ಮಂಗಳೂರು: ಕಣ್ಣೂರು ಬಳಿ ಬಿರುಕು ಬಿಟ್ಟ ತುಂಬೆ ನೀರು ಪೂರೈಕೆ ಮುಖ್ಯ ಪೈಪ್ಲೈನ್ ದುರಸ್ತಿ ಕಾಮಗಾರಿಗೆ ಮಳೆ ಅಡ್ಡಿಯಾಗಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಪೈಪ್ ದುರಸ್ತಿಗಾಗಿ ತೋಡಿರುವ ಗುಂಡಿಯಲ್ಲಿ ನೀರು ತುಂಬುತ್ತಿದೆ. ಮಳೆ ಕಡಿಮೆಯಾದರೆ ಗುರುವಾರ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಪಾಲಿಕೆ ಇಂಜಿನಿಯರ್ಗಳು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗಿನಿಂದ ನಿರಂತರ ಕೆಲಸ ನಡೆಯುತ್ತಿದೆ. ಬುಧವಾರ ದುರಸ್ತಿ ಕಾಮಗಾರಿ ಮುಗಿಸುವ ಕುರಿತು ಪಾಲಿಕೆ ಇಂಜಿನಿಯರ್ಗಳು ವಿಶ್ವಾಸ ವ್ಯಕ್ತಪಡಿಸಿದ್ದರು. ಮಳೆ ಹೆಚ್ಚಾಗಿರುವುದು ಅಧಿಕಾರಿಗಳ ನಿದ್ದೆಗೆಡಿಸಿದೆ. ಒಡೆದಿರುವ ಪೈಪ್ ಒಳಗಿರುವ ನೀರು ತೆರವು ಮೊದಲ ಸವಾಲಾಗಿತ್ತು. ಪಂಪ್ ಬಳಸಿ ಎರಡು ದಿನ ನೀರು ತೆಗೆಯುತ್ತಿದ್ದರೂ ಖಾಲಿಯಾಗುತ್ತಿಲ್ಲ. ಪ್ರಸ್ತುತ ಮಳೆಯಿಂದಾಗಿ ನೀರಿನ ಒಸರು ಗುಂಡಿಯಲ್ಲಿ ತುಂಬುತ್ತಿದೆ. ಮೂರು ಪಂಪ್ ಬಳಸಿ ನೀರು ಹೊರಹಾಕಲಾಗುತ್ತಿದೆ.
ಭಾನುವಾರ ರಾತ್ರಿಯಿಂದ ನಗರಕ್ಕೆ ನೀರು ಪೂರೈಕೆ ಸ್ಥಗಿತಗೊಂಡಿದ್ದು, ಪಾಲಿಕೆಯಲ್ಲಿರುವ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ವೆನ್ಲಾಕ್, ಲೇಡಿಗೋಷನ್ ಆಸ್ಪತ್ರೆಗಳಿಗೆ ಟ್ಯಾಂಕರ್ ನೀರು ಒದಗಿಸಲಾಗಿದೆ. ಜತೆಗೆ ಖಾಸಗಿ ಹೋಟೆಲ್, ವಸತಿ ಸಮುಚ್ಚಯಗಳು, ಮನೆಯವರು ಖಾಸಗಿಯಾಗಿ ಟ್ಯಾಂಕರ್ ನೀರು ತರಿಸಿಕೊಳ್ಳತ್ತಿದ್ದಾರೆ. ಕೆಲವು ಮನೆಗಳಲ್ಲಿ ಮಳೆ ನೀರನ್ನು ಡ್ರಮ್, ಬಕೆಟ್ಗಳಲ್ಲಿ ಸಂಗ್ರಹಿಸಿ ಉಪಯೋಗಿಸುತ್ತಿದ್ದಾರೆ.
ವಿಜಯವಾಣಿ ಎಚ್ಚರಿಸಿತ್ತು
ನೀರು ಸರಬರಾಜು ಪೈಪ್ ಒಡೆಯುವ ಸಾಧ್ಯತೆ ಇರುವ ಕುರಿತು ವಿಜಯವಾಣಿ ಈ ಹಿಂದೆಯೇ ಎಚ್ಚರಿಸಿತ್ತು. ನೀರಿನ ಕೊಳವೆ ಈಗಲೂ ಅಸುರಕ್ಷಿತ’ ಎಂಬ ಶೀರ್ಷಿಕೆಯಲ್ಲಿ ಮೇ 1ರಂದು ವಿಶೇಷ ವರದಿ ಪ್ರಕಟಿಸಿತ್ತು. ಆ ಬಳಿಕವೂ ಪಾಲಿಕೆ ಎಚ್ಚೆತ್ತುಕೊಂಡಿರಲಿಲ್ಲ.
ದಿನ-ರಾತ್ರಿ ನಿರಂತರ ದುರಸ್ತಿ ಕೆಲಸ ನಡೆಯುತ್ತಿದೆ. ಮಳೆಯಿಂದ ಪೈಪ್ ಜೋಡಣೆಗೆ ಸಂಬಂಧಿಸಿದ ವಿದ್ಯುತ್ ಸಂಬಂಧಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ತುಂಬೆಯಲ್ಲಿ ಸಾಕಷ್ಟು ನೀರಿದ್ದರೂ ಪೈಪ್ ಒಡೆದ ಕಾರಣ, ಪೂರೈಕೆ ಮಾಡಲಾಗುತ್ತಿಲ್ಲ. ಸಾರ್ವಜನಿಕರು ಪಾಲಿಕೆಯೊಂದಿಗೆ ಸಹಕರಿಸಬೇಕು.
ಮೊಹಮ್ಮದ್ ನಜೀರ್, ಪಾಲಿಕೆ ಆಯುಕ್ತ