More

  ಮನೋಲ್ಲಾಸ: ಹರಿದುಹೋದ ಅಹಂಕಾರ

  ಒಂದೂರಿನಲ್ಲಿ ಒಬ್ಬ ನೇಕಾರನಿದ್ದ. ಆತ ಶಾಂತ ಸ್ವಭಾವದ ಮನುಷ್ಯ; ನಿಗರ್ವಿ, ತುಂಬ ಪ್ರಾಮಾಣಿಕ. ಆತ ಸಿಟ್ಟಾಗಿದ್ದುದನ್ನು ಯಾರೂ ನೋಡಿಯೇ ಇರಲಿಲ್ಲ. ಆ ಊರಿನ ಕೆಲ ಯುವಕರಿಗೆ ಒಂದು ತರಲೆ ಯೋಚನೆ ಹೊಳೆಯಿತು. ಅದೇನೆಂದರೆ, ಹೇಗಾದರೂ ಮಾಡಿ ಆ ನೇಕಾರನಿಗೆ ಸಿಟ್ಟು ಬರಿಸೋದು.

  ಒಂದು ದಿನ ಯುವಕರ ಗುಂಪು ನೇಕಾರನ ಅಂಗಡಿಗೆ ಹೋಯಿತು. ಆ ಗುಂಪಿನ ನಾಯಕ ಶ್ರೀಮಂತ ವ್ಯಾಪಾರಿಯೊಬ್ಬನ ಮಗನಾಗಿದ್ದ. ಅವನು ನೇಕಾರನ ಅಂಗಡಿಯಲ್ಲಿ ಬೆಲೆಬಾಳುವ ಸೀರೆಯನ್ನು ಆಯ್ಕೆ ಮಾಡಿ, ಬೆಲೆ ವಿಚಾರಿಸಿದ. ನಗುಮೋಗದ ನೇಕಾರ ಹತ್ತು ನಾಣ್ಯಗಳೆಂದ. ನೇಕಾರನನ್ನು ಕೆಣಕುವ ಉದ್ದೇಶದಿಂದ, ಆ ಶ್ರೀಮಂತ ‘ನನಗೆ ಈ ಪೂರ್ತಿ ಸೀರೆ ಬೇಡ. ಅರ್ಧ ಸಾಕು’ ಎನ್ನುತ್ತ ಸೀರೆಯನ್ನು ಹರಿದು ಎರಡು ಭಾಗ ಮಾಡಿ, ಒಂದು ಭಾಗದ ಬೆಲೆ ಏನೆಂದು ವಿಚಾರಿಸಿದ. ವಿಚಲಿತನಾಗದ ನೇಕಾರ, ಶಾಂತಚಿತ್ತದಿಂದ, ಬೆಲೆ ಐದು ನಾಣ್ಯಗಳೆಂದ. ಹೀಗೇ ಯುವಕ ಸೀರೆಯನ್ನು ತುಂಡು ಮಾಡುತ್ತಲೇ ಹೋದ. ಕೊನೆಗೆ, ‘ಈ ಸೀರೆ ಯಾವುದೇ ಉಪಯೋಗಕ್ಕೆ ಬಾರದು’ ಎಂದು ಕೈಚೆಲ್ಲಿದ. ಇಷ್ಟಾದರೂ, ಆ ನೇಕಾರ ಸಿಟ್ಟಿಗೇಳದುದನ್ನು ಕಂಡು ಯುವಕನಿಗೆ ನಾಚಿಕೆಯಾಯಿತು. ‘ಕ್ಷಮಿಸಿ, ನನ್ನಿಂದ ನಿಮಗೆ ನಷ್ಟವಾಯಿತು. ಸೀರೆಯ ಪೂರ್ಣಬೆಲೆಯನ್ನು ಸ್ವೀಕರಿಸಿ’ ಎಂದ. ‘ನೀನು ನನ್ನಿಂದ ಸೀರೆ ಕೊಂಡಿಲ್ಲ. ಆದುದರಿಂದ ಹಣ ಪಡೆಯಲಾರೆ’ ಎಂದ ನೇಕಾರ.

  ಈ ಮಾತುಗಳನ್ನು ಕೇಳುತ್ತಲೇ ಆತನ ಅಹಂಗೆ ಧಕ್ಕೆಯಾಗಿ, ‘ನಾನು ಶ್ರೀಮಂತನ ಮಗ. ಹಣ ಕೊಟ್ಟರೆ ನನಗೇನೂ ನಷ್ಟವಿಲ್ಲ. ನೀನಾದರೋ ಬಡವ. ಹಣ ತಗೋ’ ಎಂದ. ನೇಕಾರ ನಗುತ್ತ ಹೇಳಿದ-‘ಮಗು ನೀನು ಹರಿದು ಹೋದ ಈ ಸೀರೆಯಿಂದ ಆಗಿರುವ ನಷ್ಟವನ್ನು ಭರಿಸಲಾರೆ. ಒಮ್ಮೆ ಯೋಚಿಸು. ಈ ಸೀರೆಯನ್ನು ನೇಯಲು ಬೇಕಾದ ಹತ್ತಿಯನ್ನು ಬೆಳೆಸಲು ರೈತ ಎಷ್ಟು ಶ್ರಮ ಪಟ್ಟಿದ್ದಾನೆ, ಆ ಹತ್ತಿಯಿಂದ ನೂಲು ತೆಗೆಯುವಲ್ಲಿ, ಸೀರೆ ನೇಯುವಲ್ಲಿ, ಅದಕ್ಕೆ ಬಣ್ಣ ಹಾಕುವಲ್ಲಿ ನಮ್ಮ ಕುಟುಂಬದವರ ಎಷ್ಟೊಂದು ಶ್ರಮವಿದೆ! ಇಷ್ಟು ಶ್ರಮ ಸಾರ್ಥಕವಾಗೋದು ಆ ಸೀರೆಯನ್ನು ಯಾರಾದರೂ ಓರ್ವ ಮಹಿಳೆ ಉಟ್ಟು ಸಂತೋಷ ಪಟ್ಟಾಗ ಮಾತ್ರವಲ್ಲವೇ? ಆದರೆ ನೀನು ಸೀರೆಯನ್ನು ಯಾರೂ ಉಡಲಾಗದಂತೆ ತುಂಡು ತುಂಡು ಮಾಡಿಬಿಟ್ಟೆಯಲ್ಲ. ಎಲ್ಲರನ್ನೂ ಆ ಸಂತೋಷದಿಂದ ವಂಚಿತರನ್ನಾಗಿ ಮಾಡಿ ಬಿಟ್ಟೆಯಲ್ಲ! ಕೇವಲ ಹಣ ಕೊಡೋದರಿಂದ ನೀನು ನಮಗೆಲ್ಲರಿಗೂ ಆದ ನಷ್ಟವನ್ನು ತುಂಬಲಾರೆ’.

  ನೇಕಾರನ ದನಿಯಲ್ಲಿ ಸಿಟ್ಟು, ಆಕ್ರೋಶದ ಬದಲಾಗಿ, ಕಳಕಳಿ ಇತ್ತು. ನೋವಿತ್ತು. ಯುವಕ ಪಶ್ಚಾತ್ತಾಪದಿಂದ ನೇಕಾರನ ಕಾಲು ಹಿಡಿದು ಬಿಕ್ಕಿ ಬಿಕ್ಕಿ ಅಳತೊಡಗಿದ. ನೇಕಾರ ಪ್ರೀತಿಯಿಂದ ಅವನನ್ನು ಎಬ್ಬಿಸಿ-‘ಮಗು, ನಾನು ನಿನ್ನಿಂದ ಹಣ ಪಡೆದುಕೊಳ್ಳುತ್ತಿದ್ದರೆ, ನನಗೇನೋ ನನ್ನ ಹಣ ವಾಪಸು ಬರುತ್ತಿತ್ತು. ಆದರೆ ನಿನ್ನ ಬದುಕಿನಲ್ಲಿ ಯಾವ ಬದಲಾವಣೆಯೂ ಬರುತ್ತಿರಲಿಲ್ಲ! ಸೀರೆ ಒಂದು ಹೋದರೆ, ಇನ್ನೊಂದನ್ನು ನೇಯಬಹುದು. ಆದರೆ ಬದುಕು ಇರೋದು ಒಂದೇ ಅಲ್ಲವೇ? ಈ ಬದುಕು ಅಹಂಕಾರದಿಂದ ನಷ್ಟವಾಗಿ ಹೋದರೆ, ಇನ್ನೊಂದು ಬದುಕನ್ನು ಎಲ್ಲಿಂದ ತರೋಣ?’ ಹೀಗೆ ತನ್ನ ಅಂತಃಕರಣದ ನುಡಿಗಳಿಂದ ಆತನ ಕಣ್ಣು ತೆರೆಸಿದ. ಆ ನೇಕಾರ ಯಾರು ಗೊತ್ತೆ?-ಸಂತ ಕಬೀರದಾಸ!

  ತಾತ್ಪರ್ಯ ಇಷ್ಟೇ: ಅಹಂಕಾರವೆನ್ನುವುದು ಕಣ್ಣಿನ ಮೇಲೆ ಬಿದ್ದ ಧೂಳಿನಂತೆ. ಆ ಧೂಳನ್ನು ತೆಗೆಯದೆ ಹೋದರೆ, ಯಾವುದೂ ನಮಗೆ ಸ್ಪಷ್ಟವಾಗಿ ಕಾಣದು.

  ಡಾ.ಕೆ.ಪಿ.ಪುತ್ತೂರಾಯ

  (ಲೇಖಕರು ಪ್ರಾಧ್ಯಾಪಕರು, ಸಾಹಿತಿ ಹಾಗೂ ವಾಗ್ಮಿ)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts