಯಿತು.
ಬಿಳಿಗಿರಿರಂಗನಬೆಟ್ಟ ಮತ್ತು ಬಂಡೀಪುರ ಹುಲಿ ಸಂರಕ್ಷಿತಾರಣ್ಯಗಳು, ಮಲೆಮಹದೇಶ್ವರ ವನ್ಯಜೀವಿಧಾಮಗಳಲ್ಲಿರುವ ಗಿರಿಜನರು, ಲಂಬಾಣಿಗಳು, ಇತರರು ಜೀಪು ಮತ್ತು ಆಟೋಗಳಲ್ಲಿ ಮತಗಟ್ಟೆಗಳಿಗೆ ಆಗಮಿಸುತ್ತಿದ್ದರು. ಗಡಿಗ್ರಾಮದ ದೊಡ್ಡಮೂಡಹಳ್ಳಿ, ಪುಣಜನೂರು, ಬಂದೀಗೌಡನಹಳ್ಳಿ, ಬಿಸಲವಾಡಿ ಗ್ರಾಮಗಳಲ್ಲಿ ಮತದಾನ ಬಿರುಸಾಗಿತ್ತು.

ಬೆಂಗಳೂರು, ಮೈಸೂರು ಹಾಗೂ ಇತರ ಕಡೆಗಳಲ್ಲಿ ನೌಕರಿಯಲ್ಲಿರುವ ಹಲವರು ತಮ್ಮ ಸ್ವಗ್ರಾಮಗಳಿಗೆ ಕುಟುಂಬ ಸಮೇತ ಆಗಮಿಸಿ ಮತ ಚಲಾಯಿಸಿದರು.

ಮನವೊಲಿಕೆಗೆ ಕೊನೆ ಯತ್ನ: ಮತದಾನ ಪ್ರಕ್ರಿಯೆ ಆರಂಭಗೊಂಡ ನಂತರ ಮತಗಟ್ಟೆಗಳಿಗೆ ಆಗಮಿಸುತ್ತಿದ್ದ ಮತದಾರರನ್ನು ಆಯಾಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಮನವೊಲಿಸುವಲ್ಲಿ ನಿರತರಾಗಿದ್ದರು. ಮತಗಟ್ಟೆಗಳಿಂದ 100 ಮೀ. ದೂರದಲ್ಲಿಯೇ ನಿಂತು ತಮ್ಮ ಪಕ್ಷಗಳಿಗೆ ಮತ ನೀಡುವಂತೆ ಮುಖಂಡರು ಮನವಿ ಮಾಡುತ್ತಿದುದ್ದು ಕಂಡುಬಂತು. ಇದೇ ಮೊದಲ ಬಾರಿ ಮತ ಹಾಕಲು ಹೊಸ ಮತದಾರರು ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಉತ್ಸಾಹದಿಂದ ಮತಗಟ್ಟೆಗೆ ಬಂದಿದ್ದರು. ಆದರೆ ಹಲವರಿಗೆ ಮತ ಚಲಾವಣೆ ಬಗ್ಗೆ ಅರಿವಿರಲಿಲ್ಲ. ಅಂತಹವರಿಗೆ ಮತಗಟ್ಟೆ ಅಧಿಕಾರಿಗಳು ಮಾರ್ಗದರ್ಶನ ನೀಡಿ ಮತದಾನಕ್ಕೆ ಸಹಕರಿಸಿದರು.

ಮತಗಟ್ಟೆಗಳಿಗೆ ಬಿಗಿ ಭದ್ರತೆ: ಜಿಲ್ಲೆಯ 4 ಕ್ಷೇತ್ರಗಳ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಆಯೋಜಿಸಲಾಗಿತ್ತು. ಸೂಕ್ಷ್ಮ ಮತಗಟ್ಟೆಗಳಿಗೆ ಬಿಎಸ್‌ಎಫ್ ಯೋಧರನ್ನು ನಿಯೋಜಿಸಲಾಗಿತ್ತು. ಮತಗಟ್ಟೆಗಳಿಂದ 100 ಮೀ. ಒಳಗೆ ಕಾರ್ಯಕರ್ತರು ಗುಂಪು ಸೇರುವುದನ್ನು ನಿಷೇಧಿಸಲಾಗಿತ್ತು. ಪ್ರತಿ ಬೂತ್‌ಗಳಲ್ಲೂ ಪೊಲೀಸ್ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ಕಾರ್ಯನಿರ್ವಹಿಸಿದರು.

ಆಟೋ, ಬೈಕ್‌ಗಳಲ್ಲಿ ಕರೆತಂದರು : ಪಂಪ್‌ಸೆಟ್ ಜಮೀನಿನಲ್ಲಿದ್ದವರು ಮತ್ತು ಕೂಲಿ ಕೆಲಸಕ್ಕೆ ತೆರಳಿದ್ದವರನ್ನು ಪಕ್ಷದ ಮುಖಂಡರು ಆಟೋ, ಬೈಕ್‌ಗಳಲ್ಲಿ ಕರೆತಂದು ಮತದಾನ ಮಾಡಿಸಿದರು.
ಗ್ರಾಮಗಳಿಂದ ದೂರದ ಪಂಪ್‌ಸೆಟ್ ಹಾಗೂ ತೋಟದ ಜಮೀನುಗಳಲ್ಲಿದ್ದವರು ಮತ್ತು ಕೃಷಿ ಕೂಲಿ ಕೆಲಸಕ್ಕೆ ಹೋಗಿದ್ದವರನ್ನು ಆಟೋಗಳಲ್ಲಿ ಮತಗಟ್ಟೆಗೆ ಕರೆತಂದು ಮತದಾನ ಮಾಡಿದ ನಂತರ ಇವರನ್ನು ವಾಪಸ್ ಕರೆದೊಯ್ದ ದೃಶ್ಯ ಹಲವು ಗ್ರಾಮಗಳಲ್ಲಿ ಕಂಡುಬಂತು. ವೃದ್ಧ ಮಹಿಳೆಯರು ಮತಗಟ್ಟೆಗಳಿಗೆ ಬರುತ್ತಿದ್ದಂತೆ ಸ್ವಯಂ ಸೇವಕರು ಗಾಲಿಕುರ್ಚಿಯಲ್ಲಿ ಕೂರಿಸಿಕೊಂಡು ಮತ ಹಾಕಿಸಿ ಕರೆತಂದರು. ಅಂಧ ಮತದಾರರು ಪತ್ನಿ ಹಾಗೂ ಮಕ್ಕಳ ಜತೆ ತೆರಳಿ ಮತ ಚಲಾಯಿಸಿ ಬರುತ್ತಿದ್ದರು.

Leave a Reply

Your email address will not be published. Required fields are marked *