Friday, 16th November 2018  

Vijayavani

Breaking News

ಹೊರೆ ಎಂದು ತೊರೆಯದಿರಿ

Tuesday, 14.08.2018, 3:03 AM       No Comments

| ಡಾ. ಸುನೀಲ್ ಕೆ.ಎಸ್.

ಬದುಕಿನ ಹಲವಾರು ಮಜಲುಗಳನ್ನು ಕಂಡ ಹಿರಿಯರು ದಿನಗಳೆದಂತೆ ಭಾವನಾತ್ಮಕವಾಗಿ ಕಿರಿಯರಾಗುವುದನ್ನು ಎಲ್ಲೆಡೆ ಕಾಣುತ್ತೇವೆ. ಅವರ ಕುತೂಹಲ, ಪ್ರಶ್ನೆಗಳು, ತೋರ್ಪಡಿಸುವ ಕನಿಕರ ಎಲ್ಲವನ್ನೂ ಅಂತರಾಳದಿಂದ ಕಂಡರಾಗಷ್ಟೇ ಅದರ ಆರ್ದ್ರತೆ ತೀವ್ರತೆಗಳನ್ನು ಅರಿಯಬಹುದು. ಆದರೆ ಜಂಜಾಟದ ಬದುಕಿನಲ್ಲಿ ಬೇಯುತ್ತಿರುವವರಿಗೆ ಅವೆಲ್ಲವೂ ಕಿರಿಕಿರಿಯೆನಿಸುವುದು ಶೋಚನೀಯ ಸಂಗತಿ. ಮೆತ್ತನೆಯ ಸುಪ್ಪತ್ತಿಗೆಯಲ್ಲಿ ಸುಖವನ್ನು ಹೊಚ್ಚಿ ಬೆಳೆಸುವ ಹಿರಿಯರು ಯಾವುದನ್ನೂ ಬಯಸದೆ ಬದುಕಿನ ಬಣ್ಣಗಳೆಲ್ಲ ಸಿಗುವಂತೆ ಎಡೆಮಾಡಿದರೆ ಅದನ್ನು ಅರ್ಥೈಸಿಕೊಳ್ಳದ ಕಿರಿಯರು ಅವರ ಬದುಕಿನ ಉತ್ತರಾರ್ಧವನ್ನು ಕಡೆಗಣಿಸುತ್ತ ಜರ್ಜರವಾಗುವಂತೆ ಮಾಡುತ್ತಿರುವುದನ್ನು ಅಲ್ಲಲ್ಲಿ ಕಾಣುವೆವು. ಬಣ್ಣಮಾಸಿದ ಮೊಗದೊಂದಿಗೆ ಉದ್ಯಾನದೊಳಗಡಿಯಿಟ್ಟ ಹಿರಿಯರು ಊರುಗೋಲಿನೊಂದಿಗೆ ಹೆಜ್ಜೆ ಹಾಕುತ್ತ ಗತಕಾಲದ ಗರಿಮೆಯನ್ನು ಮೆಲುಕುಹಾಕುತ್ತ ತಮ್ಮೊಳಗೇ ನಕ್ಕರು. ಏನೇನೋ ಮುಲುಗುತ್ತ ಸಾಗಿದ ಅಜ್ಜನ ವಿಚಿತ್ರ ಹಾವಭಾವವನ್ನು ಕಂಡ ಯುವತಿಯೋರ್ವಳು ಹಾದಿಗೆ ಅಡ್ಡಬಂದು ಆತನ ಚರ್ಯುಗೆ ಕಾರಣವೇನೆಂದು ಕೇಳಿದಳು. ಆರಂಭದಲ್ಲಿ ಸಂಕೋಚಪಟ್ಟ ಹಿರಿಯರು ಕೆಲ ಸಮಯದ ತರುವಾಯ ಬಾಯಗಲಿಸಿದರು. ಕೆಲಹೊತ್ತು ಗಮನವಿಟ್ಟು ಅಜ್ಜ ಹೇಳಿದ ಮಾತುಗಳನ್ನಾಲಿಸಿದ ಯುವತಿ ಮರುಮಾತಾಡದೆ ಅವರ ಕಾಲಿಗೆರಗಿ ಅಲ್ಲಿಂದ ಕಾಲ್ಕಿತ್ತಳು. ಅಜ್ಜನೂ ಅಲ್ಲಲ್ಲಿ ವಿಶ್ರಮಿಸಿ ಮನೆಯತ್ತ ಹೊರಳಿದರು.

ಇತ್ತ ಮನೆಗಾಗಮಿಸಿದ ಯುವತಿ ಹಾಸಿಗೆಗೆ ಮೈಯೊರಗಿ ಕಣ್ಮುಚ್ಚಿದ ಕ್ಷಣದಲ್ಲಿ ಕಣ್ಣಾಲಿಗಳು ಧುಮ್ಮಿಕ್ಕಿತು. ಒಂದೊಂದು ಕಣ್ಣೀರ ಹನಿಗಳೂ ಹಿರಿಯಾತ ಹೇಳಿದ ಒಂದೊಂದು ಮಾತನ್ನು ಪ್ರತಿಧ್ವನಿಸುತ್ತಿತ್ತು. ಅವರಾಡಿದ ಮಾತು ಹೀಗಿತ್ತು- ‘ಮಗು! ನಿನ್ನ ಗಂಡ ಪರಿವಾರಕ್ಕೆ ಆಸರೆ ಹೇಗೋ ಹಾಗೆಯೇ ಆತನ ಹಿರಿಯರೂ ಆತನ ಬದುಕಿಗೆ ರೂಪುಕೊಟ್ಟ ಶಿಲ್ಪಿಗಳೆಂದು ತಿಳಿ. ಅವರು ಬೇಗುದಿಯಲ್ಲಿ ಬೆಂದು ನೆಳಲ ಅಡಿಯಲ್ಲಿ ನಿಲ್ಲುವಂತೆ ಹರಿಸಿದ ಪರಿಣಾಮ ಅವರಿತ್ತ ಆಸರೆಯೇ ಇಂದು ದುಮ್ಮಾನಗಳ ಗೂಡಾಗಿದೆ. ನೆನಪಿಸು, ಆ ನಿನ್ನ ಗಂಡನಿಗೆ ಎಂದಾದರೊಂದು ದಿನ ಅವನೂ ಎನ್ನಂತೆ ಊರುಗೋಲಿಗೆ ಜೋತುಬೀಳುವನು. ಆಗ ಹಿರಿಯನನ್ನು ಹೊರೆಯೆಂದು ಭಾವಿಸಿದ ಸಲುವಾಗಿ ಪಶ್ಚಾತ್ತಾಪದಿಂದ ನರಳುವನು. ಆ ಸಂಕಟವನ್ನು ನೆನಪಿಸಿಕೊಂಡರೆ ಜೀವ ಹಿಂಡಿದಂತಾಗುವುದು. ಆದ್ದರಿಂದಲೇ ಮಾತನಾಡಿಸಲು ಯಾರೂ ಇಲ್ಲದ ಈ ಜಗದಲ್ಲಿ ನನಗೆ ನಾನೇ ಮಾತನಾಡಿಕೊಳ್ಳುತ್ತಿರುವೆ…’. ಹೀಗೆ ಆ ಹಿರಿಯರು ಹೇಳಿದ ಇನ್ನೂ ಏನೇನೋ ಮಾತುಗಳನ್ನು ಯುವತಿ ನೆನಪಿಸಿಕೊಳ್ಳುವ ಪ್ರಯತ್ನಮಾಡಹೊರಟಳು. ಅಷ್ಟರಲ್ಲಿ, ಮದುವೆಯ ಹೊಸತರಲ್ಲಿ ಗಂಡನಾಡಿದ ಅಮೃತವಾಣಿ ನೆನಪಾಯಿತು- ‘ಹಿರಿಯರ ಒಣಸಲಹೆಗಳ ಕಿರಿಕಿರಿಯಿಲ್ಲದ ನಮ್ಮಬದುಕು ಸ್ವರ್ಗಕ್ಕೆ ಸೋಪಾನ’ವೆಂದು. ನೊಂದು ಬಿಕ್ಕಿದ ಯುವತಿ ಮಾವನರಸುತ್ತ ಉದ್ಯಾನದತ್ತ ಹೊರಟಳು.

(ಲೇಖಕರು ಸಂಸ್ಕೃತ ಪ್ರವಾಚಕರು ಮತ್ತು ವಿಮರ್ಶಕರು) 

Leave a Reply

Your email address will not be published. Required fields are marked *

Back To Top