ದೇಶದ ಮಠ, ಮಾನ್ಯಗಳು ಸಾಮಾಜಿಕ ಚೇತನಗಳು: ಅಮಿತ್‌ ಷಾ

< ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬಣ್ಣನೆ>  ಮಂತ್ರಾಲಯದಲ್ಲಿ ಆರೋಗ್ಯಶಾಲೆ ಉದ್ಘಾಟನೆ>

ಮಂತ್ರಾಲಯ: ದೇಶದ ಸಂಸ್ಕೃತಿ, ಪರಂಪರೆ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಮಠ-ಮಂದಿರಗಳು ಇಂದು ಕೇವಲ ಧಾರ್ಮಿಕ ಕೇಂದ್ರಗಳಾಗಿ ಉಳಿದಿಲ್ಲ. ಸಾಮಾಜಿಕ ಚೇತನ ಮತ್ತು ಸೇವಾ ಕೇಂದ್ರಗಳಾಗಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ.

ಶ್ರೀ ರಾಘವೇಂದ್ರಸ್ವಾಮಿ ಮಠದಿಂದ ನವೀಕರಿಸಲಾದ ಶ್ರೀ ಸುಜಯೀಂದ್ರ ತೀರ್ಥ ಆರೋಗ್ಯ ಶಾಲೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಸಮಾಜಕ್ಕೆ ಆಕಸ್ಮಿಕ ಅಪತ್ತು ಎದುರಾದ ಸಂದರ್ಭ ಹಾಗೂ ಅವಶ್ಯ ಸಂದರ್ಭದಲ್ಲಿ ಮಠ-ಮಂದಿರಗಳು ಸದಾ ಮುಂದೆ ನಿಂತು ಕೆಲಸ ಮಾಡುತ್ತಾ ಬಂದಿವೆ. ರಾಯರ ದರ್ಶನಕ್ಕಾಗಿ ಮಂತ್ರಾಲಯಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಅವರ ಆರೋಗ್ಯ ರಕ್ಷಣೆಗಾಗಿ ಶ್ರೀಗಳು ಆಸ್ಪತ್ರೆ ನಿರ್ಮಾಣ ಮಾಡಿರುವುದು ರಾಯರ ಆಶೀರ್ವಾದದ ರೂಪವಾಗಿದೆ. ಮಂತ್ರಾಲಯ ಮಠವು ಜಾತಿ, ಧರ್ಮ ಬೇಧವಿಲ್ಲದೆ ಎಲ್ಲರಿಗೂ ಆರೋಗ್ಯ ಸೇವೆ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದರು.

ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮಾತನಾಡಿ, ಯತಿ ಶ್ರೇಷ್ಠರಾದ ಗುರುರಾಯರು ತಮ್ಮ ಅಪಾರ ಮಹಿಮೆಯಿಂದ ವಿಶ್ವಗುರುವಾಗಿದ್ದಾರೆ. ಬೃಂದಾವನಸ್ಥರಾದ ನಂತರವೂ ಅಸಂಖ್ಯ ಭಕ್ತರ ಅಭೀಷ್ಠೆಗಳನ್ನು ಈಡೇರಿಸುವ ಮೂಲಕ ಭವರೋಗ ವೈದ್ಯರೆಂದು ಪ್ರಖ್ಯಾತರಾಗಿದ್ದಾರೆ. ರಾಯರ ಸೇವೆಗೆ ಆಗಮಿಸುವ ಭಕ್ತರ ಜತೆಗೆ ಸುತ್ತಮುತ್ತಲ ಗ್ರಾಮಸ್ಥರಿಗೆ ಉಚಿತ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ ಎಂದರು.

ಈ ಸಂದರ್ಭ ಶ್ರೀಮಠದ ವಿದ್ವಾನ್ ಡಾ.ರಾಜಾ ಗಿರಿಯಾಚಾರ್, ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸ ಹಾಗೂ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.

ರಾಯರ ದರ್ಶನ:  ಮಂತ್ರಾಲಯದ ಟಿಟಿಡಿ ಪ್ರವಾಸಿ ಮಂದಿರದಲ್ಲಿ ಎರಡು ದಿನಗಳಿಂದ ನಡೆಯತ್ತಿರುವ ಆರ್‌ಎಸ್‌ಎಸ್ ರಾಷ್ಟ್ರೀಯ ಸಮನ್ವಯ ಬೈಠಕ್‌ನಲ್ಲಿ ಭಾಗವಹಿಸಲು ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ಭೇಟಿ ಶನಿವಾರ ನೀಡಿ ರಾಯರ ಬೃಂದಾವನ ದರ್ಶನ ಪಡೆದು ಕೆಲ ಸಮಯ ಧ್ಯಾನಸಕ್ತರಾಗಿ ಪ್ರಾರ್ಥಿಸಿದರು. ನಂತರ ಶ್ರೀ ಸುಬುಧೇಂದ್ರ ತೀರ್ಥರು ಅಮೀತ್ ಷಾರನ್ನು ಸನ್ಮಾನಿಸಿ, ಆಶೀರ್ವದಿಸಿದರು. ನಂತರ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳೊಂದಿಗೆ ಕುಶಲೋಪರಿ ನಡೆಸಿದರು. ಇದಕ್ಕೂ ಮೊದಲು ಶ್ರೀಮಠದಿಂದ ನಡೆಸಲಾಗುವ ಗೋಶಾಲೆಗೆ ಭೇಟಿ ನೀಡಿ, ಗೋಪೂಜೆ ನಡೆಸಿ ಸಾವಿರಕ್ಕೂ ಹೆಚ್ಚು ಗೋವುಗಳನ್ನು ಪೋಷಿಸುತ್ತಿರುವ ಶ್ರೀಮಠದ ಕಾರ್ಯ ಶ್ಲಾಘಿಸಿದರು.