Friday, 16th November 2018  

Vijayavani

Breaking News

ಮುಂಗಾರು ಬಲು ಜೋರು

Saturday, 02.06.2018, 3:03 AM       No Comments

ಬೆಂಗಳೂರು: ಮೇ 29ರಂದು ಕೇರಳ ಹಾಗೂ ರಾಜ್ಯದ ಕರಾವಳಿ ಜಿಲ್ಲೆಗಳನ್ನು ಪ್ರವೇಶಿಸಿದ್ದ ಮುಂಗಾರು ದಕ್ಷಿಣ ಒಳನಾಡಿನ ಜಿಲ್ಲೆಗಳನ್ನೂ ಪ್ರವೇಶಿಸಿದ್ದು, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.

ಪ್ರಸಕ್ತ ವರ್ಷದಲ್ಲಿ ವಾಡಿಕೆಗಿಂತ

3 ದಿನ ಮೊದಲೇ, ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಮುಂಗಾರು ಪ್ರವೇಶಿಸಿತ್ತು. ಮೇ 30ರಂದು ಕೊಡಗು, ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸಿದ್ದವು. ಜೂನ್ 1 ಅಥವಾ 2ಕ್ಕೆ ರಾಜ್ಯದ ಬಹುತೇಕ ಜಿಲ್ಲೆಗಳನ್ನು ಪ್ರವೇಶಿಸಬೇಕಿತ್ತು. ಆದರೆ ಮೇ 30 ರಿಂದ ಮುಂಗಾರು ಮಾರುತಗಳು ತಟಸ್ಥವಾಗಿದ್ದವು. ಶುಕ್ರವಾರ(ಜೂ.1)ಮುಂಗಾರು ಚುರುಕಾಗಿರುವ ಲಕ್ಷಣಗಳು ಕಂಡುಬಂದಿವೆ.

ಇಷ್ಟೊತ್ತಿಗಾಗಲೇ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂಗಾರು ಮಳೆ ಅಬ್ಬರ ಕಾಣಿಸಿಕೊಳ್ಳಬೇಕಿತ್ತು. ಆದರೆ ಮುಂಗಾರು ಮಾರುತ ಕ್ಷೀಣಿಸಿದ್ದ ಕಾರಣ ಪೂರ್ಣ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಮುಂಗಾರು ಪ್ರವೇಶವಾಗಿಲ್ಲ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಪೂರ್ಣ ರಾಜ್ಯವನ್ನು ಮುಂಗಾರು ಆವರಿಸುವ ನಿರೀಕ್ಷೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ ‘ವಿಜಯವಾಣಿ’ಗೆ ತಿಳಿಸಿದರು. ತುಮಕೂರಿನ ನಾದೂರು ಗ್ರಾಮದಲ್ಲಿ ಗುರುವಾರ ರಾತ್ರಿ ಬಿರುಗಾಳಿಗೆ 4 ಮನೆಗಳ ಛಾವಣಿ ಕುಸಿದು ಅಪಾರ ನಷ್ಟ ಉಂಟಾಗಿದೆ. ದಾಳಿಂಬೆ ಗೋದಾಮಿನ ಛಾವಣಿಯ ದೊಡ್ಡ ಶೀಟ್ ಗಾಳಿಯ ರಭಸಕ್ಕೆ ಅರ್ಧ ಕಿ.ಮೀ. ದೂರ ಬಿದ್ದಿದೆ.

ಬೆಳಗಾವಿ ತತ್ತರ

ಬೆಳಗಾವಿ ಜಿಲ್ಲೆಯಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿದು ಹಾನಿ ಸಂಭವಿಸಿದೆ. ಅಲ್ಲಲ್ಲಿ ಮರ, ವಿದ್ಯುತ್ ಕಂಬಗಳು ಬಿದ್ದಿದ್ದು ಸಂಚಾರಕ್ಕೆ ತೀವ್ರ ಅಡಚಣೆಯಾಯಿತು.

ಉ.ಕರ್ನಾಟಕದಲ್ಲಿ ಮಳೆಯಬ್ಬರ

ತೆಲಂಗಾಣ ಹಾಗೂ ಆಂಧ್ರ ಪ್ರದೇಶದ ಕರಾವಳಿ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ರಾಯಚೂರು, ವಿಜಯಪುರ, ಯಾದಗಿರಿ ಸೇರಿ ಬಹುತೇಕ ಜಿಲ್ಲೆಗಳಲ್ಲಿ ಜೂ.6ರ ವರೆಗೂ ಮಳೆ ಮುಂದುವರಿಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಎಲ್ಲೆಲ್ಲಿ ಅಧಿಕ ಮಳೆ?

ರಾಯಚೂರಿನ ಮುದ್ಗಲ್​ನಲ್ಲಿ 6 ಸೆಂ.ಮೀ., ಕಾರವಾರ, ಎನ್.ಆರ್. ಪುರದಲ್ಲಿ ತಲಾ 4, ಹುನಗುಂದ, ಕಂಪ್ಲಿಯಲ್ಲಿ ತಲಾ 3, ತಾವರೆಗೆರೆ, ಬಾಗಲಕೋಟೆ, ಜಮಖಂಡಿ, ಆಲಮಟ್ಟಿ, ಚಿತ್ರದುರ್ಗದಲ್ಲಿ ತಲಾ 2, ಕುಂದಾಪುರ, ನಿಪ್ಪಾಣಿ, ಹಿಡ್ಕಲ್ ಅಣೆಕಟ್ಟು, ಬಸವನಬಾಗೇವಾಡಿ, ಮುದ್ದೇಬಿಹಾಳ್, ತಾಳಿಕೋಟೆ, ಖಜೂರಿ, ಕಲಬುರಗಿ, ಆಲೂರು, ಬೇಗೂರಿನಲ್ಲಿ ತಲಾ 1 ಸೆಂ.ಮೀ. ಮಳೆ ದಾಖಲಾಗಿದೆ.

ವಾಡಿಕೆಗಿಂತ ಅಧಿಕ ಮಳೆ

ರಾಜ್ಯದಲ್ಲಿ ಪ್ರಸಕ್ತ ವರ್ಷದ ವಾಡಿಕೆಗಿಂತ ಅಧಿಕ ಮುಂಗಾರು ಪೂರ್ವ ಮಳೆ ದಾಖಲಾಗಿದೆ. ಮಾ.1ರಿಂದ ಮೇ 31ರವರೆಗೆ ವಾಡಿಕೆಯಂತೆ ಸರಾಸರಿ 125 ಮಿ.ಮೀ. ಮಳೆ ದಾಖಲಾಗುತ್ತಿತ್ತು. ಈ ಬಾರಿ 193ಮಿ.ಮೀ. ಮಳೆ ದಾಖಲಾಗಿದ್ದು, ಶೇ. 54 ಅಧಿಕ ಮಳೆಯಾಗಿದೆ.

Leave a Reply

Your email address will not be published. Required fields are marked *

Back To Top