More

  ಮನೋಲ್ಲಾಸ|ದೂರದಲ್ಲಿದ್ದರೂ ಅತಿಸಮೀಪ

  ಮೈಥಿಲಿ ರಾಘವನ್

  ಸಂಹಿತೆಯಲ್ಲಿನ ಪ್ರಸಂಗ. ಶ್ರೀಕೃಷ್ಣನು ನಂದಗೋಕುಲದಲ್ಲಿ ಸಾನ್ನಿಧ್ಯವನ್ನು ಅನುಗ್ರಹಿಸಿದ ಕಾಲದಲ್ಲಿ ಗೋಪಸ್ತ್ರೀಯರೆಲ್ಲರೂ ಸದಾ ಕೃಷ್ಣಧ್ಯಾನ ಪರಾಯಣರಾಗಿದ್ದರು. ಅದರಲ್ಲೂ ರಾಧೆ ತನ್ನ ಮನಸ್ಸನ್ನು ಪೂರ್ಣವಾಗಿ ಕೃಷ್ಣನಿಗೇ ಅರ್ಪಿಸಿ ತದೇಕಚಿತ್ತಳಾಗಿದ್ದವಳು. ಆಕೆಯ ವಿಷಯದಲ್ಲಿ ಕೃಷ್ಣನೂ ಸಹ ಅತ್ಯಂತ ಪ್ರಸನ್ನನಾಗಿದ್ದು ತಾನೂ ಸದಾ ಆಕೆಯನ್ನು ಸ್ಮರಿಸುತ್ತಲಿದ್ದ.

  ಶ್ರೀಕೃಷ್ಣ ಮುಂದೆ ಭೌತಿಕವಾಗಿ ಅವಳಿಂದ ದೂರವಾದಾಗಲೂ ತನ್ನ ಕರ್ಮಗಳೆಲ್ಲವನ್ನೂ ಆತನಿಗೇ ಸಮರ್ಪಿಸುತ್ತ ಮಾನಸಿಕವಾಗಿ ಅವನ ಸಾನ್ನಿಧ್ಯದಲ್ಲೇ ಇರುತ್ತಿದ್ದಳು. ಆಕೆಯ ವಿಷಯದಲ್ಲಿ ಅತಿಪ್ರಸನ್ನನಾದ ಕೃಷ್ಣನು ತನ್ನ ಪತ್ನಿಯರ ಮುಂದೆ ಸದಾ ಆಕೆಯನ್ನು ಪ್ರಶಂಸೆ ಮಾಡುತ್ತಲಿದ್ದ. ಇದನ್ನು ಕೇಳುತ್ತಿದ್ದ ಆತನ ಮಹಿಷಿಯರಿಗೆ ಕೃಷ್ಣನ ಮೆಚ್ಚುಗೆಗೆ ಪಾತ್ರಳಾದ ರಾಧೆಯನ್ನು ಒಮ್ಮೆಯಾದರೂ ಭೇಟಿಯಾಗಲೇಬೇಕೆಂಬ ಕುತೂಹಲ ಉಕ್ಕಿಬರುತ್ತಿತ್ತು. ಜೊತೆಗೆ ತಮ್ಮ ಕೃಷ್ಣಭಕ್ತಿಯೇನೂ ಕಡಿಮೆಯಲ್ಲ ಎಂಬ ಭಾವನೆ ರಹಸ್ಯವಾಗಿ ಅವರಲ್ಲಾಡಿತು.

  ಬಹಳ ಕಾಲದ ನಂತರ ಒಮ್ಮೆ ಸೂರ್ಯಗ್ರಹಣ ಸಮಯದಲ್ಲಿ ಸಪರಿವಾರನಾಗಿ ಕೃಷ್ಣನು ಗೋಪಗೋಪಿಯರನ್ನು ಸಿದ್ಧಾಶ್ರಮವೆಂಬ ಜಾಗದಲ್ಲಿ ಭೇಟಿಯಾಗುವ ಸನ್ನಿವೇಶ ಕೂಡಿಬಂದಿತು. ಕೃಷ್ಣ ತನ್ನ ಮಹಿಷಿಯರಿಗೆ ರಾಧೆಯನ್ನು ಪರಿಚಯಿಸಿದ. ಅವರೆಲ್ಲರೂ ಅತಿ ಉತ್ಸಾಹದಿಂದ ದೀರ್ಘಕಾಲ ಆಕೆಯನ್ನು ಮಾತನಾಡಿಸುತ್ತ ಕಳೆದರು. ರಾಧೆ ಕೃಷ್ಣಭಾವಭರಿತಳಾಗಿಯೇ ಸದಾಕಾಲವೂ ಇದ್ದದ್ದನ್ನು ಕಂಡು ಆಶ್ಚರ್ಯ-ಸಂತೋಷಗಳೆರಡೂ ಮೂಡಿ ಬಂದಿತು ಕೃಷ್ಣಪತ್ನಿಯರಿಗೆ.

  ರಾತ್ರಿವೇಳೆಗೆ ಎಲ್ಲರೂ ಅವರವರ ವಿಶ್ರಾಂತಿಧಾಮಕ್ಕೆ ಹಿಂತಿರುಗಿದರು. ತನ್ನ ಕೊಠಡಿಗೆ ಬಂದ ರುಕ್ಮಿಣಿದೇವಿ ಕೃಷ್ಣನು ಮಲಗದೆ ಕುಳಿತೇಯಿರುವುದನ್ನು ನೋಡಿ ಏಕೆ ಇಷ್ಟು ತಡವಾದರೂ ನಿದ್ರಿಸಲಿಲ್ಲವೆಂದು ಪ್ರಶ್ನಿಸಿದಳು. ಕೃಷ್ಣನೆಂದ ‘ರಾಧೆಗೆ ರಾತ್ರಿ ಹಾಲು ಕುಡಿದು ಮಲಗುವ ಅಭ್ಯಾಸ. ಇಂದು ಅವಳಿಗೆ ಯಾರೂ ಹಾಲು ಕೊಟ್ಟಿಲ್ಲವಾದ್ದರಿಂದ ನಿದ್ದೆ ಬರುತ್ತಿಲ್ಲ. ಹಾಗಾಗಿ ನನಗೂ ನಿದ್ರೆಯಿಲ್ಲ’. ಒಡನೆಯೇ ರುಕ್ಮಿಣಿ ಮುಂತಾದವರು ರಾಧೆಗೆ ಕುಡಿಯಲು ಹಾಲು ಕೊಟ್ಟುಬಂದರು. ಶ್ರೀಕೃಷ್ಣನೀಗ ಪವಡಿಸಿದ್ದ. ಆತನ ಪಾದಸೇವೆಯನ್ನು ಮಾಡಲು ಉದ್ಯುಕ್ತಳಾದ ರುಕ್ಮಿಣಿ, ‘ಸ್ವಾಮೀ, ಏನಿದು ನಿಮ್ಮ ಪಾದಗಳಲ್ಲಿ ಬೊಬ್ಬೆಗಳು ಏಕೆ ಎದ್ದಿವೆ’ ಎಂದು ಗಾಬರಿಯಿಂದ ಕೇಳಿದಳು. ‘ರಾಧೆಗೆ ಅತಿಬಿಸಿಯಾದ ಹಾಲನ್ನು ಕುಡಿಸಿದ್ದೀರಿ. ಆಕೆ ನನ್ನ ಪಾದಗಳನ್ನು ತನ್ನ ಹೃದಯದಲ್ಲಿ ಸದಾ ಧರಿಸಿರುವ ಕಾರಣ ಹಾಲಿನ ಬಿಸಿ ನನ್ನ ಪಾದಗಳ ಮೇಲೆ ಪರಿಣಾಮ ಬೀರಿದೆ’ ಎಂದ ಕೃಷ್ಣ.

  ಭೌತಿಕವಾಗಿ ದೂರದಲ್ಲಿದ್ದರೂ ಮಾನಸಿಕವಾಗಿ ಅವನಲ್ಲೇ ತನ್ಮಯಳಾಗಿರುವ ರಾಧೆಯ ಭಕ್ತಿಯಪರಾಕಾಷ್ಠೆ ರುಕ್ಮಿಣಿಯ ಮನಮುಟ್ಟಿತು. ಕೃಷ್ಣನು ಮಾಡಿದ ರಾಧೆಯ ಪ್ರಶಂಸೆ ವ್ಯರ್ಥವಲ್ಲವೆಂಬುದು ಸಿದ್ಧವಾಗಿ ತುಂಬುಹೃದಯದಿಂದ ರಾಧೆಗೆ ಮಾನಸಿಕವಾಗಿ ಅಭಿನಂದನೆಗಳನ್ನು ಸಲ್ಲಿಸಿದಳು. ಭಕ್ತಿಯಿಂದ ಕರೆದರೆ ಭಗವಂತ ಎಂದಿಗೂ ದೂರವಲ್ಲ. ದಾಸರಪದವೊಂದು ಇಲ್ಲಿ ಸ್ಮರಣೀಯ: ‘ಎಲ್ಲಿರುವನೋರಂಗ ಎಂಬ ಸಂಶಯ ಬೇಡ. ಎಲ್ಲಿ ಭಕ್ತರು ಕರೆದರಲ್ಲೆ ಒದಗುವನೋ’. ಅವನಿಗೆ ಕೇಳುವಂತೆ ಕೂಗುವ ಕ್ರಮವರಿಯಬೇಕಷ್ಟೆ. ಆತನು ಸರ್ವಾಂತರ್ಯಾಮಿಯಾದ್ದರಿಂದ ಕೂಗಿಗೆ ಬೇಕಾದದ್ದು ಗಟ್ಟಿಯಾದ ಧ್ವನಿಯಲ್ಲ, ಅವನಲ್ಲಿ ರಮಿಸುವ ಮನವೇ ಎಂಬುದನ್ನು ಮನವರಿಕೆ ಮಾಡಿಸಿದ್ದಾನೆ ಶ್ರೀಕೃಷ್ಣ. ನಿರಂತರ ಭಗತ್ಸ್ಮರಣೆಯೊಂದಿಗೆ ಭಗವತ್ಸಮ್ಮತವಾದ ಕರ್ಮಗಳನ್ನಾಚರಿಸಿ ಅದರ ಫಲವನ್ನೂ ಭಗವತ್ಪ್ರಸಾದವಾಗಿ ಭೋಗಿಸುವುದು ಭಗವಂತನೆಡೆಗೇ ನಮ್ಮನ್ನೊಯ್ಯುತದೆ ಎಂಬುದು ಶ್ರೀರಂಗ ಮಹಾಗುರುವಿನ ಆದೇಶ, ಕರ್ಮಯೋಗದ ಮರ್ಮ.

  (ಲೇಖಕರು ಸಂಸ್ಕೃತಿ ಚಿಂತಕರು)

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts