More

    ಮನೋಲ್ಲಾಸ|ಸಹಾಯ ಯೋಗ್ಯವಾಗಿರಲಿ

    ಜೀವನದಲ್ಲಿ ನಾವು ಅನೇಕರಿಗೆ ಹಣ ಕೊಡುವ ಪ್ರಸಂಗ ಬರುತ್ತದೆ. ರಸ್ತೆಯಲ್ಲಿ ಹೋಗುವಾಗ ಅಥವಾ ಪ್ರಯಾಣ ಮಾಡುವಾಗ ಭಿಕ್ಷೆ ಬೇಡುವವರು ಎದುರಾಗುತ್ತಾರೆ. ಹೆಂಗಸರು, ಅದರಲ್ಲಿಯೂ ಸಣ್ಣ ಕೂಸನ್ನು ಹೊತ್ತು ಭಿಕ್ಷೆ ಬೇಡುವುದನ್ನು ಕಂಡಾಗ ಏನೋ ಅನುಕಂಪ ಉಂಟಾಗಿ ಹಣ ಕೊಡುತ್ತೇವೆ. ಕೆಲವರು ಬಹಳ ಕಷ್ಟದಲ್ಲಿ ಇರುವವರಂತೆ ನಟಿಸಿ ಹಣ ಕೇಳುತ್ತಾರೆ. ಅವರ ನಟನೆ ತಿಳಿಯದೆ, ತಿಳಿವಳಿಕೆ ಇಲ್ಲದೇ ಹಣ ಕೊಡುತ್ತೇವೆ. ಏನೋ ಸಹಾಯ ಮಾಡಿದೆವು ಎಂದು ಹಿಗ್ಗುತ್ತೇವೆ. ಕೆಲವೆಡೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಕೊಡಲು ಲಂಚ ಕೇಳುತ್ತಾರೆ. ಅಧಿಕಾರಿಗಳ ಹೆದರಿಕೆಯಿಂದ ಹಣ ಕೊಡುತ್ತೇವೆ. ಕೆಲಸ ಸಾಧಿಸುತ್ತೇವೆ.

    ಹೀಗೆ ಭಿಕ್ಷೆ ಬೇಡುವವರಿಗೆ, ಕಷ್ಟದಲ್ಲಿರುವವರಂತೆ ನಟಿಸುವವರಿಗೆ, ಅಧಿಕಾರಿಗಳಿಗೆ ಕರುಣೆಯಿಂದಲೋ ಅಜ್ಞಾನದಿಂದಲೋ ಹೆದರಿಕೆಯಿಂದಲೋ ಹಣ ಕೊಡುತ್ತೇವೆ. ಭಿಕ್ಷುಕರಿಗೆ ಮತ್ತು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದು ಖಂಡಿತ ತಪ್ಪಲ್ಲ. ಆದರೆ ಹಾಗೆ ಕೊಟ್ಟ ಆ ಹಣವನ್ನು ಅವರು ಯಾವುದಕ್ಕೆ ಬಳಸುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ನಾವು ಕೊಟ್ಟ ಆ ಹಣದಿಂದ ಅವರು ಧೂಮಪಾನವನ್ನೋ, ಮದ್ಯಪಾನವನ್ನೋ ಅಥವಾ ಇನ್ನಾವುದೋ ಕೆಟ್ಟಕೆಲಸಗಳನ್ನು ಮಾಡಿದರೆ ಅದರಿಂದ ಬರುವ ಪಾಪಕ್ಕೆ ನಾವೂ ಭಾಗಿಗಳಾಗುವುದು ನಿಶ್ಚಿತ ಎಂದು ಎಚ್ಚರಿಸುತ್ತದೆ ಶಾಸ್ತ್ರ-

    ಸ್ನೇಹಾದ್ವಾ ಯದಿ ವಾ ಲೋಭಾತ್ ಭಯಾದಜ್ಞಾನತೋಧಿಪಿ ವಾ |

    ಕುರ್ವಂತ್ಯನುಗ್ರಹಂ ಯೇ ತು ತತ್ಪಾಪಂ ತೇಷು ಗಚ್ಛತಿ ||

    ಪ್ರೀತಿಯಿಂದಲೋ ಹೆದರಿಕೆಯಿಂದಲೋ ಅಜ್ಞಾನದಿಂದಲೋ ಅಯೋಗ್ಯರಾದವರಿಗೆ ಹಣ ನೀಡಿದರೆ, ತೆಗೆದುಕೊಂಡವರು ಕೆಟ್ಟಕೆಲಸಗಳನ್ನು ಮಾಡಿ ಸಂಪಾದಿಸುವ ಪಾಪ ಕೊಟ್ಟವನಿಗೂ ಬರುತ್ತದೆ.

    ಮದ್ಯಪಾನ-ಧೂಮಪಾನ ಮುಂತಾದ ಅಪರಾಧಗಳನ್ನು ನಾವು ಮಾಡದೇ ಇರಬಹುದು. ಆದರೆ ಅಂತಹ ಅಪರಾಧಗಳನ್ನು ಮಾಡುವ ವ್ಯಕ್ತಿಗಳಿಗೆ ಹಣ ಕೊಟ್ಟು ಸಹಾಯ ಮಾಡುವುದು ನಾವು ಮಾಡುವ ಅಪರಾಧವೇ. ಅಂದಮೇಲೆ ಅಪರಾಧಿಗಳಿಗೆ ಸಹಾಯ ಮಾಡುವುದೂ ಒಂದು ದೊಡ್ಡ ಅಪರಾಧವೇ. ಅಂತೆಯೇ ‘ಭಿಕ್ಷೆ ಬೇಡುವವರಿಗೆ, ಕಷ್ಟದಲ್ಲಿರುವವರಿಗೆ ತಿನ್ನಲು ಆಹಾರ ಕೊಡಿ. ಉಡಲು ವಸ್ತ್ರಗಳನ್ನು ಕೊಡಿ. ಅಥವಾ ಅವಶ್ಯಕತೆ ಇರುವ ಪದಾರ್ಥಗಳನ್ನು ಕೊಡಿ. ಅದರಿಂದ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದಂತೆಯೂ ಆಗುತ್ತದೆ. ಅವರ ಪಾಪದಲ್ಲಿ ನೀವು ಭಾಗಿಯಾಗುವುದೂ ತಪ್ಪುತ್ತದೆ’ ಎಂಬುದಾಗಿ ಹಿರಿಯರು ತಿಳಿಹೇಳುವುದು ಉಂಟು.

    ಸಹಾಯ ಮಾಡುವುದು ಧರ್ಮವೇ. ಎಲ್ಲರೂ ಮಾಡಲೇಬೇಕು. ಆದರೆ ಸಹಾಯ ಯೋಗ್ಯವಾಗಿಯೂ ಇರಬೇಕು. ನಾವು ಮಾಡುವ ಸಹಾಯದಿಂದ ಒಳಿತಾಗಬೇಕೇ ಹೊರತು ಕೆಟ್ಟಕೆಲಸಗಳಿಗೆ ದಾರಿ ಮಾಡಿಕೊಟ್ಟಂತಾಗಬಾರದು. ಅಲ್ಲವೇ? ಈ ಕಳಕಳಿಯನ್ನು ಅಳವಡಿಸಿಕೊಂಡರೆ ನಾವು ಮಾಡುವ ಸಹಾಯ ಸಾರ್ಥಕತೆ ಒದಗಿಸುತ್ತದೆ ಎಂಬುದನ್ನು ಮರೆಯದಿರೋಣ.

    ಮನೋಲ್ಲಾಸ|ಸಹಾಯ ಯೋಗ್ಯವಾಗಿರಲಿ

     

    ಡಾ.ಕಾಂತೇಶಾಚಾರ್ಯ ಕದರಮಂಡಲಗಿ (ಲೇಖಕರು ಸಂಸ್ಕೃತ ಸಂಶೋಧಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts