ಕುಡಿವ ನೀರಿನ ಕೆರೆ ಕಾಮಗಾರಿ ಕಳಪೆ

ಮಾನ್ವಿ (ರಾಯಚೂರು): ರಬ್ಬಣಕಲ್‌ನಲ್ಲಿ ನಡೆಯುತ್ತಿರುವ ಶಾಶ್ವತ ಕುಡಿವ ನೀರಿನ ಕೆರೆ ಕಾಮಗಾರಿ ಕಳಪೆಯಾಗಿದ್ದು, ಗುತ್ತಿಗೆದಾರ ಕೆ.ಆರ್.ನಾಯಕ ವಿರುದ್ಧ ಕ್ರಮ ಜರುಗಿಸುವಂತೆ ಸಾರ್ವಜನಿಕರಾದ ಅನಿಲ್ ಕುಮಾರ ಕೋನಾಪುರಪೇಟೆ, ಶೇಖರಪ್ಪ ಕೊಟ್ನೇಕಲ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು. ಕುಡಿವ ನೀರಿನ ಕಾಮಗಾರಿಗಾಗಿ ಒಟ್ಟು 88 ಕೋಟಿ ರೂ. ಮಂಜೂರಾಗಿದೆ. ಇದರಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕೆರೆ ಹಾಗೂ 38 ಕೋಟಿ ರೂ. ನೀರಿನ ಟ್ಯಾಂಕ್, ಫಿಲ್ಟರ್ ಹಾಗೂ ಇತರ ಪರಿಕರಕ್ಕೆ ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಆದರೆ, ಗುತ್ತಿಗೆದಾರರು, 50 ಕೋಟಿ ರೂ.ಯಲ್ಲಿ 10 ಕೋಟಿ ರೂ. ಲೆಸ್ ಮಾಡಿ 40 ಕೋಟಿ ರೂ. ವೆಚ್ಚದಲ್ಲಿ ಕೆರೆ ಕಾಮಗಾರಿ ಮಾಡಬಹುದು ಎಂದು ಮಾಹಿತಿ ನೀಡಿ ಕಾಮಗಾರಿ ಗುತ್ತಿಗೆ ಪಡೆದಿದ್ದಾರೆ.

50 ಕೋಟಿ ರೂ. ವೆಚ್ಚದಲ್ಲಿ ಗುಣಮಟ್ಟದ ಕಾಮಗಾರಿ ಮಾಡಬಹುದು ಎಂದು ಸರ್ಕಾರದ ಸುತ್ತೊಲೆಯಲ್ಲಿ ತಿಳಿಸಿದರೂ ಗುತ್ತಿಗೆದಾರ ಅಂದಾಜು ಪತ್ರಿಕೆಯಂತೆ ಕಾಮಗಾರಿ ನಿರ್ವಹಿಸದೆ ಕಳಪೆ ಕಾಮಗಾರಿ ಕೈಗೊಂಡಿದ್ದಾರೆ. ಕೆರೆಗೆ ಉತ್ತಮ ಗುಣಮಟ್ಟದ ಮಣ್ಣು (ಮರಂ) ಬಳಕೆ ಮಾಡಿಲ್ಲ. ಕಾಮಗಾರಿಗೆ 20 ಎಂಎಂ ಕಬ್ಬಿಣದ ರಾಡ್ ಬದಲು 10 ಎಂಎಂ ರಾಡ್ ಬಳಸಿದ್ದಾರೆ. ಕೆರೆ ಕಾಮಗಾರಿ ವೀಕ್ಷಣೆಗೆ ಸರ್ಕಾರದ ಒಬ್ಬ ತಾಂತ್ರಿಕ ಜೆಇ ಕೂಡ ನೇಮಕಗೊಂಡಿಲ್ಲ. ಜಿಲ್ಲಾಧಿಕಾರಿ ಸೇರಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡದ ಕಾರಣ ಕಾಮಗಾರಿ ಕಳಪೆಯಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.

88 ಕೋಟಿ ರೂ. ಯೋಜನೆಯಡಿ 50 ಕೋಟಿ ರೂ. ಕೆರೆ ನಿರ್ಮಾಣ, 38 ಕೋಟಿ ರೂ. ಟ್ಯಾಂಕ್, ಫಿಲ್ಟರ್‌ಗೆ ವೆಚ್ಚ ಮಾಡಬೇಕು. ನೀರು ಸಂಗ್ರಹಿಸುವ ಕೆರೆಯನ್ನೇ ಕಳಪೆಯಾಗಿ ಮಾಡಲಾಗುತ್ತಿದೆ. ಕೂಡಲೇ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿ, ಕಳಪೆ ಕಾಮಗಾರಿ ತಡೆಯಬೇಕು. ನಿರ್ಲಕ್ಷೃ ಮಾಡಿದರೆ ಸಾರ್ವಜನಿಕರೊಂದಿಗೆ ಹೋರಾಟ ನಡೆಸಲಾಗುವುದು.
| ಅನಿಲ್‌ಕುಮಾರ, ಶೇಖರಪ್ಪ ಕೊಟ್ನೇಕಲ್ ಸಾರ್ವಜನಿಕರು ಮಾನ್ವಿ