ಕಾರ್ಯಕ್ರಮದ ಅವ್ಯವಸ್ಥೆ ಕಂಡು ಜನಾರ್ದನರೆಡ್ಡಿ ವಾಪಸ್

ಮಾನ್ವಿ: ಆಂಬುಲೆನ್ಸ್ ಸೇವೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಅಲ್ಲಿನ ಅವ್ಯವಸ್ಥೆ ಹಾಗೂ ಸ್ಥಳೀಯ ಮುಖಂಡರ ಬಗ್ಗೆ ಮುನಿಸಿಕೊಂಡು ಹೊರಟು ಹೋದ ಘಟನೆ ಮಂಗಳವಾರ ನಡೆದಿದೆ.

ತಾಲೂಕಿನ ಮುದ್ದಂಗುಡ್ಡಿ ಗ್ರಾಮದಲ್ಲಿ ಬೆಳಗ್ಗೆ ವೇಮನ ಜಯಂತಿ ಕಾರ್ಯಕ್ರಮ ಮುಗಿಸಿ ಸಂಜೆ ಪಟ್ಟಣದ ಧ್ಯಾನಮಂದಿರಕ್ಕೆ ಆಗಮಿಸಿದ್ದರು. ರಡ್ಡಿ ಸಮುದಾಯದ ಹಾಗೂ ಕೆ.ವಿ.ರಡ್ಡಿ ಸೇವಾ ಟ್ರಸ್ಟ್ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಬೆರಳೆಣಿಕೆಯಷ್ಟು ಜನರನ್ನು ಕಂಡು ತಕ್ಷಣ ಹೊರಡಲು ರೆಡ್ಡಿ ಮುಂದಾದಾಗ ಮುಖಂಡರು ಅಚ್ಚರಿಗೊಂಡರು. ಮುದ್ದಂಗುಡ್ಡಿಯಿಂದ ನೇರ ಪಟ್ಟಣಕ್ಕೆ ಆಗಮಿಸಿದ ರೆಡ್ಡಿ, ಬಿಜೆಪಿ ತಾಲೂಕು ಸಂಚಾಲಕ ಶರಣಪ್ಪಗೌಡ ನಕ್ಕುಂದಿ ನಿವಾಸದಲ್ಲಿ ಸುದ್ದಿಗೋಷ್ಠಿ ಏರ್ಪಡಿಸಲು ಸೂಚಿಸಿದ್ದರು. ಸ್ಥಳೀಯ ಮುಖಂಡರು ಕೆಲವರಿಗೆ ಮಾತ್ರ ತಿಳಿಸಿದ್ದಾರೆ. ಇದರಿಂದ ಬೇಸರಗೊಂಡ ರೆಡ್ಡಿ, ಗರಂ ಆಗಿ ನೇರವಾಗಿ ಧ್ಯಾನಮಂದಿರಕ್ಕೆ ತೆರಳಿ ಆಂಬ್ಯುಲೆನ್ಸ್‌ಗೆ ಚಾಲನೆ ನೀಡಿದರು. ಸ್ಥಳೀಯ ಮುಖಂಡರ ವಿರುದ್ಧ ಸಿಡಿಮಿಡಿಗೊಂಡರು.

ಈ ಸಂದರ್ಭ ಬಿಜೆಪಿಯ ಕೆಲ ನಿಷ್ಠಾವಂತ ಕಾರ್ಯಕರ್ತರು ರೆಡ್ಡಿಯನ್ನು ಭೇಟಿಯಾಗಿ ತಾಲೂಕಿನಲ್ಲಿ ಪಕ್ಷದ ವರ್ಚಸ್ಸಿನ ಬಗ್ಗೆ ಹಾಗೂ ಪಕ್ಷದ ಹಿರಿಯ ಮುಖಂಡರು ಕಾರ್ಯಕರ್ತರನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಗಮನಕ್ಕೆ ತಂದರು.