Friday, 16th November 2018  

Vijayavani

Breaking News

ಗಣೇಶನಿಗೆ ಮೊದಲ ಪೂಜೆ ಏಕೆ?

Thursday, 13.09.2018, 2:03 AM       No Comments

ದೊಂದು ದಿವಸ ದೂರ್ವಾಸ ಮುನಿಗಳು ವೈಕುಂಠದಲ್ಲಿ ನಾರಾಯಣನ ದರ್ಶನ ಪಡೆದು ಆಶ್ರಮಕ್ಕೆ ಹಿಂದಿರುಗುವಾಗ ಹಾದಿಯಲ್ಲಿ ಜಲಕ್ರೀಡೆಯಲ್ಲಿ ತೊಡಗಿದ್ದ ಇಂದ್ರನನ್ನು ಕಂಡರು. ವೈಕುಂಠದಲ್ಲಿ ನಾರಾಯಣನು ದೂರ್ವಾಸರಿಗೆ ಪಾರಿಜಾತ ಹೂವಿನ ಪ್ರಸಾದವನ್ನಿತ್ತು ‘ಈ ಪ್ರಸಾದವು ಯಾರ ತಲೆಯ ಮೇಲೆ ಬೀಳುವುದೋ ಅವನು ಎಲ್ಲ ದೇವತೆಗಳಲ್ಲೂ ಮುಖ್ಯನೆನಿಸುವನು’ ಎಂದು ತಿಳಿಸಿದ್ದನು. ಇಂದ್ರನೂ ಹೇಗೂ ದೇವತೆಗಳಲ್ಲಿ ಮುಖ್ಯನೇ. ಅಧಿಕಸ್ಯಾಧಿಕಂ ಫಲಮ್ ಎಂಬ ದೃಷ್ಟಿಯಿಂದ ಇವನಿಗೆ ಪ್ರಸಾದವನ್ನು ಕೊಡುವುದು ಯೋಗ್ಯವೆಂದು ಭಾವಿಸಿದ ದುರ್ವಾಸರು ಆ ಪ್ರಸಾದವನ್ನು ಇಂದ್ರನಿಗೆ ಕೊಟ್ಟು-‘ಈ ಹೂವು ಯಾರ ತಲೆಯ ಮೇಲೆ ಬೀಳುತ್ತದೆಯೋ ಅವರು ಎಲ್ಲ ದೇವತೆಗಳಲ್ಲಿ ಮುಖ್ಯಸ್ಥರು ಆಗುತ್ತಾರೆ ಎಂದು ನಾರಾಯಣನ ಅಪ್ಪಣೆಯಾಗಿದೆ’ ಎಂದು ಹೇಳಿದರು.

ಆದರೆ ಇಂದ್ರನ ಮನಸ್ಸು ಚಂಚಲವಾಗಿ ಜಲಕ್ರೀಡೆಯ ಕಡೆಗಿತ್ತು. ಅವನು ಆ ಹೂವನ್ನು ಸಮೀಪದಲ್ಲಿರುವ ಆನೆಯ ತಲೆ ಮೇಲೆ ಇಟ್ಟುಬಿಟ್ಟನು. ಆದ್ದರಿಂದ ಆ ಎಲ್ಲ ದೇವತೆಗಳಲ್ಲಿ ಅಗ್ರಪೂಜೆಯ ಅಧಿಕಾರ, ಅಗ್ರಗಣ್ಯತೆ ಆ ಆನೆಗೆ ಒದಗಿ, ದೇವತೆಗಳು ಚಿಂತಿಸ ಲಾರಂಭಿಸಿದರು. ಇದಕ್ಕೆ ಪರಿಹಾರ ಹುಡುಕತೊಡಗಿದಾಗ, ಈ ಆನೆಯ ಮುಖವನ್ನು ದೇವತಾಗ್ರಗಣ್ಯನಾದ, ಅಗ್ರಪೂಜೆಯ ಅಧಿಕಾರವುಳ್ಳ ಗಣೇಶನಿಗೆ ಸೇರಿಸಬೇಕು. ಆಗ ಅಗ್ರಪೂಜೆಯ ಅಧಿಕಾರವೂ ಆತನಿಗೆ ಒದಗಿ ದೇವತೆಗಳಲ್ಲಿ ಅಗ್ರಗಣ್ಯನಾಗಲು ಸಾಧ್ಯ ಎಂದು ನಿರ್ಧರಿಸಿ ಗಜನ ಮುಖ ಗಣೇಶನಿಗೆ ಸೇರಿಸಲಾಯಿತು.

ಒಂದು ದಿನ ಪಾರ್ವತಿಯು ಸ್ನಾನಕ್ಕೆ ಹೋಗುವಾಗ ತಾನು ಮೈಗೆ ಲೇಪನ ಮಾಡಿಕೊಂಡಿದ್ದ ಸುಗಂಧದ್ರವ್ಯಗಳಾದ ಗಂಧ, ಅತ್ತರ ಇತ್ಯಾದಿಗಳನ್ನು ತೆಗೆದು, ಆ ಎಲ್ಲ ಸುಗಂಧದ್ರವ್ಯಗಳಿಂದ ದ್ವಾರರಕ್ಷಕ ಎಂಬ ದೃಷ್ಟಿಯಿಂದ ಮೂರ್ತಿ ಮಾಡಿ, ಸ್ನಾನಗೃಹದ ಬಾಗಿಲಲ್ಲಿ ಆ ಮೂರ್ತಿಯನ್ನು ಇಟ್ಟುಕೊಂಡು, ಪ್ರಾಣಕಲೆಯನ್ನು ಕೊಟ್ಟು, ಆ ಮಗುವಿಗೆ ‘ನೀನು ನನ್ನ ಮಗ, ಯಾರೂ ಬಂದರೂ ಬಿಡಬೇಡ’ ಅಂತ ಹೇಳಿ ಸ್ನಾನಕ್ಕೆ ಹೋದಳು. ಈಶ್ವರನು ಬಂದಾಗ ಸಹಜವಾಗಿ ತಾಯಿಯ ಅಪ್ಪಣೆಯಂತೆ ಅವನು ಬಿಡಲಿಲ್ಲ. ಬೇಸರಗೊಂಡ ಈಶ್ವರ ಗಣಗಳಿಗೆ ‘ಇವನು ಯಾರು? ಇಲ್ಲಿಗೆ ಬಂದವನು’ ಅಂತ ಪ್ರಶ್ನಿಸಿದ. ಎಲ್ಲ ದೇವತೆಗಳೂ ಸೇರಿದರು. ಎಲ್ಲ ದೇವತೆಗಳ ಪರಾಭವ ಕಂಡು ಕ್ರೋಧಿತನಾದ ರುದ್ರ ಅವನ ರುಂಡವನ್ನು ಕತ್ತರಿಸಿದ. ಪಾರ್ವತಿ ಪುತ್ರಶೋಕದಿಂದ ಸಿಟ್ಟಿಗೆದ್ದು ಅನೇಕ ಶಕ್ತಿಗಳನ್ನು ನಿರ್ವಿುಸಿದಳು. ಅವುಗಳ ಉಪಟಳ ತಾಳಲಾರದೆ ಎಲ್ಲರೂ ಪಾರ್ವತಿಗೆ ಶರಣು ಹೋದಾಗ-‘ನನ್ನ ಮಗ ಅಗ್ರಪೂಜೆಯ ಅಧಿಕಾರಿಯಾಗಬೇಕು. ದೇವತಾಗ್ರಗಣ್ಯನಾಗಬೇಕು. ಅವನಿಗೆ ಅಶಕ್ಯವಾದದ್ದು ಏನೂ ಇರಬಾರದು. ಎಲ್ಲ ವಿಘ್ನಗಳನ್ನು ಅವನು ಹೋಗಲಾಡಿಸಿ ವಿಘ್ನಹರ ಎಂಬ ಹೆಸರನ್ನು ಇಡಬೇಕು’ ಎಂಬ ವರಗಳನ್ನು ಬೇಡಿದಳು. ಅವುಗಳನ್ನೆಲ್ಲ ಕೊಟ್ಟು ಆಮೇಲೆ ಆ ಗಜನ ಶಿರಸ್ಸು ಇಟ್ಟು ಗಜಮುಖ ಎಂಬ ಹೆಸರಿಟ್ಟರು. ಗಣೇಶ ಚತುರ್ದಶಿಯಂದು ನಾವು ಪೂಜಿಸುವ ಗಜಮುಖನ ಅವತಾರವಾದದ್ದು ಹೀಗೆ.

(ಮಾಹಿತಿ: ಭಗವಾನ್ ಶ್ರೀಧರಸ್ವಾಮಿಗಳ ಶ್ರೀಧರ ವಚನಾಮೃತದ ಗಣೇಶತತ್ತ್ವ ಕೃತಿ)

Leave a Reply

Your email address will not be published. Required fields are marked *

Back To Top