More

    ಹಸಿ ಕಸದಿಂದ ಸಾವಯವ ಗೊಬ್ಬರ

    ಸಂದೀಪ್ ಸಾಲ್ಯಾನ್ ಬಂಟ್ವಾಳ
    ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಮನೆ, ಅಂಗಡಿಗಳಲ್ಲಿ ಸಂಗ್ರಹಗೊಂಡ ಹಸಿ ಕಸದಿಂದ ಸಾವಯವ ಗೊಬ್ಬರ ತಯಾರಿಸುವ ಪ್ರಕ್ರಿಯೆಗೆ ಬಂಟ್ವಾಳ ಪುರಸಭೆ ಚಾಲನೆ ನೀಡಿದೆ.
    ತ್ಯಾಜ್ಯದಿಂದ ಗೊಬ್ಬರ ತಯಾರಿಸುವುದಾಗಿ ಹಲವು ವರ್ಷಗಳಿಂದ ಬಂಟ್ವಾಳ ಪುರಸಭೆ ಹೇಳಿಕೊಂಡು ಬಂದಿದ್ದರೂ ಅನುಷ್ಠಾನಕ್ಕೆ ಬಂದಿರಲಿಲ್ಲ. ಇದೇ ಮೊದಲ ಬಾರಿಗೆ ಕೊಳೆಯುವ ಹಸಿ ತ್ಯಾಜ್ಯಗಳನ್ನು ಬಳಸಿ ಗೊಬ್ಬರ ತಯಾರಿಸುವ ಪ್ರಾಯೋಗಿಕ ಪ್ರಯತ್ನಕ್ಕೆ ಮುನ್ನುಡಿ ಬರೆಯಲಾಗಿದೆ. ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರ ಸೂಚನೆ ಹಾಗೂ ಮಾರ್ಗದರ್ಶನದಲ್ಲಿ ಪುರಸಭೆಯ ಪೌರಕಾರ್ಮಿಕರು ಸ್ವತಃ ಆಸಕ್ತಿಯಿಂದ ಗೊಬ್ಬರ ತಯಾರಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

    ಬಂಟ್ವಾಳ ಪುರಸಭೆಯಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಇಲ್ಲದೆ ಇರುವುದರಿಂದ ಇಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡುವುದೇ ದೊಡ್ಡ ಸವಾಲು. ಮನೆಮನೆಗಳಿಂದ ಸಂಗ್ರಹಿಸಿ ತಂದ ಕಸವನ್ನು ಲಾರಿಗೆ ತುಂಬಿ ಬಳಿಕ ಮಂಗಳೂರಿನ ಡಂಪಿಂಗ್‌ಯಾರ್ಡ್‌ಗೆ ಸಾಗಿಸುವರೆಗೆ ತ್ಯಾಜ್ಯ ನಿರ್ವಹಣೆ ಮಾಡುವುದು ಬಂಟ್ವಾಳ ಪುರಸಭೆಗೆ ಹರಸಾಹಸದ ಕೆಲಸ. ಇನ್ನು ಮನೆಗಳಲ್ಲಿ, ಅಂಗಡಿಗಳಲ್ಲಿ, ಹೋಟೆಲ್‌ಗಳಲ್ಲಿ ನೀಡಿದ ಒಟ್ಟು ಕಸವನ್ನು ಹಸಿ ಕಸ, ಒಣಕಸ ಎಂದು ಪ್ರತ್ಯೇಕಿಸುವುದು ಕೂಡ ತಲೆ ನೋವಿನ ಕೆಲಸ. ಇದಕ್ಕೆಂದೇ ಈ ಹಿಂದೆ ಪುರಸಭಾ ವ್ಯಾಪ್ತಿಯ ಮನೆಗಳಿಗೆ ಕೆಂಪು ಹಾಗೂ ಹಸಿರು ಬಣ್ಣದ ಎರಡೆರಡು ಬಕೆಟ್‌ಗಳನ್ನು ವಿತರಿಸಲಾಗುತ್ತಿತ್ತು. ಆದರೂ ಕೆಲವೊಂದು ತಾಂತ್ರಿಕ ಅಡೆತಡೆಗಳಿಂದಾಗಿ ಇದೂ ವಿಫಲವಾಗಿತ್ತು.
    ಹಸಿ ಕಸ ಒಣ ಕಸ ಎಂದು ಪ್ರತ್ಯೇಕಗೊಂಡ ತ್ಯಾಜ್ಯ ಸಾಗಾಟ ಲಾರಿಯಲ್ಲಿ ಮತ್ತೆ ಒಂದಾಗಿ ಡಂಪಿಂಗ್ ಯಾರ್ಡ್‌ಗೆ ತಲುಪುತ್ತಿತ್ತು. ಈಗ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರು ಹಸಿ ಕಸವನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸುವ ಪ್ರಯತ್ನ ಆರಂಭಿಸಿದ್ದಾರೆ. ಪ್ರಯತ್ನ ಯಶ ಕಂಡರೆ ಇದೇ ಮಾದರಿಯಲ್ಲಿ ಪುರಸಭೆಯ ಹೆಚ್ಚಿನ ವಾರ್ಡ್‌ಗಳಲ್ಲಿ ಗೊಬ್ಬರ ತಯಾರಿ ಘಟಕ ತಯಾರಿಸುವ ಆಸಕ್ತಿ ವ್ಯಕ್ತಪಡಿಸಿದ್ದಾರೆ.

    ಸರಳ ಗೊಬ್ಬರ ತಯಾರಿ ಘಟಕ: ಬಿದಿರಿನ ಸಲಾಕೆಯ ಆಧಾರ ಪಟ್ಟಿಗಳಿಂದ ನಿರ್ಮಿಸಿದ ಗೊಬ್ಬರ ತೊಟ್ಟಿಗೆ ಹೆಣೆದ ತೆಂಗಿನ ಗರಿಯನ್ನು ಇಟ್ಟು ಪ್ರತಿನಿತ್ಯ ಸಂಗ್ರಹವಾಗುವ ಹಸಿ ಕಸವನ್ನು ಸಣ್ಣದಾಗಿ ಹೆಚ್ಚಿ ಹಂತ ಹಂತವಾಗಿ ಕಲಸಿದ ಸೆಗಣಿ ನೀರನ್ನು ಸುರಿಯುತ್ತಿದ್ದಾರೆ. 45 ದಿನಗಳಲ್ಲಿ ಸಾವಯವ ಗೊಬ್ಬರ ಪಡೆಯಲು ಸಾಧ್ಯವಿದೆ. ಈಗ ಪ್ರಾಯೋಗಿಕವಾಗಿ ಪುರಸಭೆ ಕಚೇರಿ ಹಿಂಭಾಗ ಈ ಪ್ರಯತ್ನ ನಡೆಸಲಾಗಿದ್ದು, ಸಾವಯವ ಗೊಬ್ಬರ ತಯಾರಿ ಮೂಲಕ ಹಸಿ ಕಸಕ್ಕೆ ಮುಕ್ತಿ ನೀಡಲಾಗುತ್ತದೆ. ಉಳಿದಂತೆ ಒಣ ಕಸವನ್ನು ಈ ಹಿಂದಿನಂತೆ ಡಂಪಿಂಗ್ ಯಾರ್ಡ್‌ಗೆ ಕಳುಹಿಸಿಕೊಡಲಾಗುತ್ತಿದೆ. ಗೊಬ್ಬರದಿಂದ ಆದಾಯ ಪಡೆಯಬಹುದಾಗಿದ್ದು, ಮಂಗಳೂರಿಗೆ ಸಾಗಾಟವಾಗುವ ಕಸದ ಹೊರೆಯೂ ಕಡಿಮೆಯಾಗಲಿದೆ. ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ಎರೆಹುಳ ಘಟಕ ಸ್ಥಾಪಿಸುವ ಚಿಂತನೆಯೂ ಪುರಸಭೆಗೆ ಇದೆ.
     
    ಸಾರ್ವಜನಿಕರ ಸಹಭಾಗಿತ್ವ ಅಗತ್ಯ: ಕಸ ವಿಲೇವಾರಿಗೆ ಬಂಟ್ವಾಳ ಪುರಸಭೆ ಅವಿರತವಾಗಿ ಶ್ರಮಿಸುತ್ತಿದ್ದರೂ ಕೆಲ ಭಾಗಗಳಲ್ಲಿ ಜನರ ಅನಾಗರಿಕ ಪ್ರವೃತ್ತಿಯಿಂದಾಗಿ ರಸ್ತೆ ಬದಿಗಳಲ್ಲಿ ಕಸದ ರಾಶಿ ಕಂಡುಬರುತ್ತಿದೆ. ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯಬಾರದು ಎನ್ನುವ ಸೂಚನ ಫಲಕದ ಬಳಿಯೇ ಕಸ ಎಸೆಯುವ ಅವಿದ್ಯಾವಂತರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮನೆಗಳಲ್ಲಿ ಸಂಗ್ರಹವಾಗುವ ಕಸವನ್ನು ಎಲ್ಲೆಂದರಲ್ಲಿ ಬಿಸಾಡಿ ಅನಾಗರಿಕರೆನಿಸಿಕೊಳ್ಳುವ ಬದಲು, ಹಸಿ ಕಸ ಹಾಗೂ ಒಣ ಕಸವನ್ನು ಪ್ರತ್ಯೇಕಿಸಿ ನೀಡಿದ್ದಲ್ಲಿ ಪುರಸಭೆಯ ಪೌರಕಾರ್ಮಿಕರಿಗೂ ಶ್ರಮದ ಉಳಿತಾಯವಾಗಲಿದೆ. ಹಸಿ ತ್ಯಾಜ್ಯ ಬಳಸಿ ಗೊಬ್ಬರ ತಯಾರಿಸುವ ಪುರಸಭೆಯ ಪ್ರಯತ್ನಕ್ಕೂ ಸಹಕಾರಿಯಾಗಲಿದೆ.

    ಪುರಸಭಾ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಹಸಿ ಕಸದಿಂದ ಸಾವಯವ ಗೊಬ್ಬರ ತಯಾರಿಸುವ ಪ್ರಯತ್ನ ಆರಂಭಿಸಿದ್ದೇವೆ. ಬಂಟ್ವಾಳ ಪುಸರಭೆಯಲ್ಲಿ ಇದೊಂದು ಪ್ರಾಯೋಗಿಕ ಪ್ರಯತ್ನ. ಇದು ಯಶಸ್ವಿಯಾದಲ್ಲಿ ಪುರಸಭೆಯ ಕೆಲ ವಾರ್ಡ್‌ಗಳಲ್ಲೂ ಇದೇ ಮಾದರಿಯಲ್ಲಿ ಗೊಬ್ಬರ ತಯಾರಿಸುವ ಘಟಕ ಆರಂಭಿಸುವ ಯೋಚನೆ ಇದೆ.
    ಲೀನಾ ಬ್ರಿಟ್ಟೋ, ಮುಖ್ಯಾಧಿಕಾರಿ ಬಂಟ್ವಾಳ ಪುರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts