ರಾಜಮೌಳಿ ಆರ್​ಆರ್​ಆರ್​ನಲ್ಲಿ ಅಚ್ಚರಿಗಳ ಗುಚ್ಛ

‘ಬಾಹುಬಲಿ’ ನಂತರ ಎಸ್.ಎಸ್. ರಾಜಮೌಳಿ ನಿರ್ದೇಶನದಲ್ಲಿ ಸಿದ್ಧಗೊಳ್ಳುತ್ತಿರುವ ‘ಆರ್​ಆರ್​ಆರ್’ ಚಿತ್ರದ ಬಗ್ಗೆ ಆರಂಭದಿಂದಲೂ ಕುತೂಹಲ ಮನೆಮಾಡಿತ್ತು. ಒಂದೇ ಒಂದು ಸಣ್ಣ ಮಾಹಿತಿಯನ್ನೂ ಹೊರಬಿಡದೆ ಚಿತ್ರತಂಡ ಎರಡು ಹಂತದ ಶೂಟಿಂಗ್ ಮುಗಿಸಿತ್ತು. ಇದೀಗ ಸಿನಿಪ್ರಿಯರಿಗಾಗಿ ಒಂದಷ್ಟು ಆಸಕ್ತಿಕರ ಮಾಹಿತಿಗಳನ್ನು ಹಂಚಿಕೊಂಡಿದೆ ‘ಆರ್​ಆರ್​ಆರ್’ ಬಳಗ.

1920ರ ಕಾಲಘಟ್ಟದಲ್ಲಿ ನಡೆಯುವ ಈ ಚಿತ್ರವು ಸ್ವಾತಂತ್ರ್ಯ ಹೋರಾಟಗಾರರಾದ ಕೊಮರಂ ಭೀಮ್ ಮತ್ತು ಅಲ್ಲುರಿ ಸೀತಾರಾಮ ರಾಜು ಅವರ ಕಥೆಯನ್ನು ಒಳಗೊಂಡಿದ್ದರೂ, ಇದು ಸಂಪೂರ್ಣ ಕಾಲ್ಪನಿಕ ಸಿನಿಮಾ.

ನಟ ರಾಮ್ ಚರಣ್​ಗೆ ನಾಯಕಿಯಾಗಿ ಬಾಲಿವುಡ್ ನಟಿ ಅಲಿಯಾ ಭಟ್ ಕಾಣಿಸಿಕೊಂಡರೆ, ಜೂ.ಎನ್​ಟಿಆರ್​ಗೆ ನಾಯಕಿಯಾಗಿ ಹಾಲಿವುಡ್ ನಟಿ ಡೈಸಿ ಎಡ್ಗರ್ ಜೋನ್ಸ್ ಬಣ್ಣ ಹಚ್ಚಲಿದ್ದಾರೆ.

‘ಆರ್​ಆರ್​ಆರ್’ ಮೂಲಕ ಮೊದಲ ಬಾರಿಗೆ ಬಾಲಿವುಡ್ ನಟ ಅಜಯ್ ದೇವ್​ಗನ್ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದಾರೆ. ನಟ/ನಿರ್ದೇಶಕ ಸಮುದ್ರಖಣಿ ಪ್ರಮುಖ ಪಾತ್ರವೊಂದನ್ನು ಪೋಷಿಸಲಿದ್ದಾರೆ.

ಭಾರತದ ಬಹುತೇಕ ಭಾಷೆಗಳಿಗೆ ಈ ಸಿನಿಮಾ ಡಬ್ ಆಗಲಿದ್ದು, ಏಕಕಾಲಕ್ಕೆ 10 ಭಾಷೆಗಳಲ್ಲಿ 2020ರ ಜುಲೈ 30ರಂದು ತೆರೆಗೆ ಬರಲಿದೆ.

ಸುಮಾರು 350 ರಿಂದ 400 ಕೋಟಿ ರೂ. ಬಂಡವಾಳ ಹೂಡಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ ಡಿವಿವಿ ದಾನಯ್ಯ. ಎಲ್ಲ ಭಾಷೆಯಲ್ಲೂ ‘ಆರ್​ಆರ್​ಆರ್’ ಎಂಬುದೇ ಶೀರ್ಷಿಕೆ ಆಗಿರಲಿದೆ.

‘ಮೋಟರ್ ಸೈಕಲ್ ಡೈರೀಸ್’ ಸಿನಿಮಾದಿಂದ ಪ್ರೇರಿತರಾಗಿ ರಾಜಮೌಳಿ ‘ಆರ್​ಆರ್​ಆರ್’ ಮಾಡುತ್ತಿದ್ದಾರೆ.