ನಂಬಿ ಕೆಟ್ಟವರಿಲ್ಲ…

| ಬೇಲೂರು ರಾಮಮೂರ್ತಿ

ಅರ್ಚಕರೊಬ್ಬರು ದೇವಸ್ಥಾನದಲ್ಲಿ ತಡರಾತ್ರಿಯವರೆಗೂ ಕಾರ್ಯ ನಿರ್ವಹಿಸುತ್ತಿದ್ದರು. ಕಾರಣ, ಮರುದಿನ ಮುಂಜಾನೆ ವಿಶೇಷ ಪೂಜೆ ಇತ್ತು. ಆ ಸಂಬಂಧದ ತಯಾರಿಯಲ್ಲೇ ಅವರು ವ್ಯಸ್ತರಾಗಿದ್ದ ಕಾರಣ ಮನೆಗೆ ತೆರಳುವುದು ಕೊಂಚ ತಡವಾಗಬಹುದು, ಮುಂಚಿತವಾಗಿ ತಿಳಿಸದಿದ್ದರೆ ಮನೆಯಲ್ಲಿ ಮಗಳು ಗಾಬರಿಯಾಗಬಹುದು ಎಂಬ ಗ್ರಹಿಕೆಯಲ್ಲಿ ದೇವಸ್ಥಾನದ ಸ್ಥಿರ ದೂರವಾಣಿಯಿಂದ ಮನೆಗೆ ಕರೆ ಮಾಡಿದರು. ಫೋನ್ ರಿಂಗಣಿಸುತ್ತಿದ್ದರೂ ಮಗಳು ತೆಗೆದುಕೊಳ್ಳಲಿಲ್ಲ. ಸ್ವಲ್ಪ ಹೊತ್ತಿನ ನಂತರ ಕರೆಮಾಡಿದರಾಯಿತು ಎಂದುಕೊಂಡು, ಇನ್ನಷ್ಟು ಕೆಲಸ ಮಾಡಿ ಮಗಳಿಗೆ ಮತ್ತೆ ಕರೆಮಾಡಲಾಗಿ ಆಕೆ ಈ ಬಾರಿ ಸ್ವೀಕರಿಸಿದಳು. ‘ಆಗಲೇ ಕರೆಮಾಡಿದ್ದೆ, ನೀನೇಕೆ ಸ್ವೀಕರಿಸಲಿಲ್ಲ? ನನಗಂತೂ ತುಂಬ ಗಾಬರಿಯಾಗಿತ್ತು’ ಎಂದರು ಅರ್ಚಕರು. ಅದಕ್ಕೆ ಮಗಳು ಅಚ್ಚರಿಯಿಂದ, ‘ಇಲ್ಲಪ್ಪಾ, ಅಂಥ ಯಾವ ಕರೆಯೂ ಬಂದಿಲ್ಲ; ಈಗಷ್ಟೇ ಬಂದಿದ್ದರಿಂದ ಮಾತನಾಡುತ್ತಿರುವೆ’ ಎಂದಳು. ಅದಕ್ಕೆ ಅರ್ಚಕರು, ‘ಸರಿಬಿಡು, ಗಡಿಬಿಡಿಯಲ್ಲಿ ನಾನೇ ಎಲ್ಲೋ ರಾಂಗ್​ನಂಬರ್​ಗೆ ಕರೆಮಾಡಿರಬೇಕು. ಈಗ ಹೊರಡುತ್ತಿದ್ದೇನೆ. ಮನೆಕಡೆ ಜೋಪಾನ’ ಎಂದು ಹೇಳಿ ಮನೆಗೆ ಹೊರಟರು.

ಮರುದಿನ ವಿಶೇಷಪೂಜೆ ಮುಗಿದ ತರುವಾಯ, ದೇವಸ್ಥಾನದ ಸ್ಥಿರ ದೂರವಾಣಿಗೆ ಒಂದು ಕರೆಬಂತು. ಅರ್ಚಕರು ಅದನ್ನು ಸ್ವೀಕರಿಸಿದಾಗ, ಅತ್ತ ಕಡೆಯಿಂದ ಮಾತಾಡಿದ ವ್ಯಕ್ತಿ ‘ನಿನ್ನೆ ತಡರಾತ್ರಿಯಲ್ಲಿ ಈ ಸಂಖ್ಯೆಯಿಂದ ನನ್ನ ದೂರವಾಣಿಗೊಂದು ಕರೆಬಂತು. ಏಕೆ ಕರೆ ಮಾಡಿದಿರಿ? ನೀವ್ಯಾರು?’ ಎಂದು ಕೇಳಿದರು. ಅರ್ಚಕರಿಗೆ ಹಿಂದಿನ ರಾತ್ರಿ ತಾವು ರಾಂಗ್​ನಂಬರ್​ಗೆ ಕರೆಮಾಡಿದ್ದು ನೆನಪಾಗಿ, ‘ಇಲ್ಲಪ್ಪ, ನನ್ನ ಮಗಳಿಗೆ ಕರೆಮಾಡಲು ಹೋಗಿ, ತಪ್ಪಾಗಿ ನಿಮ್ಮ ಮನೆಗೆ ಬಂತು ಎನಿಸುತ್ತೆ. ಹೊತ್ತಲ್ಲದ ಹೊತ್ತಲ್ಲಿ ತೊಂದರೆಯಾಗಿದ್ದಕ್ಕೆ ಕ್ಷಮೆ ಕೋರುವೆ’ ಎಂದಾಗ ಆ ವ್ಯಕ್ತಿ, ‘ಇಲ್ಲ ಸ್ವಾಮಿ, ನಿಮ್ಮ ಕರೆ ಸರಿಯಾದ ಹೊತ್ತಿಗೇ ಬಂತು; ವಾಸ್ತವವಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೆ. ಆದರೆ ಅದೇನು ತೋಚಿತೋ ಏನೋ, ‘ಓ ದೇವರೇ, ನೀನಿರುವುದು ನಿಜವೇ ಆಗಿದ್ದರೆ, ನಾನು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ನಿನಗೇನಾದರೂ ಅನಿಸಿದರೆ, ನಿನ್ನ ಇರುವಿಕೆಯ ಬಗ್ಗೆ ನನಗೇನಾದರೂ ಸುಳಿವುನೀಡು’ ಎಂದು ದೈನ್ಯದಿಂದ ಬೇಡಿಕೊಂಡೆ. ಮರುಕ್ಷಣವೇ ದೂರವಾಣಿ ರಿಂಗಣಿಸಿತು ಮತ್ತು ಕಾಲರ್ ಐಡಿಯಲ್ಲಿ ‘ದೇವಸ್ಥಾನ’ ಎಂದಿತ್ತು. ಆದರೆ ನಾನಾಗ ಅಕ್ಷರಶಃ ಹೆದರಿದ್ದೆ, ಗೊಂದಲದಲ್ಲಿದ್ದೆ. ಹಾಗಾಗಿ ಕರೆ ಸ್ವೀಕರಿಸಲಿಲ್ಲ. ಆದರೆ ಆತ್ಮಹತ್ಯೆಯ ಆಲೋಚನೆಯನ್ನು ಮನಸ್ಸಿನಿಂದ ತೆಗೆದುಹಾಕಿದೆ…’ ಎಂದು ತಿಳಿಸಿದ. ಅದಕ್ಕೆ ಅರ್ಚಕರು, ‘ಭವರೋಗವನ್ನು ದೂರ ಮಾಡುವವನೇ ಭಗವಂತ ಕಣಪ್ಪಾ; ದೇವರಲ್ಲಿ ದೃಢವಿಶ್ವಾಸವಿದ್ದರೆ, ಯಾವುದಾದರೊಂದು ರೀತಿಯಲ್ಲಿ ತನ್ನ ಅಸ್ತಿತ್ವ ತೋರಿಸುತ್ತಾನೆ, ಪರಿಹಾರದ ಮಾಗೋಪಾಯ ತಿಳಿಸಿಕೊಡುತ್ತಾನೆ. ಆದ್ದರಿಂದ ದೇವರನ್ನು ನಂಬಿ ಕಾರ್ಯೋನ್ಮುಖನಾಗು’ ಎಂದು ಅರಿವು ಮೂಡಿಸಿ ಹರಸಿದರು.

ಮನಸ್ಸು ದುರ್ಬಲಗೊಂಡಾಗ ಮತ್ತು ಎಲ್ಲ ಅವಕಾಶಗಳ ಬಾಗಿಲೂ ಮುಚ್ಚಿದೆ ಎಂಬ ಹತಾಶೆ ಆವರಿಸಿದಾಗ ಆತ್ಮಹತ್ಯೆಯಂಥ ಅತಿರೇಕದ ಆಲೋಚನೆ ಸುಳಿಯಬಹುದು. ಆದರೆ ಕ್ಷಣಕಾಲ ಸುಮ್ಮನಿದ್ದು ನಿರಾಳವಾಗಿ ಆಲೋಚಿಸಿದಲ್ಲಿ ಪರಿಹಾರದ ಮಾಗೋಪಾಯ ಹೊಳೆಯಬಹುದು ಎಂಬುದನ್ನು ಮರೆಯದಿರೋಣ.

(ಲೇಖಕರು ಸಾಹಿತಿ)