ಬದುಕು ತಪೋಮಯವಾಗಿರಲಿ

ಹಿಮವಂತ ಹಾಗೂ ಮೇನೆಯರ ಮಗಳು ಪಾರ್ವತಿ. ಹಿಮಾಲಯದ ಪ್ರಾಕೃತಿಕ ಸೊಬಗೇ ನಾಚುವಂತಹ ಸೌಂದರ್ಯ ಅವಳದು. ತಂದೆಯ ಅಚಲ ಮನಸು, ಗೌರವರ್ಣ, ತಾಯಿಯ ಸಹಜ ನಾಚಿಕೆಯ ಸ್ವಭಾವವನ್ನು ಹಂಚಿಕೊಂಡು ಬೆಳೆದಂತಿದ್ದಾಳೆ. ಒಮ್ಮೆ ಹಿಮವಂತನ ಮನೆಗೆ ಬಂದ ನಾರದರು ಪಾರ್ವತಿಯನ್ನು ಕಂಡು ‘ನಿನ್ನ ಜನ್ಮವಿರುವುದು ಪರಶಿವನಿಗಾಗಿ. ಹೇಗಾದರೂ ಮಾಡಿ ಆತನನ್ನು ಒಲಿಸಿಕೊಳ್ಳಬೇಕು’ ಎಂದು ಬೋಧಿಸಿದರು. ಪಾರ್ವತಿಗೂ ಅದು ಸರಿಯೆನಿಸಿ ತಂದೆ-ತಾಯಿಯರ ಒಪ್ಪಿಗೆ ಪಡೆದು ಶಿವನನ್ನು ಒಲಿಸಿಕೊಳ್ಳಲು ಹಿಮಾಲಯದ ಯಾವುದೋ ತಪ್ಪಲಿನ ಕಡೆ ನಡೆದಳು. ನಿರ್ಧಾರವೇನೋ ಸರಿ. ಆದರೆ ಅವಳು ಹಿಡಿದ ಮಾರ್ಗವೇನೂ ಅಷ್ಟು ಸುಲಭವಾಗಿ ಇರಲಿಲ್ಲ. ಯಾಕೆಂದರೆ ಅವಳು ಬಯಸಿ ಪಡೆಯಲು ಹೊರಟ ಶಿವನು ಅದಾಗಲೇ ತನ್ನ ಸತಿಯನ್ನು ಕಳೆದುಕೊಂಡು, ವಿರಕ್ತನಾಗಿ ಹಿಮಾಲಯದ ಯಾವುದೋ ಉನ್ನತ ಶಿಖರದ ಮೇಲೆ ಸಮಾಧಿ ಸ್ಥಿತಿಯಲ್ಲಿ ಕುಳಿತಿದ್ದ. ಆತನನ್ನು ಎಚ್ಚರಗೊಳಿಸುವುದೇ ಕಷ್ಟವಾಗಿರಲು, ಇನ್ನು ಒಪ್ಪಿಸಿ ಮದುವೆಯಾಗುವ ಮಾತು ದೂರವೇ ಸರಿ. ಪಾರ್ವತಿಯ ನಿರ್ಧಾರ ಅಚಲವಾಗಿತ್ತು. ಸಾಧಿಸಲು ತಪಸ್ಸೊಂದೇ ಮಾರ್ಗ ಎಂದುಕೊಂಡಳು. ಬೇಸಿಗೆ, ಮಳೆ, ಚಳಿ ಎನ್ನದೆ ತನ್ನ ದೇಹವನ್ನು ದಂಡಿಸಿದಳು. ಅನ್ನಾಹಾರವನ್ನು ತ್ಯಜಿಸಿದ ಆಕೆ ಕೆಲ ದಿನಗಳ ಕಾಲ ಕೇವಲ ಎಲೆಗಳನ್ನೇ ಸೇವಿಸಿ, ಕೊನೆಗೆ ಅದಕ್ಕೂ ಶಿವ ಮಣಿಯದಿದ್ದಾಗ ಎಲೆಯ ಸೇವನೆಯನ್ನೂ ನಿಲ್ಲಿಸಿ ಅಪರ್ಣೆಯಾದಳು. ಕೊನೆಯಲ್ಲಿ ಮಣಿದ ಶಿವ ವಟುವಿನ ವೇಷದಲ್ಲಿ ಬಂದು ಅವಳಿಗೆ ಪರೀಕ್ಷೆಯೊಡ್ಡಿದ. ಪಾರ್ವತಿಯ ಮಾತಿನಲ್ಲಿ ಸಂಯಮವಿತ್ತು. ಅಂತಃಕರಣ ಶುದ್ಧವಾಗಿತ್ತು. ಶಿವನ ಹೃದಯ ಗೆದ್ದಳು.

ಕಠಿಣವಾದ ತಪಸ್ಸನ್ನು ಮಾಡಿ ಬಯಸಿದ್ದನ್ನು ಪಡೆಯಬಹುದು ಎಂದು ಪುರಾಣಗಳ, ಕಾವ್ಯಗಳ ಅನೇಕ ಕಥೆಗಳಲ್ಲಿ ಓದುತ್ತೇವೆ. ತಪಸ್ಸಿನ ಕುರಿತಾಗಿ ಜಿಜ್ಞಾಸೆಯನ್ನೂ ಹೊಂದುತ್ತೇವೆ. ತಪಸ್ಸೆಂದರೆ ಕಣ್ಣುಮುಚ್ಚಿ ಧ್ಯಾನಿಸುವುದಷ್ಟೇ ಅಲ್ಲ. ಗೀತೆಯಲ್ಲಿ ಶ್ರೀಕೃಷ್ಣನು ಹೇಳುವಂತೆ ಶಾರೀರಿಕ, ವಾಚಿಕ ಹಾಗೂ ಮಾನಸಿಕ ನಿಯಂತ್ರಣವನ್ನು ತಪಸ್ಸು ಅಪೇಕ್ಷಿಸುತ್ತದೆ. ಸಾಧಕನೋರ್ವನಿಗೆ ತನ್ನ ಗುರಿ ತಲುಪಲು ಈ ತ್ರಿಕರಣ ಶುದ್ಧಿ ಅತಿ ಅವಶ್ಯವೇ ಸರಿ. ಚೆನ್ನಾಗಿ ಓದುತ್ತಿದ್ದ ವಿದ್ಯಾರ್ಥಿಯೋರ್ವ ತನ್ನ ದೇಹದ ಕುರಿತು ಕಾಳಜಿ ವಹಿಸದೆ ಪರೀಕ್ಷೆ ವೇಳೆಗೆ ಆರೋಗ್ಯ ಕೈ ಕೊಟ್ಟು ಉತ್ತಮ ಅಂಕ ಪಡೆದುಕೊಳ್ಳಲಾಗದೆ ಪರಿತಪಿಸುವ ಎಷ್ಟೋ ಉದಾಹರಣೆಗಳನ್ನು ನೋಡುತ್ತೇವೆ. ಶಾರೀರಿಕ ನಿಯಂತ್ರಣವೆಂದರೆ ದೇಹದ ಆಂತರಿಕ ಹಾಗೂ ಬಾಹ್ಯ ಶುಚಿತ್ವ. ನಿಯಮಿತ ಆಹಾರ-ವಿಹಾರಗಳಿಂದ ಶರೀರವನ್ನು ಸುಸ್ಥಿರವಾಗಿ ಇಟ್ಟುಕೊಳ್ಳುವುದು. ಅನೇಕ ಬಾರಿ ಉದ್ಯೋಗಾಕಾಂಕ್ಷಿಗಳು ವಿಷಯಜ್ಞಾನ ಚೆನ್ನಾಗಿ ಇದ್ದರೂ ಸಂದರ್ಶನದ ವೇಳೆ ಸರಿಯಾಗಿ ಉತ್ತರ ನೀಡಲಾಗದೆ ಕೆಲಸದಿಂದ ವಂಚಿತರಾಗುತ್ತಾರೆ. ಮಾತಿನಲ್ಲಿ ಹಿಡಿತ, ಸ್ವಾಧ್ಯಯನಗಳು ಗುರಿ ತಲುಪಲು ಬೇಕು. ಇನ್ನು ಸಿಟ್ಟಿಗೆ ಬುದ್ಧಿಯನ್ನೋ, ಆಮಿಷಕ್ಕೆ ಮನಸನ್ನೋ ಕೊಟ್ಟು ಕೆಲಸವನ್ನು ಕೆಡಿಸಿಕೊಳ್ಳುವವರು ಅದೆಷ್ಟಿಲ್ಲ? ಕಾರ್ಯಸಿದ್ಧಿಗೆ ಮನಃಶಾಂತಿ, ಸೌಮ್ಯತ್ವ ಇತ್ಯಾದಿಯೂ ಅವಶ್ಯಕ. ನಮ್ಮ ಬದುಕು ಕಲಬೆರಕೆಯಾದಷ್ಟೂ ಸಾಧನೆ ಶೂನ್ಯದ ಕಡೆಗೆ ಸಾಗುತ್ತದೆ. ನಾವು ಕಾಯೇಣ ವಾಚಾ ಮನಸಾ ಶುದ್ಧರಾಗಿರಲು ಪ್ರಯತ್ನಿಸೋಣ. ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರುತ್ತದೆ.

|ಡಾ.ಗಣಪತಿ ಆರ್. ಭಟ್, 

(ಲೇಖಕರು ಸಂಸ್ಕೃತ ಉಪನ್ಯಾಸಕರು ಹಾಗೂ ರೇಡಿಯೋ ನಿರೂಪಕರು)

(ಪ್ರತಿಕ್ರಿಯಿಸಿ:[email protected])

Leave a Reply

Your email address will not be published. Required fields are marked *