ಪುಣ್ಯನದಿ ಗಂಗೆಯಲ್ಲಿ ಮಿಂದೆದ್ದರೆ ಪಾಪಗಳು ಪರಿಹಾರವಾಗುತ್ತವೆ ಎಂಬುದು ಬಹುತೇಕರ ನಂಬಿಕೆ. ಆದುದರಿಂದಲೇ ಜನರು ಆಗಾಗ ಗಂಗಾಸ್ನಾನವನ್ನು ಮಾಡುತ್ತಿರುತ್ತಾರೆ. ಹಾಗೂ ತಾವು ಪಾಪವಿಮುಕ್ತರಾಗಿದ್ದೇವೆ ಎಂದು ತಿಳಿದುಕೊಳ್ಳುತ್ತಾರೆ. ಒಮ್ಮೆ, ಕೆಲವು ವಿಚಾರವಾದಿಗಳಿಗೆ ಸಂಶಯ ಉಂಟಾಯಿತು. ಅದೇನೆಂದರೆ ಸಹಸ್ರಾರು ವರುಷಗಳಿಂದ ಕೋಟ್ಯಂತರ ಜನರ ಪಾಪಗಳನ್ನು ತೊಳೆದ ಗಂಗೆ, ತಾನೇ ಪಾಪಯುಕ್ತಳಾಗಿ ಮಲಿನಗೊಳ್ಳುವುದಿಲ್ಲವೇ? ಮತ್ತೆ ಆಕೆ ಹೇಗೆ ತನ್ನಲ್ಲಿ ತುಂಬಿದ ಪಾಪಗಳನ್ನು ತೊಳೆದುಕೊಳ್ಳುತಾಳೆ? ಈ ಪ್ರಶ್ನೆಯನ್ನು ಜನರು ಗಂಗೆಯ ಬಳಿ ಕೇಳಲಾಗಿ, ಆಕೆ ಹೇಳಿದ್ದು, ‘ಜನರು ನನ್ನಲ್ಲಿ ಮಿಂದಾಗ, ಅವರು ಗೈದ ಪಾಪಗಳನ್ನು ತುಂಬಿದ, ಮಲಿನ ಹೊಂದಿದ, ನನ್ನ ಜಲವನ್ನೆಲ್ಲ ನಾನು ಸಮುದ್ರರಾಜನಿಗೆ ಸೇರಿಸಿ ಬಿಡುತ್ತೇನೆ. ಸದಾ ಹರಿಯುತ್ತಿರುವ ನನಗೆ ಪಾಪಗಳೇ ಅಂಟಿಕೊಳ್ಳೋದಿಲ್ಲ’. ‘ಮತ್ತೆ ಇಂಥ ಹಲವಾರು ಪುಣ್ಯನದಿಗಳು ಬಂದು ನಿನ್ನ ಒಡಲಿಗೆ ಹೊತ್ತು ಹಾಕಿದ ಪಾಪಗಳನ್ನು ತುಂಬಿಕೊಂಡ ನೀನು ಹೇಗೆ ಆ ಪಾಪಗಳಿಂದ ಮುಕ್ತಿ ಹೊಂದುವೆ?’ ಎಂದು ಸಮುದ್ರರಾಜನನ್ನು ಕೇಳಲಾಗಿ, ಆತ ಉತ್ತರಿಸಿದ- ‘ಬೇಸಿಗೆ ಕಾಲ ಬಂದಾಗ, ಪಾಪ ತುಂಬಿದ ಎಲ್ಲ ಮಲಿನ ನೀರನ್ನು ಆವಿಯ ರೂಪದಲ್ಲಿ ಆಗಸಕ್ಕೆ ಕಳುಹಿಸಿ ಬಿಡುತ್ತೇನೆ. ಅಲ್ಲಿ ಅವು ಮೋಡಗಳಾಗಿ ಚಲಿಸುತ್ತಿರುತ್ತವೆ’. ಪುನಃ ಜನರು ಮೇಲೆ ನೋಡಿ, ‘ಇಂತಹ ಪಾಪ ತುಂಬಿದ ನೀರನ್ನಿಟ್ಟುಕೊಂಡು ನೀನೇನು ಮಾಡುವೆ?’ ಎಂದು ಮೋಡಗಳನ್ನು ಕೇಳಲಾಗಿ, ಮೋಡಗಳು ಹೇಳಿದವು- ‘ಬೇಸಿಗೆ ಕಾಲದಲ್ಲಿ ಆವಿಯ ರೂಪದಲ್ಲಿ ಬಂದ ಪಾಪಮಿಶ್ರಿತ ಕೆಟ್ಟ ಜಲವನ್ನು ಶುದ್ಧೀಕರಿಸಿ, ಪವಿತ್ರ ಜಲವನ್ನಾಗಿ ಪರಿವರ್ತಿಸಿ, ಮಳೆಗಾಲದಲ್ಲಿ ಹನಿಹನಿಯಾಗಿ ಭೂಮಿಯ ಮೇಲೆ ಸಿಂಪಡಿಸಿ, ಜೀವರಾಶಿಗಳ ಉಳಿವಿಗೆ ಕಾರಣನಾಗುವೆ. ಮಾತ್ರವೇ ಅಲ್ಲ. ಬೇಸಿಗೆಯಲ್ಲಿ ಬರಿದಾಗಿದ್ದ ಆ ಜೀವನದಿಗಳನ್ನು ಮತ್ತೆ ಶುದ್ಧಜಲದಿಂದ ತುಂಬಿ ಹರಿಯುವಂತೆ ಮಾಡಿ, ಅದರಲ್ಲಿ ಮಿಂದೇಳುವ ಜನರ ಪಾಪ ವಿಮೋಚನೆಗೆ ಮತ್ತೆ ನೆರವಾಗುವೆ. ಹೀಗೆ ಪಾಪಗಳನ್ನು ಪುಣ್ಯವನ್ನಾಗಿ ಪರಿವರ್ತಿಸಿದ ಸತ್ಕಾರ್ಯ ನನ್ನದಾಗುತ್ತದೆ’.
ಹೌದು, ಕೊಳೆ ತುಂಬಿದ ಕೆಸರನ್ನು ಕೆಸರಿನ ನೀರಿನಿಂದ ಶುದ್ಧಗೊಳಿಸಲಾಗದು; ಅದಕ್ಕೆ ಶುದ್ಧ ಜಲವೇ ಬೇಕು. ಹೀಗಾಗಲು ಕೊಚ್ಚೆ ನೀರು, ಶುದ್ಧ ಜಲವಾಗಿ ಪರಿವರ್ತನೆಗೊಳ್ಳುತ್ತಿರಲೇ ಬೇಕು. ಅಂತೆಯೇ ಪಾಪಗಳನ್ನು ತೊಳೆಯಲು, ಕಳೆಯಲು ಪುಣ್ಯದ ಕೆಲಸಗಳನ್ನೇ ಮಾಡಬೇಕು. ಪಾಪಿಗಳ ಪಾಪಗಳನ್ನು ತೊಳೆದು ಅವರನ್ನು ಪರಿಶುದ್ಧಗೊಳಿಸೋದೇ ಪುಣ್ಯದ ಕೆಲಸ. ಮೋಡಗಳು ಎಸಗುವ ಈ ಪರೋಪಕಾರವೇ ಪುಣ್ಯದ ಕಾರ್ಯ. ಪ್ರಕೃತಿಯಲ್ಲಿ ಪಶುಪಕ್ಷಿಗಳು, ಮರಗಿಡಗಳು ನದಿನಾಲೆಗಳು ಈ ಕೆಲಸವನ್ನು ಮಾಡುತ್ತಿರುತ್ತವೆ. ಉದಾಹರಣೆಗೆ ಹುಲ್ಲನ್ನು ತಿಂದು ಹಾಲನ್ನು ಸುರಿಸುವ ಹಸು ಆ ಹಾಲನ್ನು ತಾನೆಂದೂ ಕುಡಿದಿಲ್ಲ (ಪರೋಪಕಾರಾಯಾ ದುಹಂತಿ ಗಾವಾ); ತಾನಿತ್ತ ಹಣ್ಣನ್ನು ಮರವೆಂದೂ ತಿನ್ನದು (ಪರೋಪಕಾರಾಯಾ ಫಲಂತಿ ವೃಕ್ಷಾ). ತನ್ನೊಳಗೆ ಹರಿಯುವ ನೀರನ್ನು ನದಿಯೆಂದೂ ಕುಡಿದಿಲ್ಲ (ಪರೋಪಕಾರಾಯ ವಹಂತಿ ನದ್ಯಾ). ಅಂತೆಯೇ ಕಷ್ಟಪಟ್ಟು ಕೂಡಿಟ್ಟ ಜೇನನ್ನು ಜೇನುನೋಣವೆಂದೂ ಸವಿಯದು. ಪರೋಪಕಾರಾಯಾ ಪುಣ್ಯಾಯಃ ಎಂಬಂತೆ ಇವೆಲ್ಲ ಪುಣ್ಯದ ಕೆಲಸಗಳಲ್ಲವೇ!
(ಲೇಖಕರು ಸಾಹಿತಿ, ವಾಗ್ಮಿ)