ಬೆಂಗಳೂರು: ‘ಕ್ರೇಜಿಸ್ಟಾರ್’ ರವಿಚಂದ್ರನ್ ಪುತ್ರ ಮನುರಂಜನ್ ಕೊನೆಗೂ ಮಾತನಾಡಿದ್ದಾರೆ. ಅವರು ಮಾತನಾಡಲ್ಲ. ತುಂಬ ರಿಸರ್ವ್ ಎಂದವರಿಗೆ ಉತ್ತರ ಕೊಟ್ಟಿದ್ದಾರೆ. ಕಳೆದ ಹಲವು ತಿಂಗಳಿಂದ ಮನೆಯ ನಾಲ್ಕು ಗೋಡೆಗಳಿಗಷ್ಟೇ ಗೊತ್ತಿದ್ದ ವಿಚಾರಗಳನ್ನು ಬಹಿರಂಗವಾಗಿ ಹೊರಗೆಡವಿದ್ದಾರೆ. ಇಷ್ಟಕ್ಕೂ ಏನದು ಸತ್ಯ? ಆ ಸತ್ಯವನ್ನು ಅವರ ಮಾತಿನಲ್ಲಿಯೇ ವಿಜಯವಾಣಿ ನಿಮ್ಮ ಮುಂದಿಟ್ಟಿದೆ.
‘ನನಗೆ ಗೊತ್ತಿಲ್ಲದೆ ನಾನು ದಪ್ಪ ಆಗುತ್ತೇನೆ. ನೋಡಿದವರು ಮನುರಂಜನ್ ದಪ್ಪ ಆಗಿದ್ದಾನೆ. ವರ್ಕೌಟ್ ಮಾಡಲ್ವ ಎಂದುಕೊಳ್ಳುತ್ತಾರೆ. ಆದರೆ, ನನ್ನ ಸಮಸ್ಯೆ ಅವರಿಗೆ ಗೊತ್ತಿಲ್ಲ. ತುಂಬ ಗಂಭೀರ ಆರೋಗ್ಯ ಸಮಸ್ಯೆಯಿಂದ ಇದೀಗ ಹೊರಬರುತ್ತಿದ್ದೇನೆ. ನನ್ನ ದೇಹದ ಎಡಭಾಗದಲ್ಲಿ ನರದೌರ್ಬಲ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಸುದೀರ್ಘ ದಿನಗಳ ಕಾಲ ಆಸ್ಪತ್ರೆಯಲ್ಲಿ ಕಳೆದಿದ್ದೇನೆ. ಈಗಲೂ ಆರು ತಿಂಗಳಿಗೊಮ್ಮೆ ಬೆನ್ನಿಗೆ ಸ್ಟೆರಾಯ್್ಡ ಹಾಕಿಸಿಕೊಳ್ಳುತ್ತೇನೆ. ‘ಬೃಹಸ್ಪತಿ’ ಸಿನಿಮಾ ಬಂದಿದ್ದೂ ಗೊತ್ತಾಗಲಿಲ್ಲ, ಹೋಗಿದ್ದೂ ಗೊತ್ತಾಗಲಿಲ್ಲ. ಬೇರೆಯವರೆಲ್ಲ ಆ ಸಿನಿಮಾ ಬಗ್ಗೆ ಕೇಳ್ತಾರೆ. ಆ ಚಿತ್ರದಿಂದಾಗಿ ಮಾನಸಿಕ ಒತ್ತಡ ಹೆಚ್ಚಾಯಿತು. ಒಂದೊಂದೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಲು ಆರಂಭವಾಯಿತು. ದಪ್ಪ ಆಗುತ್ತ ಹೋದೆ. ಹೀಗಿರುವಾಗಲೇ ಸಿನಿಮಾ ಮೇಲಿನ ಪ್ರೀತಿಗೆ ‘ಪ್ರಾರಂಭ’ ಸಿನಿಮಾ ಸಿಕ್ಕಿತು. ವೇಟ್ ಎತ್ತಿ ವರ್ಕೌಟ್ ಮಾಡಲು ಆಗುವುದಿಲ್ಲ. ಅದನ್ನು ಬಿಟ್ಟರೆ ನಾನು ಫೈನ್’ ಎನ್ನುತ್ತಾರೆ ಮನುರಂಜನ್.
‘ರಣಧೀರ’ ಬಂದಿದ್ದರೆ ಸ್ಟಾರ್ ಆಗಿರುತ್ತಿದ್ದೆ: ‘ನಾನು ರವಿಚಂದ್ರನ್ ಮಗನಾಗಿ, ಅಪ್ಪನ ನಿರ್ದೇಶನದ ‘ರಣಧೀರ – ಪ್ರೇಮಲೋಕದಲ್ಲಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರೆ, ನಾನು ಅದಾಗಲೇ ಸ್ಟಾರ್ ಆಗಿರುತ್ತಿದ್ದೆ. ಆದರೆ, ‘ಸಾಹೇಬ’ ಮೂಲಕ ಬಂದೆ. ನಾನಿಷ್ಟ ಪಟ್ಟ ಸಿನಿಮಾ ಅದು. ಈಗಲೂ ಅದನ್ನು ತುಂಬ ಖುಷಿಯಿಂದ ಹೇಳಿಕೊಳ್ಳುತ್ತೇನೆ. ಇದೀಗ ಇವೆಲ್ಲವುಗಳಿಂದ ಸಾಕಷ್ಟು ಕಲಿತಿದ್ದೇನೆ. ತಮ್ಮನಿಗೂ ನನಗಾದ ಪಾಠಗಳನ್ನೇ ಹೇಳುತ್ತಿದ್ದೇನೆ. ನಾನು ತುಂಬ ರಿಸರ್ವ್ ಅನ್ನೋ ಮಾತಿದೆ. ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ’ ಎಂಬುದು ಮನುರಂಜನ್ ಮಾತು.
2021ರಲ್ಲಿ ಮದುವೆ, ಸೂರಿ ಜತೆ ಸಿನಿಮಾ
ಇನ್ನು ‘ಪ್ರಾರಂಭ’ ಸಿನಿಮಾದ ಬಹುತೇಕ ಕೆಲಸ ಮುಗಿಸಿರುವ ಮನುರಂಜನ್, ‘ಮುಗಿಲ್ಪೇಟೆ’ ಚಿತ್ರೀಕರಣದಲ್ಲಿ ಬಿಜಿ ಯಾಗಿದ್ದಾರೆ. ಇವೆಲ್ಲದರ ಜತೆಗೆ ಇದೇ ವರ್ಷ ನಿರ್ದೇಶಕ ಸೂರಿ ಅವರ ಜತೆಗೂ ಕೆಲಸ ಮಾಡಲಿದ್ದಾರೆ. ‘ವಯಸ್ಸು ಆಗ್ತಿದೆ. ಈಗಾಗಲೇ 32. ಹಾಗಾಗಿ ಇದೇ ವರ್ಷ ಮದುವೆ ಫಿಕ್ಸ್. ಲವ್ ಅಲ್ಲ, ಮನೆಯಲ್ಲಿ ನೋಡಿದ ಹುಡುಗಿಯನ್ನೇ ಮದುವೆ ಆಗ್ತೀನಿ’ ಎಂದು ಖುಷಿಯ ವಿಚಾರ ಹಂಚಿಕೊಂಡರು.
ಹಳೇ ನೆನಪುಗಳನ್ನು ಮತ್ತೆ ಬ(ಅ)ಗೆದ ಸನ್ನಿ ಲಿಯೋನ್; ಅವರು ಹತ್ತಿ ನಿಂತಿದ್ದಾದರೂ ಎಲ್ಲಿ…?
‘ಪುಷ್ಪ’ ಚಿತ್ರದ ನಿರ್ದೇಶಕ ಸುಕುಮಾರ್ ಜತೆ ಸಿನಿಮಾ ಮಾಡ್ತಾರಾ ದರ್ಶನ್?