More

    ಮನೋಲ್ಲಾಸ ಅಂಕಣ | ಅಹಂಕಾರ ಮತ್ತು ನಮ್ರತೆ

    ಮನೋಲ್ಲಾಸ ಅಂಕಣ | ಅಹಂಕಾರ ಮತ್ತು ನಮ್ರತೆಜಯಭೀಮ್ ಜೋಯ್ಸ್

    ಒಂದು ಸಾರಿ ಒಂದು ಸಭೆಯಲ್ಲಿ ಅಹಂಕಾರ ಮತ್ತು ನಮ್ರತೆ ಸಂಧಿಸಿ ವಾಗ್ಯುದ್ಧ ಶುರುವಾಯಿತು. ಆಗ ನ್ಯಾಯಾಧೀಶರೊಬ್ಬರು ಮಧ್ಯಸ್ಥಿಕೆ ವಹಿಸಿ ಕಥೆಯನ್ನು ಹೇಳುತ್ತಾರೆ. ಗಿಡ ಮರಗಳ ಎಲೆಗಳು ಒಟ್ಟಾಗಿ ಸೇರಿದಾಗ ಒಂದೊಂದು ಎಲೆಯೂ ನಾನೇ ಶ್ರೇಷ್ಠ, ನಾನೇ ಶ್ರೇಷ್ಠ ಎಂದು ತಮ್ಮನ್ನು ತಾವೇ ಹೊಗಳಿಕೊಳ್ಳಲಿಕ್ಕೆ ಶುರು ಮಾಡಿದವು. ಮೊದಲಿಗೆ ಮಾವಿನ ಎಲೆ ಹೇಳಿತು. ‘ನಾನು ಮಂಗಳಕರ. ಏಕೆಂದರೆ ಯಾವುದೇ ಹಬ್ಬ, ಹರಿದಿನವಾಗಲೀ, ಬಾಗಿಲು ತೋರಣಕ್ಕಾಗಲೀ, ಚಪ್ಪರಕ್ಕಾಗಲೀ ನಾನು ಬೇಕೇ ಬೇಕು’. ಈ ಅಹಂಕಾರದಿಂದಾಗಿ ಅದು ಬಾಗಿಲ ಮೇಲೆ ತಲೆಕೆಳಗಾಗಿ ನೇತಾಡಬೇಕಾಯಿತು. ಎರಡನೆಯದಾಗಿ ವೀಳ್ಯದೆಲೆ ಹೇಳಿತು. ‘ನನ್ನನ್ನು ಊಟವಾದ ಮೇಲೆ ಅಡಕೆ ಮತ್ತು ಸುಣ್ಣದ ಜತೆ ಸೇವಿಸುತ್ತಾರೆ. ನಾನು ತಿಂದ ಊಟ ಜೀರ್ಣವಾಗುವಂತೆ ಮಾಡಿ ಆರೋಗ್ಯ ಕಾಪಾಡುತ್ತೇನೆ’. ಆದರೆ, ವೀಳ್ಯದೆಲೆಯ ಪಾಡು ನೋಡಿ, ಎಲೆಯನ್ನು ಬಾಯಲ್ಲಿ ಹಾಕಿಕೊಂಡು ಜಗಿದು ಉಗಿಯುತ್ತಾರೆ. ಮುಂದಿನ ಸರದಿಯಲ್ಲಿ ಕರಿಬೇವಿನ ಎಲೆಯು ‘ನಾನು ಸುವಾಸನೆ ಹೊಂದಿದ್ದೇನೆ ಮತ್ತು ನನ್ನಲ್ಲಿ ಕಬ್ಬಿಣದ ಅಂಶ ಇರುತ್ತದೆ’ ಎಂದು ಅಹಂಕಾರಪಟ್ಟಿತು. ಹಾಗಾಗಿ ಇದನ್ನು ಊಟದ ಜತೆಯಲ್ಲಿ ಬಂದಾಗ ಅದನ್ನು ತೆಗೆದಿಡಲು ಪ್ರಾರಂಭ ಮಾಡಿದರು.

    ಮುಂದೆ ಬಾಳೆಎಲೆಯು, ‘ನನ್ನನ್ನು ಎಲ್ಲರೂ ಊಟಕ್ಕೆ ಉಪಯೋಗಿಸುತ್ತಾರೆ’ ಎಂದಾಗ, ನಿನ್ನನ್ನು ಊಟವಾದ ಮೇಲೆ ಬಿಸಾಕುತ್ತಾರೆ ಎಂದು ಉಳಿದ ಎಲೆಗಳು ಹೇಳಿದವು. ಅಹಂಕಾರ ಪಡದೆ ಕುಳಿತಿದ್ದ ತುಳಸಿ ಎಲೆಯು ಅದರ ನಮ್ರತೆಯ ಗುಣದಿಂದ ಮೆಚ್ಚುಗೆ ಗಳಿಸಿ ಭಗವಂತನ ಕೊರಳೆಂಬ ಉನ್ನತ ಸ್ಥಾನ ಸೇರಿತು, ಎಲ್ಲರಿಂದ ಅದು ಪೂಜಾರ್ಹವೆನಿಸಿತು. ಈಗ ಮಧ್ಯಸ್ಥಿಕೆ ವಹಿಸಿದ್ದ ನ್ಯಾಯಾಧೀಶರಿಗೆ ಅಹಂಕಾರ ಕಾಲಿಗೆ ಬಿದ್ದು ತಾನೂ ನಮ್ರತೆಗೆ ಜಯಕಾರ ಹಾಕಿತು. ಇದರಿಂದ ತಿಳಿಯುವ ಸಂದೇಶವೆಂದರೆ ಅಹಂಕಾರವಿದ್ದಲ್ಲಿ ಅವನತಿ, ತಿರಸ್ಕಾರ ಇರುತ್ತದೆ. ನಮ್ರತೆ ಇದ್ದಲ್ಲಿ ಗೌರವ, ಸದ್ಭಾವನೆ ಸಿಗುತ್ತದೆ.

    ಹಾಗೆಯೇ ಹಣತೆ, ಬತ್ತಿ, ಎಣ್ಣೆ ಮತ್ತು ಗಾಳಿ ಇವುಗಳಿಗೂ ಅಹಂಕಾರದ ಬಿರುಗಾಳಿ ಬೀಸಿತು. ಹಣತೆಯು, ‘ನನ್ನಿಂದ ದೀಪ ಉರಿಯುತ್ತದೆ, ಬರುವ ಬೆಳಕು ನನ್ನದು’ ಎನ್ನುತ್ತದೆ. ಹಣತೆಯಲ್ಲಿದ್ದ ಎಣ್ಣೆಯು, ‘ದೀಪಕ್ಕೆ ಜೀವಾಳ ನಾನು. ನಾನೇ ಇರದಿದ್ದರೆ ದೀಪವೂ ಇಲ್ಲ, ಬೆಳಕೂ ಇಲ್ಲ’ ಎಂದಿತು. ಆಗ ಬತ್ತಿಯು, ‘ನಾನು ಉರಿಯುವುದರಿಂದಲೇ ಬೆಳಕು’ ಎಂದಿತು. ಈ ಮೂವರ ಮಾತುಗಳನ್ನುಕೇಳುತ್ತಾ ಕೂತಿದ್ದ ಗಾಳಿಯು ‘ನಾನು ಇಲ್ಲದೆ ದೀಪವು ಉರಿಯಲ್ಲ ಮತ್ತು ನಾನು ಹೆಚ್ಚಾದರೆ ದೀಪ ಆರಿ ಹೋಗುತ್ತದೆ’ ಎಂದಿತು. ಈ ಕಚ್ಚಾಟದಲ್ಲಿ ಹಣತೆ ಒಡೆದು ಹೋಯಿತು. ಎಣ್ಣೆ ಸೋರಿಹೋಯಿತು. ಬತ್ತಿ ಉರಿಯದಂತಾಯ್ತು. ಗಾಳಿ ಜೋರಾಗಿ ಬೀಸಿದ್ದರಿಂದ ದೀಪ ಆರಿ ಹೋಯ್ತು. ಎಲ್ಲವೂ ಒಟ್ಟಾಗಿದ್ದರೆ ದೀಪದ ಭರವಸೆಯ ಬೆಳಕು ಇರುತ್ತಿತ್ತು. ಅಹಂಕಾರದಿಂದ ಅಂಧಕಾರವು ಕವಿಯುವುದೇ ಹೊರತು ಬೆಳಕಲ್ಲ.

    (ಲೇಖಕರು ಹವ್ಯಾಸಿ ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts