ದೇವರಲ್ಲಿ ಏನನ್ನು ಕೇಳಬೇಕು?

|ಜ ಜಯಶ್ರೀ ಜೆ. ಅಬ್ಬಿಗೇರಿ

ಒಬ್ಬ ರಾಜನಿಗೆ ಮೂವರು ರಾಣಿಯರಿದ್ದರು. ಅವರ ಪೈಕಿ ತನ್ನನ್ನು ಹೆಚ್ಚು ಪ್ರೀತಿಸುವುದು ಯಾರು ಎಂಬುದನ್ನು ಕಂಡುಕೊಳ್ಳಲು ರಾಜ ಯತ್ನಿಸಿದ್ದನಾದರೂ ಉತ್ತರ ದಕ್ಕಿರಲಿಲ್ಲ. ಗೊಂದಲಗೊಂಡ ಆತ ಮಂತ್ರಿಯಲ್ಲಿ ಅಳಲು ತೋಡಿಕೊಂಡಾಗ, ‘ತಮಗೆ ಏನೇನು ಬೇಕಿದೆ ಎಂಬುದನ್ನು ಪಟ್ಟಿಮಾಡಿ ಕೊಡುವಂತೆ ಮೂರೂ ರಾಣಿಯರಿಗೆ ತಿಳಿಸಿ; ಇದರಿಂದ ನಿಮ್ಮ ಜಿಜ್ಞಾಸೆಗೆ ಉತ್ತರ ಸಿಗುವುದು’ ಎಂದು ಮಂತ್ರಿ ಸಲಹೆ ನೀಡಿದ. ಇದೆಂಥ ವಿಚಿತ್ರ ವಿಧಾನ ಎಂದು ರಾಜನಿಗೆ ಅಚ್ಚರಿಯಾದರೂ ಮಂತ್ರಿ ಹೇಳಿದಂತೆಯೇ ಮಾಡಿದ.

ಮರುದಿನ ರಾಣಿಯರು ಬೇಡಿಕೆಯ ಪಟ್ಟಿಗಳನ್ನು ಸಲ್ಲಿಸಿದರು. ಮುತ್ತು-ರತ್ನ, ವಜ್ರ-ವೈಢೂರ್ಯಗಳು ತುಂಬಿದ ಆಭರಣಸಂಪುಟ ಬೇಕೆಂಬುದು ಮೊದಲ ರಾಣಿಯ ಆಸೆಯಾಗಿದ್ದರೆ, ಪಕ್ಕದ ಪ್ರಾಂತ್ಯದ ರಾಜನನ್ನು ಸೋಲಿಸಬೇಕು ಮತ್ತು ವಶಪಡಿಸಿಕೊಂಡ ಆ ಪ್ರದೇಶಕ್ಕೆ ತನ್ನನ್ನು ಉಸ್ತುವಾರಿಯಾಗಿ ನೇಮಿಸಬೇಕೆಂಬುದು ಎರಡನೇ ರಾಣಿಯ ಹಕ್ಕೊತ್ತಾಯದ ರೂಪದ ಬೇಡಿಕೆಯಾಗಿತ್ತು! ಆದರೆ ಮೂರನೇ ರಾಣಿ ಒಂದು ಪುಟ್ಟ ಚೀಟಿಯಲ್ಲಿ ಮನದಾಸೆಯನ್ನು ನಮೂದಿಸಿದ್ದಳು. ‘ಮಹಾರಾಜಾ, ನಿಮಗಿಂತ ಮಿಗಿಲಾದ ಸಂಪತ್ತು-ಬೇಡಿಕೆ ಇರಲು ಸಾಧ್ಯವೇ? ನೀವು ನನ್ನೊಂದಿಗಿದ್ದರೆ ಅಷ್ಟೇ ಸಾಕು’ ಎಂಬುದು ಅದರಲ್ಲಿನ ಒಕ್ಕಣೆಯಾಗಿತ್ತು.

‘ಬಯಸಿದ್ದನ್ನು ಪಡೆಯುವ ಅವಕಾಶವನ್ನು ನಾನೇ ನೀಡಿದ್ದರೂ, ಇವಳು ನನ್ನನ್ನಷ್ಟೇ ಕೇಳಿದ್ದಾಳಲ್ಲ? ಇವಳನ್ನು ಅಲ್ಪತೃಪ್ತಳು ಎನ್ನಬೇಕೋ ಮೂರ್ಖಳೆನ್ನಬೇಕೋ?!’ ಎಂದು ರಾಜ ವ್ಯಂಗ್ಯವಾಗಿ ನಕ್ಕ. ಅದಕ್ಕೆ ಮಂತ್ರಿ, ‘ಮಹಾಪ್ರಭೂ, ಹಾಗೆಲ್ಲ ಹಗುರವಾಗಿ ಪರಿಗಣಿಸಬೇಡಿ; ಮೊದಲಿಬ್ಬರು ರಾಣಿಯರು ಐಹಿಕ ಭೋಗಗಳಲ್ಲಷ್ಟೇ ಸುಖವನ್ನು, ತೃಪ್ತಿಯನ್ನು ಅರಸುತ್ತಿದ್ದಾರೆ. ಆದರೆ ಮೂರನೇ ರಾಣಿ ಮಾತ್ರ ನಿಮ್ಮನ್ನೇ ತಮ್ಮ ಸಂಪತ್ತು ಎಂದು ನೆಚ್ಚಿದ್ದಾರೆ. ಈ ಅರಿವೇ ತೃಪ್ತಿಯ ಬೀಗದ ಕೈ. ನಿಮ್ಮನ್ನು ಮನಸಾರೆ ಪ್ರೀತಿಸುವುದು ಅವರೇ’ ಎಂದು ವಿವರಿಸಿದ.

ದೇವರ ಸನ್ನಿಧಾನದಲ್ಲಿ ಆಸ್ತಿ, ಐಶ್ವರ್ಯ, ಅಧಿಕಾರವೇ ಮೊದಲಾದ ಐಹಿಕ ಸುಖಭೋಗ ಗಳನ್ನು ನೀಡು ಎಂದು ಬೇಡುವವರೇ ಹೆಚ್ಚು; ಅದರ ಬದಲಿಗೆ, ‘ದೇವರೇ, ನನಗೆ ಯಾವುದರಿಂದ ಒಳಿತಾಗುತ್ತದೆ ಎಂಬುದು ನನಗಿಂತ ಚೆನ್ನಾಗಿ ನಿನಗೆ ಗೊತ್ತು. ಆದ್ದರಿಂದ ನೀನು ಅನುಕ್ಷಣವೂ ನನ್ನೊಂದಿಗಿರು’ ಎಂದು ಆರ್ತತೆಯಿಂದ ಪ್ರಾರ್ಥಿಸುವಂತಾಗಬೇಕು. ‘ದೇವರನ್ನು ಏನಾದರೂ ಬೇಡುವುದಿದ್ದರೆ ಅವಿನಾಶಿಯಾಗಿರುವಂಥದ್ದನ್ನು ಬೇಡು’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು. ಭೌತಿಕ ಸುಖವೆಂಬುದು ಉಪ್ಪಿದ್ದಂತೆ; ಅದನ್ನು ತಿಂದಷ್ಟೂ ದಾಹ ಹೆಚ್ಚುವುದೇ ವಿನಾ ತಗ್ಗದು. ಇರುವುದರಲ್ಲೇ ಸಂತೃಪ್ತಿಯ ಜೀವನ ನಡೆಸುವುದು ಅರಿವಿನ ದಾರಿ ಎನಿಸಿಕೊಳ್ಳುತ್ತದೆ.

(ಲೇಖಕಿ ಆಂಗ್ಲಭಾಷಾ ಉಪನ್ಯಾಸಕಿ) 

Leave a Reply

Your email address will not be published. Required fields are marked *