ಧೀಮಂತರನ್ನು ನೆನೆಯೋಣ

| ಕೋಟೇಶ್ವರ ಸೂರ್ಯನಾರಾಯಣ ರಾವ್

ಉತ್ತರಭಾರತದಲ್ಲಿ ಸಾಮ್ರಾಟ ಹರ್ಷವರ್ಧನನ ಆಳ್ವಿಕೆ ನಡೆಯುತ್ತಿದ್ದ ಕಾಲವದು. ಪ್ರಜೆಗಳ ಹಿತಕಾಯುತ್ತ, ಧರ್ಮ ತೋರಿದ ಹಾದಿಯಲ್ಲಿ ಅವನು ನಡೆಯುತ್ತಿದ್ದ. ಅದೇ ವೇಳೆಗೆ, ಭೂಮಾರ್ಗದಲ್ಲಿ ಅನೇಕ ಕಷ್ಟಕೋಟಲೆಗಳನ್ನು ಎದುರಿಸಿ ಭಾರತಕ್ಕೆ ಬಂದಿದ್ದ ಚೀನಿ ಯಾತ್ರಿಕ ಹ್ಯೂಯೆನ್ ತ್ಸಾಂಗ್, ಇಲ್ಲಿನ ಬೌದ್ಧವಿಹಾರಗಳನ್ನು ಸಂದರ್ಶಿಸಿ, ನಳಂದ ವಿಶ್ವವಿದ್ಯಾಲಯದಲ್ಲಿ ಕೆಲವರ್ಷ ಭಾರತೀಯ ವಿದ್ಯಾರ್ಥಿಗಳೊಂದಿಗೆ ಇದ್ದ. ಭಾರತದ ಸಂಸ್ಕೃತಿ, ಜನರ ನಡೆ-ನುಡಿ, ಆಡಳಿತ ವೈಖರಿ ಇತ್ಯಾದಿ ವಿಷಯಗಳ ಅಧ್ಯಯನದ ನಂತರ ಆತ ತನ್ನ ದೇಶಕ್ಕೆ ಮರಳಲು ನಿರ್ಧರಿಸಿದ. ಆಗ, ಭಾರತೀಯ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಸುಮಾರು 400 ಗ್ರಂಥಗಳು ಹಾಗೂ ಭಗವಾನ್ ಬುದ್ಧನ ಮನಮೋಹಕ ಪ್ರತಿಮೆಯನ್ನು ಭಾರತೀಯ ವಿದ್ಯಾರ್ಥಿಗಳು ಸ್ನೇಹದ ದ್ಯೋತಕವಾಗಿ ಅವನಿಗೆ ನೀಡಿದರು.

ಈ ಬಾರಿ ಜಲಮಾರ್ಗದಲ್ಲಿ ಚೀನಾಕ್ಕೆ ಹಿಂದಿರುಗಲು ಬಯಸಿದ ಹ್ಯೂಯೆನ್ ತ್ಸಾಂಗ್, ನಾವೆಯಲ್ಲಿ ಕುಳಿತು ಸಿಂಧೂನದಿಯಲ್ಲಿ ಯಾನವನ್ನು ಆರಂಭಿಸಿದ. ತನಗೆ ಕೊಡುಗೆಯಾಗಿ ದಕ್ಕಿದ ಗ್ರಂಥಗಳು ಹಾಗೂ ಬುದ್ಧನ ಪ್ರತಿಮೆ ಮಾತ್ರವಲ್ಲದೆ ಮೂರ್ನಾಲ್ಕು ಭಾರತೀಯ ವಿದ್ಯಾರ್ಥಿಗಳೂ ಯಾನದಲ್ಲಿ ಅವನ ಜತೆಗಿದ್ದರು. ನೌಕಾವಿಹಾರವನ್ನು ಎಲ್ಲರೂ ಆನಂದಿಸುತ್ತಿರುವಾಗ ಇದ್ದಕ್ಕಿದ್ದಂತೆ ಬಿರುಗಾಳಿ ಬೀಸತೊಡಗಿ ನಾವೆ ಹೊಯ್ದಾಡತೊಡಗಿತು. ಅಂಬಿಗ ಭಯಗೊಂಡು, ‘ಜತೆಯಲ್ಲಿರುವ ಹೆಚ್ಚಿನ ಸಾಮಾನು-ಸರಂಜಾಮನ್ನು ನದಿಗೆ ಎಸೆದರೆ ನಾವೆಯ ಭಾರ ಕಡಿಮೆಯಾಗಿ ಉಳಿಯುವುದು ಸಾಧ್ಯ’ ಎಂದ. ದೋಣಿಯಲ್ಲಿ ಸಾಗಿಸಲ್ಪಡುತ್ತಿರುವುದು ಭಾರತದ ಅಮೂಲ್ಯ ಸಾಂಸ್ಕೃತಿಕ ಸಂಪತ್ತು ಎಂಬುದು ಅವನಿಗೆ ಗೊತ್ತಿರಲಿಲ್ಲ.

ಹ್ಯೂಯೆನ್​ತ್ಸಾಂಗ್, ತನ್ನೊಂದಿಗಿದ್ದ ಗ್ರಂಥಗಳು ಮತ್ತು ಬುದ್ಧನ ಪ್ರತಿಮೆಯನ್ನು ನದಿಗೆ ಎಸೆಯುವಂತೆ ಅನಿವಾರ್ಯವಾಗಿ ಆದೇಶಿಸಿದ. ಆದರೆ ಜತೆಗಿದ್ದ ಭಾರತೀಯ ವಿದ್ಯಾರ್ಥಿಗಳು ಪ್ರತಿಭಟಿಸಿ, ‘ಈ ಅಮೂಲ್ಯ ಗ್ರಂಥಗಳು ನದಿಯ ಪಾಲಾಗುವುದನ್ನು ನಾವು ಸಹಿಸಲಾರೆವು; ಆದರೆ, ಬೆಲೆಕಟ್ಟಲಾಗದ ಈ ಸಂಪತ್ತು ಚೀನಾವನ್ನು ತಲುಪಲೇಬೇಕೆಂದರೆ ನಾವೆಯ ಭಾರ ಕಡಿಮೆಯಾಗಲೇಬೇಕು. ಆದ್ದರಿಂದ ನಾವೆಲ್ಲರೂ ನದಿಗೆ ನಮ್ಮನ್ನು ಸಮರ್ಪಿಸಿಕೊಳ್ಳುತ್ತೇವೆ’ ಎಂದಿದ್ದಲ್ಲದೆ ‘ಜೈ ಭಾರತಮಾತೆ’ ಎನ್ನುತ್ತ ಒಬ್ಬೊಬ್ಬರಾಗಿ ಸಿಂಧೂನದಿಗೆ ಹಾರಿಕೊಂಡರು. ಈ ಅಪ್ರತಿಮ ಬಲಿದಾನ ಕಂಡು ಹ್ಯೂಯೆನ್​ತ್ಸಾಂಗ್ ಬೆರಗಾಗಿದ್ದ.

ಭಾರತದ ಅಸ್ಮಿತೆ, ಪ್ರತಿಷ್ಠೆಯನ್ನು ಕಾಪಾಡಲೆಂದು, ನಮಗೆ ಸ್ವಾತಂತ್ರ್ಯವನ್ನು ದಕ್ಕಿಸಿಕೊಡಲೆಂದು ಹಿಂದೆ ಇದೇ ರೀತಿಯಲ್ಲಿ ಅದೆಷ್ಟೋ ಬಲಿದಾನಗಳಾಗಿವೆ. ನಾವಿಂದು ನೆಮ್ಮದಿಯಿಂದ ದಿನದೂಡುತ್ತಿದ್ದೇವೆಂದರೆ, ಅದರ ಹಿಂದೆ ಇಂಥ ಧೀಮಂತರ ಬೆವರಿನ ಹನಿಗಳಿವೆ. ಅವರನ್ನು ಅನುಗಾಲವೂ ನೆನೆಯುವುದು ನಮ್ಮ ಉಸಿರಾಗಲಿ.

(ಲೇಖಕರು ಸಾಮಾಜಿಕ ಕಾರ್ಯಕರ್ತರು)

Leave a Reply

Your email address will not be published. Required fields are marked *