ಬೆಂಗಳೂರು: ಸೈಕಲಾಜಿಕಲ್ ಥ್ರಿಲ್ಲರ್ ಶೈಲಿಯ ’ಮನರೂಪ‘ ಚಿತ್ರಕ್ಕೆ ಪ್ರತಿಷ್ಠಿತ 10ನೇ ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್ ನಲ್ಲಿ ಮೂರು ಪ್ರಶಸ್ತಿಗಳು ಒಲಿದಿವೆ. ನಿರ್ದೇಶಕ ಕಿರಣ್ ಹೆಗಡೆ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ, ಛಾಯಾಗ್ರಾಹಕ ಗೋವಿಂದರಾಜ್ ಅತ್ಯುತ್ತಮ ಸಿನಿಮಾ ಛಾಯಾಗ್ರಹಣ ಪ್ರಶಸ್ತಿ ಮತ್ತು ಅಮೋಘ್ ಸಿದ್ಧಾರ್ಥ್ ಅತ್ಯುತ್ತಮ ಸಹನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಈಗಾಗಲೇ ಟರ್ಕಿಯ ಇಸ್ತಾಂಬುಲ್ ಫಿಲ್ಮ್ ಅವಾರ್ಡ್ಸ್, ಅಮೆರಿಕದ ಮಯಾಮಿ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ಮುಂಬೈನ ಕೆಫೆ ಇರಾನಿ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ‘ಮನರೂಪ’ ಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದು, ಸದ್ಯ ಅಮೆಜಾನ್ ಪ್ರೈಮ್ನಲ್ಲಿ ಪ್ರದರ್ಶನಗೊಳ್ಳುತ್ತಿದೆ.
ಇದನ್ನೂ ಓದಿ: 2014ರಲ್ಲೇ ನಡೆದಿತ್ತು ಪ್ರಿಯಾಂಕಾ ಚೋಪ್ರಾ ಮದುವೆ!! ಹಾಗಾದರೆ ನಿಕ್ ಜೋನಸ್ ಪಿಗ್ಗಿಗೆ ಎರಡನೇ ಪತಿಯೇ?
ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಹೆಸರು ಗಳಿಸಿ ಚಿತ್ರರಂಗಕ್ಕೆ ಕಾಲಿಟ್ಟ ಕಿರಣ್ ಹೆಗಡೆ ನಿರ್ದೇಶಿಸಿದ ಮೊದಲ ಚಿತ್ರ ‘ಮನರೂಪ’. ಹೊಸ ತಲೆಮಾರಿನವರ ಆತ್ಮರತಿ, ನಾರ್ಸಿಸಂ, ಒಂಟಿತನದ ಸಮಸ್ಯೆ, ಸ್ವಯಂ ಹಾನಿ, ವಿಚ್ಛೇದನ, ಮದುವೆಯಲ್ಲಿ ಪ್ರೀತಿಯ ವೈಫಲ್ಯ, ಮದುವೆಯಿಲ್ಲದ ಬದುಕು, ಲಿವಿಂಗ್ ಟುಗೆದರ್, ಎಲ್ಲದರಿಂದಲೂ ಓಡಿಹೋಗುವ ಬಯಕೆ ಮುಂತಾದ ಭಾವನೆಗಳನ್ನು ವಿಭಿನ್ನ ಶೈಲಿಯಲ್ಲಿ ಕಟ್ಟಿಕೊಟ್ಟ ಚಿತ್ರವಿದು. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಶಿರಸಿ ಹಾಗೂ ಸಿದ್ದಾಪುರದ ದಟ್ಟ ಕಾಡಿನಲ್ಲಿ ಇಡೀ ಸಿನಮಾ ಚಿತ್ರೀಕರಣಗೊಂಡಿದೆ.
ದಿಲೀಪ್ ಕುಮಾರ್, ಅನುಷಾ ರಾವ್, ನಿಶಾ ಯಶ್ ರಾಮ್ ಹಾಗೂ ಶಿವಪ್ರಸಾದ್, ಅಮೋಘ ಸಿದ್ಧಾರ್ಥ್, ಗಜ ನೀನಾಸಂ ಹಾಗೂ ಪ್ರಜ್ವಲ್ ಗೌಡ ಪಾತ್ರವರ್ಗದಲ್ಲಿದ್ದಾರೆ. ಶರವಣ ಸಂಗೀತ ನೀಡಿದ್ದಾರೆ. ಪತ್ರಕರ್ತ ಮತ್ತು ಸಾಹಿತಿ ಮಹಾಬಲ ಸೀತಾಳಭಾವಿ ಸಂಭಾಷಣೆ ಬರೆದಿದ್ದಾರೆ.
ಫ್ರೆಶ್ ಮಜ್ಜಿಗೆ ಮಾಡೋದು ಹೇಗೆ? ರಾಮ್ ಚರಣ್ ತೇಜ ಕಲಿಸಿಕೊಡ್ತಿದ್ದಾರೆ ನೋಡಿ..