ಶ್ರೀಮಧ್ವರ ಧರ್ಮವಿಜಯ

|ಕೋಟೇಶ್ವರ ಸೂರ್ಯನಾರಾಯಣ ರಾವ್​ 

ದ್ಭುತ ದೇಹದಾರ್ಢ್ಯ, ಅಸಾಧಾರಣ ತೇಜಸ್ಸನ್ನು ಹೊಂದಿದ್ದ ಶ್ರೀ ಮಧ್ವರು ಹಲವಾರು ಪವಾಡಸದೃಶ ಕಾರ್ಯಗಳನ್ನು ಮಾಡಿ ತಾವೊಬ್ಬ ಆಚಾರ್ಯ ಪುರುಷ ಎಂಬುದನ್ನು ಸಾಬೀತುಪಡಿಸಿದರು. ಅವರು ಒಮ್ಮೆ ಉತ್ತರಭಾರತದ ದಿವ್ಯಕ್ಷೇತ್ರಗಳಿಗೆ ಪಾದಯಾತ್ರೆ ಕೈಗೊಂಡು ಶಿಷ್ಯರೊಡನೆ ಮುಂದುವರಿಯುತ್ತಿರುವಾಗ, ಮಾರ್ಗಮಧ್ಯದ ಪ್ರಾಂತವೊಂದರ ಸಾಮಂತ ರಾಜನು ತನ್ನೂರಿನ ಕೆರೆ ನಿರ್ವಣದಲ್ಲಿ ತೊಡಗಿಸಿಕೊಂಡಿದ್ದು ಕಂಡುಬಂತು. ಉದ್ದೇಶ ಒಳ್ಳೆಯದೇ ಆಗಿದ್ದರೂ ಆತ ಈ ಕಾರ್ಯಕ್ಕಾಗಿ ದಾರಿಹೋಕರನ್ನೂ ಬಿಡದೆ ಬಲವಂತವಾಗಿ ದುಡಿಸಿಕೊಳ್ಳುತ್ತಿದ್ದ. ಮಧ್ವರು ಆ ಪ್ರದೇಶವನ್ನು ಸಮೀಪಿಸುತ್ತಿದ್ದಂತೆ, ಕಟ್ಟುಮಸ್ತು ದೇಹದ ಮಧ್ವರು ಮತ್ತು ಅವರ ಶಿಷ್ಯರಿಗೆ ಕೆರೆಯ ಹೂಳೆತ್ತುವ ಸಲಕರಣೆಗಳನ್ನು ನೀಡಿ, ಬೆದರಿಕೆಯ ಮೂಲಕ ಕೆಲಸ ಮಾಡಿಸಿಕೊಳ್ಳಲು ಮುಂದಾದ. ರಾಜನ ದುರ್ಬುದ್ಧಿ ಅರ್ಥೈಸಿಕೊಂಡ ಮಧ್ವರು ತಿಳಿವಳಿಕೆಯಿಲ್ಲದವರಂತೆ ವರ್ತಿಸುತ್ತ, ಹೂಳು ತೆಗೆಯುವ ಬಗೆಯನ್ನು ತೋರಿಸಿಕೊಡುವಂತೆ ಕೇಳಿಕೊಂಡರು. ಗುರು-ಶಿಷ್ಯರನ್ನು ಜೀತದಾಳುಗಳಂತೆ ಬಳಸಿಕೊಂಡುಬಿಡಬೇಕು ಎಂಬ ಸಂಭ್ರಮೋತ್ಸಾಹದ ಭರದಲ್ಲಿ ರಾಜ ಸ್ವತಃ ಗುದ್ದಲಿ ಹಿಡಿದು ಹೂಳು ತೆಗೆಯತೊಡಗಿದ. ಆತನನ್ನು ವಶೀಕರಣಕ್ಕೊಳಪಡಿಸಿದ ಮಧ್ವರು ಆತ ಹೂಳು ತೆಗೆಯುತ್ತಲೇ ಇರುವಂತೆ ‘ತಥಾಸ್ತು’ ಹೇಳಿ ಅಲ್ಲಿಂದ ಮುಂದುವರಿದರು. ಅಧಿಕಾರದ ಮದದಿಂದ ಮಂಕಾಗಿದ್ದ ಕಣ್ಣುಗಳಿಂದಾಗಿ ಮಧ್ವರಂಥ ಮಹಾಮಹಿಮರನ್ನೇ ಗುರುತಿಸಲಾಗದ ರಾಜ ತನ್ನ ದುರ್ಬುದ್ಧಿಗೆ ತಕ್ಕ ಫಲ ಅನುಭವಿಸಬೇಕಾಯಿತು.

ಉತ್ತರದ ಬದರಿಯೆಡೆಗೆ ಯಾತ್ರೆ ಮುಂದುವರಿಸಿದ ಮಧ್ವರು ಗಂಗಾನದಿಯ ತಟಕ್ಕೆ ಬಂದರು. ನದಿಯ ಮತ್ತೊಂದು ತೀರದಲ್ಲಿ ಅಲ್ಲಿನ ಸುಲ್ತಾನ ಸೈನಿಕರ ಪಹರೆಯನ್ನಿರಿಸಿದ್ದ; ಶತ್ರುಗಳು ನದಿಯನ್ನು ದಾಟಿ ತನ್ನ ಪ್ರಾಂತದ ಮೇಲೆ ದಾಳಿಮಾಡುವರೆಂಬ ಭ್ರಮೆ ಇದಕ್ಕೆ ಕಾರಣವಾಗಿತ್ತು. ನದಿ ದಾಟುವುದಕ್ಕೆ ದೋಣಿಗಳೂ ಅಲ್ಲಿರಲಿಲ್ಲ. ಆಗ ತಮ್ಮ ಉತ್ತರೀಯವನ್ನು ಸೊಂಟಕ್ಕೆ ಬಿಗಿದುಕೊಂಡ ಮಧ್ವರು ಅದರ ಮತ್ತೊಂದು ತುದಿಯನ್ನು ಹಿಡಿದುಕೊಳ್ಳುವಂತೆ ಓರ್ವ ಶಿಷ್ಯನಿಗೆ ಸೂಚಿಸಿದರು. ಇದೇ ರೀತಿಯಲ್ಲಿ ಆ ಶಿಷ್ಯ ಕಟ್ಟಿಕೊಂಡ ಉತ್ತರೀಯದ ತುದಿಯನ್ನು ಮತ್ತೋರ್ವ ಶಿಷ್ಯ ಹಿಡಿದುಕೊಳ್ಳುವಂತೆ ಸೂಚಿಸಿ ಸರಣಿಯನ್ನೇ ರೂಪಿಸಿ ನೀರಿಗಿಳಿದರು. ಹೀಗೆ, ಈಜುಬಾರದ ಶಿಷ್ಯರೂ ಪ್ರಥಮದಲ್ಲಿ ಈಜಿ ದಡ ಸೇರಿದ ಮಧ್ವರ ಶಕ್ತಿಯಿಂದಾಗಿ ಸೈನಿಕರ ಪಹರೆಯಿದ್ದ ನದಿಯ ಮತ್ತೊಂದು ದಡವನ್ನು ಸೇರಿದರು. ಸುದ್ದಿ ಸುಲ್ತಾನನಿಗೆ ಮುಟ್ಟಿತು. ಅತಿಕ್ರಮಿಸಿದವರಿಗೆ ಒಂದು ಗತಿಕಾಣಿಸಬೇಕು ಎಂಬ ಹೂಟವಿಟ್ಟುಕೊಂಡು ಕೂಡಲೇ ಅಲ್ಲಿಗೆ ಧಾವಿಸಿದ ಆತ, ಮಧ್ವರ ದಿವ್ಯತೇಜಸ್ಸಿನಿಂದ ಪ್ರಭಾವಿತನಾಗಿ ಅವರ ಪಾದಗಳಿಗೆರಗಿದ, ಯಾತ್ರೆ ಮುಂದುವರಿಯಲು ಅನುವುಮಾಡಿಕೊಟ್ಟ. ಹೀಗೆ ಭಾರತದಾದ್ಯಂತ ಯಾತ್ರೆ ಮಾಡಿದ ಆಚಾರ್ಯ ಮಧ್ವರು ದ್ವೈತ ಸಿದ್ಧಾಂತವನ್ನು ವರ್ಗಭೇದವಿಲ್ಲದೆ ಉಣಬಡಿಸಿ ಸನಾತನ ಧರ್ಮಧ್ವಜವನ್ನು ಸ್ಥಾಪಿಸಿದರು.

(ಲೇಖಕರು ಸಾಮಾಜಿಕ ಕಾರ್ಯಕರ್ತರು)

 

Leave a Reply

Your email address will not be published. Required fields are marked *