ಮಾನ್ವಿ ಸರ್ಕಾರಿ ಆಸ್ಪತ್ರೆಗೆ ಕಾಯಕಲ್ಪ ಪ್ರಶಸ್ತಿ

13ನೇ ಸ್ಥಾನ ಪಡೆದ ಸಾರ್ವಜನಿಕ ಸೇವಾ ಕೇಂದ್ರ

ಮಾನ್ವಿ: ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ 2018-19ನೇ ಸಾಲಿನ ಕಾಯಕಲ್ಪ ಪ್ರಶಸ್ತಿ ಲಭಿಸಿದೆ ಎಂದು ಆಸ್ಪತ್ರೆಯ ಮುಖ್ಯ ವೈಧ್ಯಾಧಿಕಾರಿ ಡಾ.ವೈ.ವೆಂಕಟೇಶ ನಾಯಕ ತಿಳಿಸಿದರು.

ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಿಂದ ಕಾಯಕಲ್ಪ ಪ್ರಶಸ್ತಿಗೆ ಒಟ್ಟು 2805 ಆಸ್ಪತ್ರೆಗಳು ಅರ್ಜಿಯನ್ನು ಸಲ್ಲಿಸಿದ್ದು ಈ ಪೈಕಿ ತಾಲೂಕುವಾರು 103 ಆಯ್ಕೆಗೊಂಡು ಮಾನ್ವಿ ಸರ್ಕಾರಿ ಆಸ್ಪತ್ರೆ ಶೇ.85 ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ 13ನೇ ಸ್ಥಾನ ಪಡೆದಿದ್ದು ಈಶಾನ್ಯ ಕರ್ನಾಟಕದಲ್ಲಿ 3 ನೇ ಸ್ಥಾನ ಮತ್ತು ಹೈಕ ವಿಭಾಗಕ್ಕೆ ಪ್ರಥಮ ಸ್ಥಾನಗಳಿಸಿದೆ ಎಂದರು.

ನಮಗೆ ಪ್ರಥಮ ಸ್ಥಾನ ಬರಲು ಕೆಲ ತೊಂದರೆಗಳು ಕಾರಣವಾಗಿವೆ. ಆಸ್ಪತ್ರೆಗೆ ಮುಖ್ಯರಸ್ತೆ ಹಾಗೂ ಕುಡಿವ ನೀರು, ಕಾಂಪೌಂಡ್ ಕೊರತೆಯಿಂದ ಇನ್ನೂ ಹೆಚ್ಚಿನದಾಗಿ ಶೇ.5 ರಷ್ಟು ಅಂಕಗಳು ಕಡಿಮೆ ಬರಲು ಕಾರಣವಾಗಿವೆ ಎಂದರು.

ಕಳೆದ 6 ತಿಂಗಳ ಹಿಂದೆಯೇ ಮಾನ್ವಿ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಸೇವೆ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಳವಡಿಸಿಕೊಂಡು ಪ್ರಮುಖವಾಗಿ ಆಸ್ಪತ್ರೆ ಸ್ವಚ್ಛತೆ, ಪರಿಸರ, ಕುಡಿಯುವ ನೀರು, ಶೌಚಗೃಹ, ಸೋಂಕು ನಿವಾರಣೆ ಸೇರಿದಂತೆ 5 ಅಂಶಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿಕೊಳ್ಳಲಾಗಿತ್ತು. ಈ ಎಲ್ಲ ಅಂಶಗಳ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಆರೋಗ್ಯ ಇಲಾಖೆಗೆ ವರದಿಯನ್ನು ಕಾಯಕಲ್ಪ ಯೋಜನೆಗೆ ಕಳಿಸಿದಾಗ ತಂಡವು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ 2ನೇ ಹಂತದಲ್ಲಿ ಮಾನ್ವಿ ಆಸ್ಪತ್ರೆ ಕಾಯಕಲ್ಪ ಪ್ರಶಸ್ತಿಗೆ ಆಯ್ಕೆಗೊಂಡು ರಾಯಚೂರು ಜಿಲ್ಲೆಗೆ ಮಾದರಿಯಾಗಿದೆ ಎಂದರು.

ಆಸ್ಪತ್ರೆ ಕಂಪೌಂಡ್ ನಿರ್ಮಾಣಕ್ಕೆ 25 ಲಕ್ಷ ರೂ. ಅನುದಾನ ಮಂಜೂರಾಗಿದೆ. ಶುದ್ದ ಕುಡಿಯುವ ನೀರು ಆಳವಡಿಕೆಗೆ 4 ಲಕ್ಷ ರೂ. ಅನುದಾನ ಮಂಜೂರು ಸೇರಿದಂತೆ ಆಸ್ಪತ್ರೆಯಲ್ಲಿ ಸುವ್ಯವಸ್ಥೆ ಚಿಕಿತ್ಸೆ ನೆರವಿಗಾಗಿ ಸರ್ಕಾರದಿಂದ ನೇತ್ರ ಚಿಕಿತ್ಸಾ ವಿಭಾಗಕ್ಕೆ 17 ಲಕ್ಷ ರೂ. ಹಾಗೂ ಡಿಜಿಟಲ್ ಎಕ್ಸ್‌ರೇ 11 ಲಕ್ಷ ರೂ. ಐಸಿಯುಗೆ 15 ಲಕ್ಷ ರೂ., ಸೋಲಾರ್ 41 ಪೆನಾಲ್ ಆಳವಡಿಕೆಗೆ 41 ಲಕ್ಷ ರೂ. ಅತ್ಯುನ್ನತ ದರ್ಜೆಯ ಹೆರಿಗೆ ಕೇಂದ್ರಕ್ಕೆ 21 ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಡಿಜಿಟಲ್ ಎಕ್ಸ್‌ರೇ ಕೇಂದ್ರ ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ಮೇಲ್ಭಾಗದಲ್ಲಿ ನಿರ್ಮಿಸಿರುವ ಸೋಲಾರ್ ಪೆನಾಲ್ ಆಳವಡಿಕೆಯಿಂದ 50 ಕಿ.ವ್ಯಾ.ವಿದ್ಯುತ್ ಉತ್ಪಾದಿಸುತ್ತಿರುವುದು ವಿಶೇಷ. ಆಸ್ಪತ್ರೆಗೆ ನಿತ್ಯ 800ರಿಂದ ಸಾವಿರ ಹೊರ ರೋಗಿಗಳ ತಪಾಸಿಲಾಗುತ್ತಿದೆ. ಆಸ್ಪತ್ರೆಯಲ್ಲಿ ಒಟ್ಟು 13ರಲ್ಲಿ 6 ತಜ್ಞ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದು ಐಸಿಯು ಹಾಗೂ ಸ್ತ್ರೀರೋಗ, ಫಿಜಿಷಿಯನ್, ಮಕ್ಕಳ ತಜ್ಞ ವೈದ್ಯರ ಕೊರತೆಯಿದೆ. ಖಾಲಿಯಿರುವ ತಜ್ಞ ವೈದ್ಯರನ್ನು ಭರ್ತಿ ಮಾಡುವಂತೆ ಸಂಬಂಧಪಟ್ಟ ಇಲಾಖೆಗೆ ಮತ್ತು ಶಾಸಕರ ಗಮನಕ್ಕೆ ತರಲಾಗಿದೆ ಎಂದರು.

ಈ ಸಂದರ್ಭದಲ್ಲಿ ಡಾ.ಅರವಿಂದ, ಡಾ.ಶರಣಪ್ಪ, ಡಾ.ಮತೀನ್, ಡಾ.ದೀಪಾ ಹಾಗೂ ಎಕ್ಸ್‌ರೇ ತಜ್ಞ ರಾಮು ಹೊಳೆಯಪ್ಪನವರ್, ಸಿಬ್ಬಂದಿ ಎಸ್.ಬಸವರಾಜ ಪೋತ್ನಾಳ್ ಸೇರಿ ಇತರರಿದ್ದರು.