Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ವಿವೇಕಿಗಳಾಗೋಣ…

Wednesday, 26.09.2018, 3:04 AM       No Comments

| ಚಿದಂಬರ ಮುನವಳ್ಳಿ

ಕೈದಿಯೊಬ್ಬನಿಗೆ ಮರಣದಂಡನೆ ಶಿಕ್ಷೆಯ ಘೋಷಣೆಯಾಯಿತು. ಗಲ್ಲಿಗೇರಿಸುವ ದಿನವೂ ಬಂದಾಗ, ‘ನಿನ್ನ ಕೊನೆಯಾಸೆಯೇನು? ನೀನು ಯಾರನ್ನಾದರೂ ಭೇಟಿಯಾಗುವುದಿದೆಯೇ? ಹಾಗೇನಾದರೂ ಇದ್ದಲ್ಲಿ ಅವಕಾಶ ನೀಡಲಾಗುವುದು’ ಎಂದರು ಸಂಬಂಧಿತ ಅಧಿಕಾರಿಗಳು. ಅದಕ್ಕೆ ಆತ ‘ನನ್ನ ತಾಯಿಯನ್ನು ನೋಡಬೇಕು’ ಎಂದ. ಅಂತೆಯೇ ಆಕೆಯನ್ನು ಕರೆಸಲಾಯಿತು. ಸನಿಹಕ್ಕೆ ಬರುತ್ತಿದ್ದಂತೆಯೇ ಮಗ ಅವಳನ್ನು ವಾಚಾಮಗೋಚರವಾಗಿ ನಿಂದಿಸಲಾರಂಭಿಸಿದ. ಅಲ್ಲಿದ್ದವರು ಅಚ್ಚರಿಗೊಂಡು, ‘ನಿನಗಿನ್ನೂ ಬುದ್ಧಿ ಬರಲಿಲ್ಲವೇ? ಹೆತ್ತತಾಯಿಯನ್ನು ಹೀಗೆ ಅವಮಾನಿಸುವುದೇ?’ ಎಂದಾಗ ಆ ಅಪರಾಧಿ- ‘ನನಗೆ ಈ ಹೊತ್ತು ಇಂಥದೊಂದು ಪರಿಸ್ಥಿತಿ ಬರುವುದಕ್ಕೆ ತಾಯಿಯೇ ಕಾರಣ. ನಾನು ಚಿಕ್ಕವನಿದ್ದಾಗ ಬೇರೆಯವರ ಮನೆಯಲ್ಲಿ ಸಿಕ್ಕಸಿಕ್ಕ ವಸ್ತುಗಳನ್ನು ಕದಿಯುತ್ತಿದ್ದೆ. ಅಂಥ ವೇಳೆಯಲ್ಲಿ ನನ್ನ ತಪು್ಪತಿದ್ದುವ ಬದಲಿಗೆ ಈಕೆ ನನ್ನನ್ನು ಮತ್ತಷ್ಟು ಹುರಿದುಂಬಿಸುತ್ತಿದ್ದಳು. ಒಂದೊಮ್ಮೆ ನಾನು ಸಹಪಾಠಿಗಳನ್ನು ಪೀಡಿಸಿದರೆ, ಬಲಪ್ರಯೋಗ ಮಾಡಿದರೆ ‘ನನ್ನ ಮಗನೆಷ್ಟು ಶೂರ ನೋಡಿರಿ’ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದಳು. ಒಂದೊಮ್ಮೆ ಆಗಲೇ ನನ್ನ ಸಣ್ಣತಪು್ಪಗಳನ್ನು ತಿದ್ದಿ ಸರಿದಾರಿಗೆ ತಂದಿದ್ದಿದ್ದರೆ, ಮುಂದೆ ನನ್ನಿಂದ ದೊಡ್ಡ ಅಪರಾಧಗಳು ಘಟಿಸುತ್ತಲೇ ಇರಲಿಲ್ಲ…’ ಎಂದ. ಆಗ ಅಲ್ಲಿದ್ದವರೊಬ್ಬರು, ‘ನಿನ್ನ ಮಾತನ್ನು ಒಂದು ಹಂತಕ್ಕೆ ಒಪ್ಪಬಹುದಾದರೂ, ನೀನು ಬೆಳೆದು ದೊಡ್ಡವನಾಗಿ ತಿಳಿವಳಿಕೆ, ಸ್ವಂತಿಕೆ ಬಂದ ಮೇಲಾದರೂ ತಪು್ಪದಾರಿ ಬಿಟ್ಟು ಸರಿದಾರಿ ಹಿಡಿಯಬಹುದಿತ್ತು; ಹೀಗಾಗಿ ನೀನು ಮಾಡಿದ ಕುಕೃತ್ಯಗಳಲ್ಲಿ ನಿನ್ನ ಅರಿವುಗೇಡಿತನದ್ದೇ ಹೆಚ್ಚು ಪಾಲಿದೆಯಲ್ಲವೇ?’ ಎಂದರು. ಆ ಅಪರಾಧಿ ನಿರುತ್ತರನಾದ.

ಗುರು-ಹಿರಿಯರು ಚಿಕ್ಕವರಿಗೆ ಯೋಗ್ಯ ಮಾರ್ಗದರ್ಶನವನ್ನೇ ನೀಡುತ್ತಾರಾದರೂ, ಅಪವಾದವೋ ಎಂಬಂತೆ ಚಿಕ್ಕವರಿಂದ ತಪು್ಪಗಳು ಘಟಿಸುವಂಥ ಪರಿಸ್ಥಿತಿ ರೂಪುಗೊಂಡಾಗ, ಸ್ವಂತಿಕೆ ಮತ್ತು ತಿಳಿವಳಿಕೆಯ ಆಧಾರದ ಮೇಲೆ ಸರಿದಾರಿಯಲ್ಲಿ ಹೆಜ್ಜೆಹಾಕುವ, ಸನ್ನಡತೆ ರೂಪಿಸಿಕೊಳ್ಳುವ ಅವಕಾಶವಿರುತ್ತದೆ. ಹಿರಿಯರ ನಡೆಯೇ ದೋಷಪೂರಿತವಾಗಿದೆ ಎನಿಸಿದಾಗ ಆತ್ಮಸಾಕ್ಷಿಯಂತೆ ನಡೆದು ಮಹಾನ್ ವ್ಯಕ್ತಿಗಳಾದವರ ಉದಾಹರಣೆಗಳು ನಮ್ಮ ಪುರಾಣ-ಕತೆಗಳಲ್ಲೂ ಸಿಗುತ್ತವೆ. ತಾಯಿ ಕೈಕೇಯಿ ತನ್ನ ಹಿತವನ್ನೇ ಬಯಸಿದ್ದರೂ, ಅದರಲ್ಲಿ ಸ್ವಾರ್ಥದ ಛಾಯೆ ಇರುವುದನ್ನರಿತ ಭರತ ಅವಳನ್ನು ವೈರಿಯೆಂದು ಕರೆಯುತ್ತಾನೆ. ಭಕ್ತಪ್ರಹ್ಲಾದನಂತೂ ತಂದೆ ಹಿರಣ್ಯಕಶಿಪುವಿನ ಅಹಂಕಾರಕ್ಕೆ ಎದುರಾಗಿ ನಿಂತು ಸರ್ವಶಕ್ತ-ಸರ್ವಾಂತರ್ಯಾಮಿ ಭಗವಂತನನ್ನು ಕರೆತಂದು ಆತನಿಗೆ ತೋರುತ್ತಾನೆ. ಕೊಟ್ಟಮಾತಿಗೆ ತಪ್ಪಲಾರೆನು ಎಂದ ಬಲಿಚಕ್ರವರ್ತಿ, ತನ್ನ ಗುರು ಶುಕ್ರಾಚಾರ್ಯರ ಮಾತನ್ನು ಕಡೆಗಣಿಸಿ ಸಮಸ್ತವನ್ನೂ ಭಗವಂತನಿಗೆ ದಾನಮಾಡಿ ಪಾತಾಳ ಸೇರಿದರೂ ಅಜರಾಮರನಾದ. ಮಹಾಬಲಶಾಲಿ ಅಣ್ಣ ರಾವಣನ ಮಾತನ್ನು ವಿಭೀಷಣ ಸರ್ವಥಾ ಒಪ್ಪಲಿಲ್ಲ. ಸಾತ್ವಿಕ ಭಕ್ತಳಾದ ಮೀರಾ, ತಾಮಸಿಕ ಪತಿಯನ್ನೇ ತ್ಯಜಿಸಿದಳು… ದೇವರು ಪ್ರತಿಯೊಬ್ಬರಿಗೂ ವಿವೇಚನಾಶಕ್ತಿಯನ್ನು ನೀಡಿರುತ್ತಾನೆ. ತಿಳಿಯದೆ ಮಾಡಿದ ತಪ್ಪಿಗೆ ಕ್ಷಮೆಯೂ ಇರುತ್ತದೆ, ತಿದ್ದಿಕೊಳ್ಳಲು ಅವಕಾಶವೂ ಇರುತ್ತದೆ. ಆದರೆ ಸ್ವಾರ್ಥಕ್ಕಾಗಿ ಪದೇಪದೆ ತಪು್ಪಮಾಡಿ, ಅದೇ ಹಾದಿಯಲ್ಲಿ ಮುಂದುವರಿದು, ತನ್ನ ದುಸ್ಥಿತಿಗೆ ಬೇರೆಯವರನ್ನು ದೂಷಿಸುವವರು ಶಿಕ್ಷೆಯಿಂದ ಪಾರಾಗಲು ಹೇಗೆ ಸಾಧ್ಯ?

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)

Leave a Reply

Your email address will not be published. Required fields are marked *

Back To Top