ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡಿ

ಜನ ಜಾಗೃತಿ ಸಮಿತಿ ಪದಾಧಿಕಾರಿಗಳ ಒತ್ತಡ

ಮಾನ್ವಿ: ಬೇವಿನೂರು ಗ್ರಾಮದ ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಸೇರಿ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಜನ ಜಾಗೃತಿ ಸಮಿತಿ ಪದಾಧಿಕಾರಿಗಳು ತಾಪಂ ಅವರಣದಲ್ಲಿ ಬುಧವಾರ ಧರಣಿ ನಡೆಸಿದರು.

ತಾಲೂಕಿನ ಕುರ್ಡಿ, ಹಿರೇಕೊಟ್ನೆಕಲ್, ಗೋರ್ಕಲ್, ಗಣದಿನ್ನಿ ಸೇರಿ ಇನ್ನಿತರ ಗ್ರಾಪಂಗಳಲ್ಲಿ ನರೇಗಾ, 14ನೇ ಹಣಕಾಸು ಯೋಜನೆಯಡಿ ನಡೆದಿರುವ ಅವ್ಯವಹಾರದ ಕುರಿತು ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಬೇವಿನೂರು ಗ್ರಾಮದ ಸರ್ವೇ ನಂ.11ರ ಸರ್ಕಾರಿ ಜಾಗದಲ್ಲಿ ವಾಸಿಸುವ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ಕಜಜಾಸ ರಾಜ್ಯಾಧ್ಯಕ್ಷ ಪಿ.ಯೇಸಪ್ಪ, ಹುಚ್ಚಪ್ಪ ಪೋತ್ನಾಳ್, ಸುರೇಶ ತುಪ್ಪದೂರು, ರಾಮಣ್ಣ ಬಾಗಲವಾಡ, ವೀರೇಶ ಕೊಟ್ನೆಕಲ್, ಪ್ರಸಾದ ಕುರ್ಡಿ, ನಾಗರಾಜ ಬಾಗಲವಾಡ, ರವಿಕುಮಾರ ಕುರ್ಡಿ, ಸುಭಾದಿ, ರಜೀಶ್, ರಂಗಾರೆಡ್ಡಿ, ಅಂಬಿಕಾ, ಈರಣ್ಣ ಇನ್ನಿತರರು ಇದ್ದರು.