ಸ್ವಾತಂತ್ರ್ಯದ ಕೇಂದ್ರ ಬಿಂದು ಅನುಭವ ಮಂಟಪ

<ಡಾ.ಶಿವಮೂರ್ತಿ ಮುರುಘಾ ಶರಣರ ಅಭಿಮತ<ಇಷ್ಟಲಿಂಗ ಪೂಜೆ>

ಮಾನ್ವಿ(ರಾಯಚೂರು): ಕ್ರಾಂತಿಯೋಗಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಸ್ವಾತಂತ್ರ್ಯದ ಮೊದಲ ಕೇಂದ್ರ ಬಿಂದುವಾಗಿತ್ತು ಎಂದು ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಬಸವ ಕೇಂದ್ರ, ಮಹಿಳಾ ಬಸವ ಕೇಂದ್ರದಿಂದ ಹಮ್ಮಿಕೊಂಡಿದ್ದ ಸಹಜ ಶಿವಯೋಗ ಮತ್ತು ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು. ವೈಚಾರಿಕ ಪ್ರಜ್ಞೆ ಮೂಡಿಸಲು ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿದರು. ಶರಣ ಶರಣೆಯರಿಗೆ ಸಮಾನತೆ ಕಲ್ಪಿಸಿ ಬದುಕಿನ ಸ್ವಾತಂತ್ರ್ಯದ ಕುರಿತು ಚರ್ಚಿಸಿ ಜಗತ್ತಿಗೆ ಹೊಸ ವಿಚಾರ ನೀಡಿದ್ದಾರೆ ಎಂದರು.

ಮೊಬೈಲ್ ಎಂಬುದು ದೆವ್ವದ ಕಾಟದಂತೆ. ದೊಡ್ಡವರು, ಚಿಕ್ಕವರು ಎಲ್ಲರೂ ದಾರಿ ತಪ್ಪಿ ಅಜ್ಞಾನದ ಕಡೆ ಸಾಗಿದ್ದೇವೆ. ಅದರಲ್ಲೂ ದೇಶ ನಿರ್ಮಾಣಕ್ಕೆ ಶ್ರಮಿಸಬೇಕಾದ ಯುವ ಸಮುದಾಯ ಹೊಸ ಹೊಸ ಆ್ಯಪ್‌ಗಳಲ್ಲಿ ಮುಳುಗಿದೆ. ಮೊಬೈಲ್ ಬಳಸುವುದು ತಪ್ಪಲ್ಲ. ಅದು ಒಳ್ಳೆಯದಕ್ಕೆ ಬಳಕೆಯಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಕಾಯಕವೇ ಕೈಲಾಸ ಎಂದು ಜಗತ್ತಿಗೆ ಸಾರಿದ ಬಸವಣ್ಣ ಪ್ರತಿಯೊಬ್ಬರಿಗೂ ದುಡಿದು ಜೀವನ ಸಾಗಿಸುವ ಹಕ್ಕು ನೀಡಿದ್ದಾರೆ. ಕಾಯಕದಲ್ಲಿ ನಾವು ಕೈಲಾಸ ಕಾಣಬೇಕು. ಬಸವಣ್ಣನ ಆದರ್ಶ ಪಾಲಿಸಿ, ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.

ಕಲ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಡಾ. ಶಂಭು ಬಳಿಗಾರ ಇಲಕಲ್, ಉಪನ್ಯಾಸಕಿ ಸರ್ವಮಂಗಳಾ ಮಾಡಗಿರಿ, ಸಿರಗುಪ್ಪದ ಬಸವಭೂಷಣ ಸ್ವಾಮೀಜಿ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಕಸಾಪ ಜಿಲ್ಲಾ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು, ವೀರಭದ್ರಯ್ಯಸ್ವಾಮಿ ಮಾತನಾಡಿದರು. ರಾಯಚೂರು ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ, ಚುಕ್ಕಿ ಸೂಗಪ್ಪ ಸಾಹುಕಾರ ಸಿರವಾರ, ಬಸವ ಕೇಂದ್ರದ ಅಧ್ಯಕ್ಷ ಶೇಖರಪ್ಪ ಪಾಟೀಲ್, ಮಹಿಳಾ ಬಸವಕೇಂದ್ರ ಅಧ್ಯಕ್ಷೆ ವಿಜಯಲಕ್ಷ್ಮಿ ಮಸ್ಕಿ ಇತರರಿದ್ದರು. ಮಹಿಳಾ ಬಸವ ಕೇಂದ್ರದ ಪದಾಧಿಕಾರಿಗಳು ಪ್ರದರ್ಶಿಸಿದ ಅಕ್ಕ-ಅಲ್ಲಮ ಸಂವಾದ ರೂಪಕ ಗಮನ ಸೆಳೆಯಿತು. ಆಕಾಶವಾಣಿ ಕಲಾವಿದ ರಘುಪತಿ ಪೂಜಾರ ದಿನ್ನಿ ಸಂಗಡಿಗರು ವಚನ ಗಾಯನ ಪ್ರಸ್ತುತಪಡಿಸಿದರು.

ನೆಮ್ಮದಿ ಜೀವನಕ್ಕೆ ಸಕಲ ಸೌಕರ್ಯಗಳಿದ್ದರೂ, ಮನಸು ಸದಾ ಒಂದಿಲ್ಲೊಂದು ಬಯಸುತ್ತದೆ. ಒಂದು ಈಡೇರುವುದರೊಳಗೆ ಇನ್ನೊಂದರ ಬೆನ್ನು ಬೀಳುತ್ತೇವೆ. ಆಸೆಗೆ ಕೊನೆಯಿಲ್ಲ. ಇರುವುದರಲ್ಲಿ ಸುಖ ಕಂಡಾಗ ನೆಮ್ಮದಿ ಸಾಧ್ಯ. ಶರಣರು ಆಸೆ, ಆಮಿಷಕ್ಕೆ ಒಳಗಾಗದೇ ಕಾಯಕ, ದಾಸೋಹ, ಜಂಗಮ ಸೇವೆಯಿಂದ ಆದರ್ಶರಾದರು. ಅವರ ಮಾರ್ಗದಲ್ಲಿ ನಾವು ಸಾಗಿದಾಗ ಬದುಕು ಸುಂದರವಾಗುತ್ತದೆ.
| ಡಾ. ಶಿವಮೂರ್ತಿ ಮುರುಘಾ ಶರಣರು ಮುರುಘಾ ಮಠ ಚಿತ್ರದುರ್ಗ