ಕನ್ನಡ ಆಡಳಿತ ಭಾಷೆಯಾಗಲಿ

<ಸಮ್ಮೇಳನಾಧ್ಯಕ್ಷ ಅಲ್ಲಮಪ್ರಭು ಪಾಟೀಲ್ ಬೆಟ್ಟದೂರು ಹೇಳಿಕೆ>ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ>

ಮಾನ್ವಿ (ರಾಯಚೂರು): ಕನ್ನಡ ಆಡಳಿತ ಭಾಷೆಯಾಗಬೇಕು ಹಾಗೂ ಕನ್ನಡದಲ್ಲೇ ಶಿಕ್ಷಣ ದೊರೆಯುವಂತೆ ಸಂಸತ್ತಿನಲ್ಲಿ ತೀರ್ಮಾನವಾದಾಗ ಮಾತ್ರ ಏಕರೂಪದ ಶಿಕ್ಷಣ ಸಿಗಲು ಸಾಧ್ಯ ಎಂದು ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳದ ಸಮ್ಮೇಳನಾಧ್ಯಕ್ಷ ಅಲ್ಲಮಪ್ರಭು ಪಾಟೀಲ್ ಬೆಟ್ಟದೂರು ಹೇಳಿದರು.

ಪಟ್ಟಣದ ಕಾಕಲೀಯ ಶಾಲೆ ಅವರಣದಲ್ಲಿ ತಾಲೂಕು ಕಸಾಪದಿಂದ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಮಾತನಾಡಿದರು.

ಶಿಕ್ಷಣದಲ್ಲಿ ಬಡವರಿಗೊಂದು ಮಾಧ್ಯಮ, ಉಳ್ಳವರಿಗೊಂದು ಮಾಧ್ಯಮ ಎನ್ನುವ ತಾರತಮ್ಯ ದೂರವಾಗಬೇಕಾದರೆ ಕೇಂದ್ರ ಸರ್ಕಾರ ಸಂಸತ್ತಿನ ಎರಡೂ ಸದನಗಳಲ್ಲಿ ಈ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಳ್ಳಬೇಕು. ಶಿಕ್ಷಣದ ಮೂಲಕ ಸಮಾನತೆಯ ಸಮಾಜ ನಿರ್ಮಿಸಲು ತೊಡಗಬೇಕೇ ಹೊರತು ಅಸಮಾನತೆಯ ಸಮಾಜವನ್ನಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನ ಮಂತ್ರಿಗಳಿಗೆ ಪತ್ರಬರೆದು, ಆಯಾ ರಾಜ್ಯದ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ, ಆಡಳಿತ ನಡೆಯುವಂತೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಎಲ್ಲ ರಾಜ್ಯಗಳ ಸಮಸ್ಯೆ ಇದು. ಜಾಗತೀಕರಣದಿಂದ ಪ್ರಾದೇಶಿಕ ಭಾಷೆಗಳು ತತ್ತರಿಸುತ್ತಿವೆ.

ಕಲ್ಮಠದ ಶ್ರೀಗಳು, ಮುಸ್ಲಿ ಧರ್ಮಗುರು ಮೌಲಾನಾ ಸೈಯದ್ ಜಿಷಾನ್‌ಕಾದ್ರಿ, ಫಾದರ್ ಪೌಲ್‌ಮಾರ್ಕ್ ಮೋರಸ್, ಶಾಸಕರಾದ ರಾಜಾ ವೆಂಕಟಪ್ಪನಾಯಕ, ಪ್ರತಾಪಗೌಡ ಪಾಟೀಲ್, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ್, ರಾಯಚೂರು ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಪ್ರೊ.ಮುಜಾಫರ್ ಅಸ್ಸಾದಿ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ ಇತರರಿದ್ದರು.

ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ: ಪಟ್ಟಣದಲ್ಲಿ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧಕ್ಷ ಅಲ್ಲಮಪ್ರಭು ಪಾಟೀಲ್ ಬೆಟ್ಟದೂರುರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಪಟ್ಟಣದ ತಹಸೀಲ್ ಕಚೇರಿಯಿಂದ ಸಮ್ಮೇಳನ ವೇದಿಕೆವರೆಗೆ ಕನ್ನಡಾಂಬೆ ಭಾವಚಿತ್ರ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ತಹಸೀಲ್ದಾರ್ ಅಮರೇಶ ಬಿರಾದಾರ್ ಕನ್ನಡಾಂಬೆ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು. ಪುರಸಭೆ ಸದಸ್ಯ ಸಮ್ಮೇಳನಾಧ್ಯಕ್ಷರಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.