ಅದೊಂದು ಚಿಕ್ಕ ಬೀದಿ. ಬೀದಿಯ ಮೂಲೆಯಲ್ಲಿ ದೊಡ್ಡದೊಂದು ಕಸದ ರಾಶಿ ಬಿದ್ದಿತ್ತು. ಎರಡು ನಾಯಿಗಳು ಕಸದ ರಾಶಿಯ ಒಡೆತನಕ್ಕಾಗಿ ಭೀಕರವಾದ ಕಾದಾಟದಲ್ಲಿ ತೊಡಗಿದ್ದವು. ಹಾಗಂತ ಕಸದ ರಾಶಿಯಲ್ಲಿ ಆ ನಾಯಿಗಳ ಹೊಟ್ಟೆ ತುಂಬುವಂತಹ ಯಾವ ವಸ್ತುವೂ ಇರಲಿಲ್ಲ.
ಆದರೂ ಕಸದರಾಶಿ ಎಲ್ಲಿ ತನ್ನ ಕೈತಪ್ಪಿ ಹೋಗಿಬಿಡುವುದೋ ಎಂಬ ಆತಂಕದಲ್ಲಿ ನಾಯಿಗಳೆರಡೂ ಶಕ್ತಿಮೀರಿ ಕಾದಾಡುತ್ತಿದ್ದವು. ಎಷ್ಟೋ ಹೊತ್ತಿನಿಂದ ನಡೆಯುತ್ತಿದ್ದ ಇವುಗಳ ಕಾದಾಟ ಅಲ್ಲಿನ ವಾಸಿಗಳಿಗೆ ಕೋಪ ತರಿಸಿತು. ಮರುಕ್ಷಣದಲ್ಲಿ ಅದೆಲ್ಲಿಂದಲೋ ಜೋರಾಗಿ ಕಲ್ಲೊಂದು ಬೀಸಿ ಬಂತು. ನಾಯಿಯೊಂದರ ಮೂತಿಗೆ ಬಡಿಯಿತು, ಮತ್ತೊಂದರ ಕಾಲಿಗೆ ಬಡಿಯಿತು. ಕೊನೆಗೂ ಕಲ್ಲಿನ ನೋವು ತಾಳಲಾರದೆ ಅವೆರಡೂ ವಿಕಾರವಾಗಿ ಕಿರುಚುತ್ತ ಓಡಿದವು. ಅಲ್ಲಿಗೆ ಅವುಗಳ ಕಸದರಾಶಿಯ ಆಸೆ ಭಗ್ನವಾಗಿಹೋಯಿತು.
ಮನುಷ್ಯನ ಬದುಕು ಕೂಡ ಕಸದರಾಶಿಗೆ ಆಸೆಪಟ್ಟ ನಾಯಿಯಂತೆಯೇ. ನಾವು ಹಣ, ಬಟ್ಟೆ, ಬೆಳ್ಳಿ, ಬಂಗಾರ ಬೇಕಾದುದ್ದೋ ಬೇಡದ್ದೋ ಅದೆಷ್ಟೋ ವಸ್ತುಗಳು ಎಂಬ ಕಸದರಾಶಿಯನ್ನು ಹಾಕಿಕೊಂಡು ಅವುಗಳನ್ನು ಕಾಯುತ್ತ ಕುಳಿತುಕೊಳ್ಳುತ್ತೇವೆ. ಬೇರೆ ಯಾರೂ ಅದರತ್ತ ಸುಳಿಯಬಾರದು ಎಂದು ಹಗಲು ರಾತ್ರಿ ಕಾಯುತ್ತೇವೆ.
ಯಾವತ್ತೋ ಒಂದು ದಿನ ಭಗವಂತ ಸಾವು ಎಂಬ ಕಲ್ಲನ್ನು ಎಸೆದಾಗ ಕೈಯನ್ನೋ, ಕಾಲನ್ನೋ ಮುರಿಸಿಕೊಂಡು ನಾವೂ ಇಲ್ಲವಾಗುತ್ತೇವೆ. ಕಸದರಾಶಿಯನ್ನು ಬಿಟ್ಟು ಓಡುತ್ತೇವೆ. ನಾಯಿಗಳೇನೋ ಪಾಪ ಏನೂ ಅರಿಯಲಾರದವು. ಅವುಗಳ ಜೀವನವೇ ಹಾಗೆ. ಆದರೆ ಮನುಷ್ಯರಾದ ನಾವು ಅವುಗಳಿಗಿಂತ ಭಿನ್ನರಲ್ಲವೇ? ಪ್ರಾಣಿಗಳಿಗಿಂತ ಬುದ್ಧಿವಂತರಲ್ಲವೇ? ಸಂಸ್ಕಾರವಂತರಲ್ಲವೇ? ಜೀವನದ ಅರಿವನ್ನು ಪಡೆದವರಲ್ಲವೇ? ಹಾಗಿದ್ದೂ ನಾವೇಕೆ ಬಾಹ್ಯವಸ್ತುಗಳ ನಶ್ವರತೆಯನ್ನು ಅರಿಯಲಿಲ್ಲ?
ಒಂದು ತುತ್ತು ಅನ್ನ ಸಿಗದವನಿಗೆ ಬಂಗಾರದ ರಾಶಿಯೂ ಕಸದ ರಾಶಿಯೇ ಅಲ್ಲವೇ? ಅದರಿಂದ ಅವನು ತನ್ನ ಒಡಲ ಹಸಿವನ್ನು ಇಂಗಿಸಿಕೊಳ್ಳಲು ಸಾಧ್ಯವಿಲ್ಲ ಅಲ್ಲವೇ? ಈ ಸತ್ಯವನ್ನು ನಾವು ಅರಿಯಬೇಕು. ಕೇವಲ ಮನುಷ್ಯರಾಗಿ ಹುಟ್ಟಿದ ಮಾತ್ರಕ್ಕೆ ನಾವು ಪ್ರಾಣಿಗಳಿಗಿಂತ ಶ್ರೇಷ್ಠರಾಗಿ ಬಿಡಲು ಸಾಧ್ಯವಿಲ್ಲ. ಹಾಗೇನಾದರೂ ಅಂದುಕೊಂಡರೆ ಅದು ನಮ್ಮ ಭ್ರಮೆಯಷ್ಟೇ. ಅವುಗಳಿಗಿಂತ ಭಿನ್ನರಾಗಿ ಬದುಕಬೇಕೆಂದರೆ ನಮ್ಮಲ್ಲಿನ ಜ್ಞಾನಶಕ್ತಿಯನ್ನು ಅರಿತು ಅದರಂತೆ ಬದುಕನ್ನು ರೂಪಿಸಿಕೊಳ್ಳುವ ಚಾತುರ್ಯ ಬೇಕಾಗುತ್ತದೆ. ಇಲ್ಲದೇ ಹೋದರೆ ನಾವೂ ಅಜ್ಞಾನದಿಂದ ಪ್ರಾಣಿಗಳಂತೆಯೇ ಬದುಕನ್ನು ಸಾಗಿಸುತ್ತೇವೆ.
ಸುಭಾಷಿತಕಾರನೊಬ್ಬ ಹೇಳಿದಂತೆ- ‘ಆಹಾರ ನಿದ್ರಾ ಭಯ ಮೈಥುನಂ ಚ ಸಮಾನಮೇತತ್ ಪಶುಭಿರ್ನರಾಣಾಂ|’ ಆಹಾರ, ನಿದ್ರೆ, ಭಯ, ಮೈಥುನ ಇವೆಲ್ಲವುಗಳಲ್ಲಿ ಪ್ರಾಣಿಗಳಿಗೂ ನಮಗೂ ಯಾವ ವ್ಯತ್ಯಾಸವೂ ಇಲ್ಲ. ಅಂದರೆ ಸಮಾನತೆಯಿದೆ. ಒಂದು ವಿಶೇಷವೆಂದರೆ ನಮಗೆ ಅರಿವಿದೆ, ಆದರೆ ಪ್ರಾಣಿಗಳಿಗೆ ಅರಿವಿಲ್ಲ, ಈ ಅರಿವು ನಮಗೆ ಒಂದು ವರದಾನ. ಅದನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ಇಲ್ಲವಾದರೆ ನಾವು ಪ್ರಾಣಿಗಳಿಗಿಂತ ಹೀನವಾದ ಬದುಕನ್ನು ಕಳೆಯಬೇಕಾಗುವುದು.
| ಡಾ.ಗಣಪತಿ ಹೆಗಡೆ (ಲೇಖಕರು ಸಂಸ್ಕೃತ ಉಪನ್ಯಾಸಕರು)