Friday, 16th November 2018  

Vijayavani

Breaking News

ಸಂಗೀತದ ಸಾಂಗತ್ಯ

Tuesday, 26.06.2018, 3:04 AM       No Comments

| ಕೆ.ಪಿ. ಪುತ್ತೂರಾಯ

‘ಸಂಗೀತ’ ಭಗವಂತನಿಗೂ ಪ್ರಿಯವಾದ ವಿಷಯವೇ. ಈ ಕಾರಣದಿಂದಲೇ ಷೋಡಷೋಪಚಾರಗಳನ್ನೊಳಗೊಂಡ ದೇವರ ಪೂಜೆಯಲ್ಲಿ ಸಂಗೀತ ಸೇವೆಯನ್ನು ಸೇರಿಸಿಕೊಳ್ಳಲಾಗಿದೆ. ಮಾತ್ರವೇ ಅಲ್ಲ, ನಮ್ಮ ಇಷ್ಟದೈವಗಳ ಕೈಯಲ್ಲಿರುವ ನಾನಾ ಸಂಗೀತವಾದ್ಯಗಳು ಭಗವಂತನಿಗೂ ಸಂಗೀತಕ್ಕೂ ಇರುವ ನಿಕಟ ಸಂಬಂಧವನ್ನು ಸೂಚಿಸುತ್ತವೆ. ವಿಷ್ಣುವಿನ ಕೈಯಲ್ಲಿರುವ ಶಂಖ, ಶಿವನ ಕೈಯಲ್ಲಿರುವ ಢಮರು, ಕೃಷ್ಣನ ಕೊಳಲು, ಸರಸ್ವತಿಯ ಕೈಯಲ್ಲಿರುವ ವೀಣೆ, ನಾರದರ ತಂಬೂರಿ, ನಂದಿಯ ಮದ್ದಳೆ ಇತ್ಯಾದಿ ವಾದ್ಯಗಳೇ ಇದಕ್ಕೆ ಸಾಕ್ಷಿ.

ಸಂಗೀತಗಾರರಾಗಲು ದೈವಾನುಗ್ರಹವೂ ಬೇಕು. ಎಲ್ಲರಿಗೂ ಸ್ವರ ಇದೆ; ಆದರೆ ಎಲ್ಲರೂ ಸಂಗೀತಗಾರರಾಗುವುದಿಲ್ಲ. ಹೀಗೇಕೆ ಎಂಬುದು ವೈದ್ಯವಿಜ್ಞಾನಿಗಳಿಗೂ ತಿಳಿಯದ ವಿಷಯ. ಸಂಗೀತಗಾರರಾಗಲು ಪೂರ್ವಜನ್ಮದ ಪುಣ್ಯದ ಫಲಪ್ರಾಪ್ತಿಯೂ ಇರಬೇಕು. ಅದೇನೇ ಇರಲಿ, ಸಂಗೀತಕ್ಕೆ ಅದ್ಭುತವಾದ, ಅಪಾರವಾದ ಶಕ್ತಿಯಿದೆ. ಸುಶ್ರಾವ್ಯ ಸಂಗೀತ ಎಂಥ ಕಲ್ಲೆದೆಯನ್ನಾದರೂ ಕರಗಿಸಬಲ್ಲದು, ಬೇಸರವನ್ನು ನೀಗಿಸಬಲ್ಲದು. ದಣಿವನ್ನು ದೂರಮಾಡಬಲ್ಲದು, ಬಿಗುವಿನ ವಾತಾವರಣವನ್ನು ತಿಳಿಮಾಡಬಲ್ಲದು, ಭಾರವಾದ ಹೃದಯವನ್ನು ಹಗುರ ಮಾಡಬಲ್ಲದು. ನಾವು ಆರೋಗ್ಯವಾಗಿರಲು ಕೂಡ ಸಂಗೀತ ಸಹಕಾರಿ ಎಂಬುದು ತಜ್ಞರ ಅಭಿಪ್ರಾಯ. ಕೆಲವು ರೋಗಗಳನ್ನು ಶಮನಗೊಳಿಸುವಲ್ಲಿ ಸಂಗೀತ ಚಿಕಿತ್ಸೆಯೂ ಒಂದು ವಿಧಾನವೆನ್ನಲಾಗಿದೆ. ಸುಶ್ರಾವ್ಯ ಸಂಗೀತ ಕೇಳುತ್ತ ಶ್ರೋತೃಗಳು ಮೂಕವಿಸ್ಮಿತರಾಗುತ್ತಾರೆ. ಇದಕ್ಕೊಂದು ಅದ್ಭುತ ಉದಾಹರಣೆ ಎಂದರೆ, ಸಂಗೀತ ಕ್ಷೇತ್ರದಲ್ಲಿ ಪ್ರಥಮ ‘ಭಾರತ ರತ್ನ’ ಪ್ರಶಸ್ತಿ ಪಡೆದ ವಿದುಷಿ ಡಾ. ಎಂ.ಎಸ್. ಸುಬ್ಬುಲಕ್ಷ್ಮಿಯವರ ಗಾಯನ. ಇವರ ಸಂಗೀತಸುಧೆಯನ್ನು ಸವಿದ ಆಗಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದು ಹೀಗೆ- “What I am before this Melody Queen of Music- just a Prime Minister!’. ಎಂತಹ ಅಭಿನಂದನೆ!

ಸಂಗೀತವನ್ನು ಸವಿಯಲು ಸದಭಿರುಚಿಯೂ ಇರಬೇಕಾಗುತ್ತದೆ. ಈ ಮಾತನ್ನು ಪುಷ್ಟೀಕರಿಸುವಂತೆ ನಡೆದ ಘಟನೆಯೊಂದು ಹೀಗಿದೆ. ಇದೇ ಎಂ.ಎಸ್. ಸುಬ್ಬುಲಕ್ಷ್ಮಿಯವರ ಸಂಗೀತ ಕಛೇರಿಯನ್ನು ಉದ್ಘಾಟಿಸಲು ಪ್ರಭಾವಿ ಮಂತ್ರಿಯೊಬ್ಬರು ಬಂದಿದ್ದರು. ಸಂಗೀತಾಸಕ್ತಿ ಇಲ್ಲದ ಅವರು ಕಾರ್ಯಕ್ರಮ ಉದ್ಘಾಟಿಸಿ ಹೊರಟೇಬಿಟ್ಟರು. ಜತೆಗೆ ಬಂದಿದ್ದ ನೂರಾರು ಚೇಲಾಗಳು ಕೂಡ ಅವರ ಹಿಂದೆಯೇ ಹೊರಟುಹೋದರು. ಸಭೆ ಅರ್ಧಕ್ಕರ್ಧ ಖಾಲಿಯಾಯಿತು. ಇದನ್ನು ಗಮನಿಸಿದ ಸುಬ್ಬುಲಕ್ಷ್ಮಿಯವರು ಹೇಳಿದ್ದು- “The Crowd has left. I am left with a receptive audience. The classical music is only for class people’. ಈ ಮಾತಿನಲ್ಲಿ ಎಂಥ ಅರ್ಥವಿದೆ! ಸಂಗೀತವೆಂಬುದು ವಿಶ್ವರೂಪಿ, ವಿಶ್ವವ್ಯಾಪಿ. ಕೇಳುವ ಕಿವಿ ಇರಲು, ಚಿಲಿಪಿಲಿಗುಟ್ಟುವ ಹಕ್ಕಿಗಳ ಕೂಗಿನಲ್ಲಿ, ರೊಯ್ಯನೆ ಬೀಸುವ ಗಾಳಿಯಲ್ಲಿ, ಜುಳುಜುಳು ಹರಿಯುವ ನೀರಿನಲ್ಲಿ, ಅಪ್ಪಳಿಸುವ ಸಾಗರದ ಅಲೆಗಳಲ್ಲಿ ಹೀಗೆ ಎಲ್ಲೆಲ್ಲೂ ಸಂಗೀತವಿದೆ.”Music is neither Indian, nor Western. It is divine’ ಎಂಬ ಮಾತಿದೆ. ಇದಕ್ಕೆ ದೇಶ-ಭಾಷೆಗಳ, ಜಾತಿಮತಗಳ ಅಡ್ಡಗೋಡೆಗಳಿಲ್ಲ. ಇದು ಎಲ್ಲರ ಹೃದಯವನ್ನು ತಟ್ಟಬಲ್ಲ, ಮುಟ್ಟಬಲ್ಲ, ಮತ್ತೆ ಅಲ್ಲಿ ಆನಂದದ ತರಂಗಗಳನ್ನು ಹುಟ್ಟುಹಾಕಬಲ್ಲ ಒಂದು ಜಾಗತಿಕ ಭಾಷೆ. ಸಂಗೀತ ನಮ್ಮ ಸಂಗಾತಿಯಾದಲ್ಲಿ, ಸಾಂತ್ವನ, ಸಂತೋಷ, ಶಾಂತಿ, ನೆಮ್ಮದಿ ಶತಸ್ಸಿದ್ಧ.

(ಲೇಖಕರು ಪ್ರಾಧ್ಯಾಪಕರು, ಸಾಹಿತಿ ಹಾಗೂ ವಾಗ್ಮಿ)

Leave a Reply

Your email address will not be published. Required fields are marked *

Back To Top