ಮೋಟಾರು ವಾಹನ ತಿದ್ದುಪಡಿ ಕಾಯಿದೆ ವಿರೋಧಿಸಿ ಬೀದಿಗಿಳಿದಿರುವ ಸಾರಿಗೆ ಒಕ್ಕೂಟದ ಬೇಡಿಕೆ ಹೀಗಿದೆ…

ನವದೆಹಲಿ: ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಮೋಟಾರು ವಾಹನ ಕಾಯಿದೆ ತಿದ್ದುಪಡಿ ಮಸೂದೆ ಅಡಿಯಲ್ಲಿ ಭಾರಿ ದಂಡ ವಿಧಿಸಲಾಗುತ್ತಿದೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿ, ಕೇಂದ್ರದ ನಡೆಯನ್ನು ವಿರೋಧಿಸಿ ವಾಹನ ಮಾಲೀಕರ ಸಂಘವು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಒಂದು ದಿನದ ಸಾರಿಗೆ ಬಂದ್​ ಆಚರಣೆ ಮಾಡುತ್ತಿದ್ದು, ಇದರಿಂದ ಜನಸಾಮಾನ್ಯರಿಗೆ ತೊಂದರೆಯುಂಟಾಗಿದೆ.

41 ಸಂಘಟನೆಗಳು ಹಾಗೂ ಟ್ರಕ್​, ಬಸ್​, ಆಟೋ ಮತ್ತು ಟ್ಯಾಕ್ಸಿ ಸೇರಿದಂತೆ ಸರಕು ಮತ್ತು ಪ್ರಯಾಣಿಕರ ವಿಭಾಗಗಳ ಒಕ್ಕೂಟಗಳು ಪ್ರತಿಭಟನೆಯಲ್ಲಿ ಭಾಗಿಯಾಗಿವೆ. ಹೊಸ ಮೋಟಾರು ವಾಹನ ತಿದ್ದುಪಡಿ ಕಾಯಿದೆ ವಿರುದ್ಧ ಪ್ರತಿಭಟನೆ ಕೈಗೊಂಡಿರುವುದಾಗಿ ಸಾರಿಗೆ ಸಂಸ್ಥೆಗಳು ತಿಳಿಸಿವೆ.

ಬಹುದೊಡ್ಡ ಸಂಖ್ಯೆಯಲ್ಲಿ ಆಟೋ ರಿಕ್ಷಾ, ಟ್ಯಾಕ್ಸಿ, ಓಲಾ ಮತ್ತು ಉಬರ್​ ಕ್ಯಾಬ್ಸ್​ ಹಾಗೂ ಖಾಸಗಿ ಬಸ್​ಗಳು ಇಂದು ಪ್ರತಿಭಟನಾ ಹಿನ್ನೆಲೆಯಲ್ಲಿ ರಸ್ತೆಗಿಳಿದಿವೆ. ಅನೇಕ ಪಾಲಕರು ತಮ್ಮ ಮಕ್ಕಳ ಶಾಲೆಯಿಂದ ದೂರವಾಣಿ ಕರೆ ಸ್ವೀಕರಿಸಿ, ಇಂದು ಶಾಲೆ ತೆರೆಯದಿರುವುದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಕೆಲ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಪ್ರತ್ಯೇಕ ವ್ಯವಸ್ಥೆ ಮಾಡಿ ಸಮಯಕ್ಕೆ ಸರಿಯಾಗಿ ಕಳುಹಿಸಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಸಾಕಷ್ಟು ಶಾಲೆಗಳು ಮುಚ್ಚಿವೆ.

ಆಟೋ ಮತ್ತು ಕ್ಯಾಬ್​ ಸಮಸ್ಯೆ ಎದುರಾಗುವ ಹಿನ್ನೆಲೆಯಲ್ಲಿ ವಿಸ್ತಾರ, ಇಂಡಿಗೋ, ಸ್ಪೈಸ್​ ಜೆಟ್​ ಮತ್ತು ಗೋಏರ್​ ವಿಮಾನ ಸಂಸ್ಥೆಗಳು ತಮ್ಮ ಪ್ರಯಾಣಿಕರಿಗೆ ಬೇರೆ ವ್ಯವಸ್ಥೆ ಮಾಡಿಕೊಳ್ಳುವಂತೆ ಮೊದಲೇ ಮಾಹಿತಿ ನೀಡಿದೆ.

ಸಾರಿಗೆ ಒಕ್ಕೂಟಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು, ದೇಶದ ಆರ್ಥಿಕ ಬಿಕ್ಕಟ್ಟು, ಹೆಚ್ಚಿನ ತೆರಿಗೆ ಮತ್ತು ದಂಡ ಹಾಗೂ ಭ್ರಷ್ಟಾಚಾರದಿಂದ ಸಾರಿಗೆ ವಲಯ ತುಂಬಾ ಕೆಳಹಂತಕ್ಕೆ ಹೋಗಿದೆ ಎಂದು ಕಿಡಿಕಾರಿವೆ.

ನೂತನ ಮೋಟಾರು ವಾಹನ ಕಾಯಿದೆಯಲ್ಲಿನ ಕುಂದು ಕೊರತೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿವಾರಿಸುತ್ತದೆ ಎಂದು ಕಳೆದ 15 ದಿನಗಳಿಂದ ಸಾರಿಗೆ ಸಂಸ್ಥೆಗಳು ಕಾದು ಕುಳಿತಿದ್ದವು. ಆದರೆ, ಸರ್ಕಾರ ಯಾವುದೇ ಕ್ರಮವನ್ನು ತೆಗದುಕೊಳ್ಳದೇ ಇರುವುದರಿಂದ ಪ್ರತಿಭಟನೆ ಮೂಲಕ ಸರ್ಕಾರವನ್ನು ಒತ್ತಾಯಿಸಲು ಸಾರಿಗೆ ಬಂದ್​ ಮಾಡಲಾಗಿದೆ ಎಂದು ಸಾರಿಗೆ ಸಂಘಗಳ ಯುನೈಟೆಡ್ ಫ್ರಂಟ್(UFTA)ನ ಸಾಮಾನ್ಯ ಕಾರ್ಯದರ್ಶಿ ಶ್ಯಾಮ್​ಲಾಲ್​ ಗೋಲಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನೂತನ ಮೋಟಾರು ವಾಹನ ಕಾಯಿದೆಯನ್ನು ಹಿಂಪಡೆದು, ವಿಮೆ ಹಾಗೂ ವೈದ್ಯಕೀಯ ಸೌಲಭ್ಯದೊಂದಿಗೆ ವಿಮಾನ ಮತ್ತು ರೈಲ್ವೆ ನಿಲ್ದಾಣಗಳಲ್ಲಿನ ಉಚಿತ ಪಾರ್ಕಿಂಗ್​ ಸಮಯವನ್ನು ಹೆಚ್ಚಳ ಮಾಡಿ ಎಂದು ಸಾರಿಗೆ ಸಂಘಗಳು ಒತ್ತಾಯಿಸಿವೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *