ಕೇವಲ 10 ರೈತರಿಂದ ಜೋಳ ಖರೀದಿ!

ನೋಂದಣಿ ಮಾಡಿಸಿದ್ದು 1224 ಕೃಷಿಕರು | ಮಾ.30ಕ್ಕೆ ಕೇಂದ್ರ ಬಂದ್

ಶರಣಬಸವ ನೀರಮಾನ್ವಿ ಮಾನ್ವಿ
ಪಟ್ಟಣದ ಎಪಿಎಂಸಿಯಲ್ಲಿ ಆರಂಭಿಸಿದ್ದ ಜೋಳ ಖರೀದಿ ಕೇಂದ್ರ ಮಾ.30ಕ್ಕೆ ಬಂದ್ ಮಾಡಲಾಗಿದೆ. ನಾಲ್ಕೈದು ದಿನ ಮಾತ್ರ ನಡೆದ ಖರೀದಿ ಪ್ರಕ್ರಿಯೆಯಲ್ಲಿ ನೋಂದಣಿ ಮಾಡಿಸಿದ್ದ 1224 ರೈತರಲ್ಲಿ ಕೇವಲ 10 ಕೃಷಿಕರಿಂದ ಜೋಳ ಖರೀದಿಸಲಾಗಿದೆ..!

ಮಳೆ ಹಾಗೂ ತುಂಗಭದ್ರಾ ಕಾಲುವೆಗೆ ಸಮರ್ಪಕ ನೀರು ಬಾರದ ಕಾರಣ ಕೆಳ ಭಾಗದ ರೈತರು ಭತ್ತ ಬಿಟ್ಟು ಮಿತ ನೀರು ಬೇಡುವ ಜೋಳ, ಮೆಣಸಿನಕಾಯಿ ಸೇರಿ ಇತರ ಬೆಳೆಗಳಿಗೆ ಮೊರೆ ಹೋಗಿದ್ದರು. ಮಾರುಕಟ್ಟೆಯಲ್ಲಿ ಜೋಳಕ್ಕೆ ಉತ್ತಮ ಬೆಲೆ ಇಲ್ಲದ ಹಿನ್ನೆಲೆಯಲ್ಲಿ ಸರ್ಕಾರ ಖರೀದಿ ಕೇಂದ್ರ ಆರಂಭಿಸಲು ಮುಂದಾಗಿತ್ತು. ಕ್ವಿಂಟಾಲ್‌ಗೆ 2430 ರೂ. ದರ ನಿಗದಿಪಡಿಸಿದ್ದರಿಂದ ರೈತರು ಖುಷಿಯಾಗಿದ್ದರು. ಪಟ್ಟಣದಲ್ಲಿ ಜೋಳ ಖರೀದಿ ಕೇಂದ್ರ ಆರಂಭಿಸಿ ಮಾ.1 ರಿಂದ 15 ವರೆಗೆ ರೈತರ ನೋಂದಣಿ ಜತೆಗೆ ಖರೀದಿಸಲು ಅವಕಾಶ ನೀಡಲಾಗಿತ್ತು. ಹೀಗಾಗಿ ತಾಲೂಕಿನಲ್ಲಿ 1224 ರೈತರು ನೋಂದಣಿ ಮಾಡಿಸಿದ್ದರು. ಆದರೆ, ತಾಂತ್ರಿಕ ದೋಷ ಕಾರಣ ಮಾ.15ರಂದು ನೀಡಿ ಬಂದ್ ಮಾಡಲಾಗಿತ್ತು. ಬಳಿಕ ರೈತರ ಒತ್ತಾಯದ ಮೇರೆಗೆ ಪುನಃ ಆರಂಭಿಸಿ ಮಾ.25ರಿಂದ 30ರವರೆಗೆ ಕೇವಲ 10 ಜನರಿಂದ ಒಂದು ಸಾವಿರ ಕ್ವಿಂಟಾಲ್ ಜೋಳ ಖರೀದಿಸಲಾಗಿದೆ.

ತಾಲೂಕಿನಲ್ಲಿ ನೋಂದಣಿ ಮಾಡಿಸಿದ್ದ ರೈತರಿಗೆ ಅಧಿಕಾರಿಗಳು ಸರಿಯಾಗಿ ಸಂಪರ್ಕ ಮಾಡಿಲ್ಲ ಎಂಬ ಆರೋಪವಿದೆ. ಮೊದಲ ದಿನ ಕಾಟಾಚಾರಕ್ಕೆಂದು ಕೇವಲ ಒಬ್ಬರಿಂದ ಜೋಳ ಖರೀದಿ ಮಾಡಿದ್ದಾರೆ. ನಂತರ 9 ಜನರಿಂದ ಜೋಳ ಪಡೆದಿದ್ದು, ಮಾ.30ಕ್ಕೆ ಅವಧಿ ಮುಗಿದಿದೆ ಎಂದು ಕೇಂದ್ರ ಬಂದ್ ಮಾಡಲಾಗಿದೆ. ಇದು ನೋಂದಣಿ ಮಾಡಿಸಿದ್ದ ಉಳಿದ ರೈತರನ್ನು ಅತಂತ್ರ ಸ್ಥಿತಿಗೆ ತಳ್ಳಿದೆ.

ನಿರ್ಲಕ್ಷೃ ದೂರು
ಸರ್ಕಾರ ಮಾ.1 ರಿಂದ ಜೋಳ ಖರೀದಿಸಲು ಆದೇಶ ಹೊರಡಿಸಿತ್ತು. ಆದರೆ, ಅಧಿಕಾರಿಗಳು ಮಾ.15 ವರೆಗೆ ಬರೀ ನೋಂದಣಿ ಮಾಡಿಕೊಂಡಿದ್ದಾರೆ. ಪುನಃ ಮಾ.30ರವರೆಗೆ ಅವಕಾಶ ನೀಡಿದಾಗಲೂ ವಿವಿಧ ನೆಪಗಳನ್ನು ಹೇಳಿ ಕೊನೆಯ 3-4 ದಿನ ಇರುವಾಗ ಜೋಳ ಖರೀದಿಸಿ ಅಧಿಕಾರಿಗಳು ಕೈತೊಳೆದುಕೊಂಡಿದ್ದಾರೆ ಎಂಬುದು ರೈತರ ಆರೋಪವಾಗಿದೆ.

ಜೋಳಕ್ಕೆ ಉತ್ತಮ ಬೆಲೆ ಇಲ್ಲದಿರುವಾಗ ರೈತರ ಅನುಕೂಲಕ್ಕಾಗಿ ಸರ್ಕಾರ ಜೋಳ ಖರೀದಿ ಆರಂಭಿಸಿದರೂ ಉಪಯೋಗವಾಗಲಿಲ್ಲ. ಬಿಸಿಲಲ್ಲಿ ಅಲೆದಾಡಿ ಹಣ ಖರ್ಚು ಮಾಡಿ ನೋಂದಣಿ ಮಾಡಿದರೂ ಈಗ ಖರೀದಿ ಕೇಂದ್ರ ಮುಚ್ಚಲಾಗಿದೆ. ಅಧಿಕಾರಿಗಳನ್ನು ಕೇಳಿದರೆ ಸರ್ಕಾರಕ್ಕೆ ಪತ್ರ ಬರೆದಿದ್ದೀವಿ, ಆದೇಶ ಬಂದ ನಂತರ ಮತ್ತೆ ಖರೀದಿಸುತ್ತೇವೆ ಎನ್ನುತ್ತಿದ್ದಾರೆ. ಕೇಂದ್ರ ತೆರೆದ ಆರಂಭದಲ್ಲಿ ಖರೀದಿಸದೆ ಕೊನೆಯಲ್ಲಿ ಖರೀದಿ ಮಾಡಿದ್ದು ನೋಡಿದರೆ ಸರ್ಕಾರ ಜೋಳ ಖರೀದಿಗೆ ಹಿಂದೇಟು ಹಾಕುತ್ತಿದೆ ಎನಿಸುತ್ತಿದೆ.
|ಶ್ರೀರಾಮುಲು ರೈತ

ಜೋಳ ಖರೀದಿಸಲು ಮಾ.30 ಕೊನೇ ದಿನವಾಗಿತ್ತು. ತಾಲೂಕಿನಲ್ಲಿ 1224 ರೈತರು ನೋಂದಣಿ ಮಾಡಿಸಿದ್ದರು. ಅದರಲ್ಲಿ 10 ರೈತರಿಂದ ಜೋಳ ಖರೀದಿಸಲಾಗಿದೆ. ಸಮಯ ಮುಗಿದಿದ್ದರಿಂದ ಖರೀದಿ ಪ್ರಕ್ರಿಯೆ ನಿಲ್ಲಿಸಲಾಗಿದೆ. ಮತ್ತೆ ಕೇಂದ್ರ ಆರಂಭಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರದ ಆದೇಶ ಬಂದ ನಂತರ ಜೋಳ ಖರೀದಿಸಲಾಗುವುದು.
|ಅರುಣ್ ಕುಮಾರ್ ಜಿಲ್ಲಾ ಆಹಾರ ನಿಗಮ ಅಧಿಕಾರಿ ರಾಯಚೂರು