ನವ ಮಂತ್ರಾಲಯದ ಶಿಲ್ಪಿ ಶ್ರೀ ಸುಜಯೀಂದ್ರ ತೀರ್ಥರು ಎಂದ ಶ್ರೀ ಸುಬುಧೇಂದ್ರ ತೀರ್ಥರು

ರಾಯಚೂರು: ಶ್ರೀ ಸುಜಯೀಂದ್ರ ತೀರ್ಥರು ಶ್ರೀ ರಾಘವೇಂದ್ರಸ್ವಾಮಿ ಮಠವನ್ನು ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸುಭದ್ರಗೊಳಿಸುವ ಮೂಲಕ ನವ ಮಂತ್ರಾಲಯ ನಿರ್ಮಾಣದ ಶಿಲ್ಪಿಗಳಾಗಿದ್ದಾರೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಪೂರ್ವ ಪೀಠಾಧಿಪತಿ ಶ್ರೀ ಸುಜಯೀಂದ್ರ ತೀರ್ಥರ ಜನ್ಮಾಷ್ಟೋತ್ತರ ಶತಮಾನೋತ್ಸವ ಹಾಗೂ ಪೀಠಾರೋಹಣದ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಇದಕ್ಕೂ ಮುಂಚೆ ಶ್ರೀ ಸುಜಯೀಂದ್ರ ತೀರ್ಥರ ಬೃಂದಾವನಕ್ಕೆ ವಿಶೇಷ ಅಭಿಷೇಕ, ಮಹಾ ಮಂಗಳಾರತಿ ಮತ್ತು ಅಲಂಕಾರ ನೆರವೇರಿಸಿದ ನಂತರದಲ್ಲಿ ಶ್ರೀ ಮೂಲ ರಾಮ ದೇವರ ಪೂಜೆಯನ್ನು ಶ್ರೀಗಳು ನೆರವೇರಿಸಿದರು. ನಂತರ ವಿದ್ವಾಂಸರಿಂದ ಪ್ರವಚನ ನಡೆಯಿತು.

ಈ ಸಂದರ್ಭ ಶ್ರೀಮಠದ ವಿದ್ವಾನ್ ರಾಜಾ ಗಿರಿಯಾಚಾರ್, ವಿದ್ವಾನ್ ಡಾ.ವಿ.ಆರ್.ಪಂಚಮುಖಿ, ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಪ್ರಾಚಾರ್ಯ ಡಾ.ಎನ್.ವಾದಿರಾಜಾಚಾರ್, ವ್ಯವಸ್ಥಾಪಕರಾದ ಎಸ್.ಕೆ.ಶ್ರೀನಿವಾಸರಾವ್, ಐ.ಪಿ.ನರಸಿಂಹಾಚಾರ್, ಪವಮಾನಾಚಾರ್ ಉಪಸ್ಥಿತರಿದ್ದರು.