ತಾಳ್ಮೆಯೆಂಬ ತಪ

ಸಂತ ಸೂರದಾಸರು 14 ನೆಯ ಶತಮಾನದಲ್ಲಿ ಬಾಳಿ ಬೆಳಗಿದ ಅಂಧ ಸಂತಕವಿ. ಶ್ರೀಕೃಷ್ಣನ ಪರಮ ಭಕ್ತರು. ಒಮ್ಮೆ ಅವರು ಪ್ರಸಿದ್ಧ ಗುರುಗಳೊಬ್ಬರ ಬಳಿ ಹೋಗಿ ಶಿಷ್ಯತ್ವಪ್ರದಾನ ಮಾಡಬೇಕೆಂದು ಕೇಳಿಕೊಳ್ಳುತ್ತಾರೆ. ಈತ ಶೀಘ್ರಕೋಪಿ ಎಂದು ಕೂಡಲೇ ಕಂಡುಹಿಡಿದ ಗುರುಗಳು, ‘ತ್ರಿಕಾಲವೂ ಭಗವನ್ನಾಮ ಸಂಕೀರ್ತನೆ ಮಾಡಿಕೊಂಡು ಒಂದು ತಿಂಗಳು ಬಿಟ್ಟು ಬಾ’ ಎಂದು ಸೂಚಿಸುತ್ತಾರೆ. ಸರಿ ಎಂದು ಸೂರದಾಸರು ಗುರುಗಳು ಹೇಳಿದಂತೆ ಭಗವನ್ನಾಮ ಸಂಕೀರ್ತನೆಯಲ್ಲಿದ್ದು ಒಂದು ತಿಂಗಳು ಕಳೆದ ಬಳಿಕ ಮಠಕ್ಕೆ ಬರುತ್ತಾರೆ. ದಾರಿಯಲ್ಲಿ ಬರುತ್ತಿರುವಾಗ, ಕಸ ಗುಡಿಸುವ ವ್ಯಕ್ತಿ ಗುಡಿಸಿದ ಕಸವನ್ನು ಅಕಸ್ಮಾತಾಗಿ ಸೂರದಾಸರ ಮೇಲೇ ಚೆಲ್ಲಿಬಿಡುತ್ತಾನೆ. ತೀವ್ರವಾಗಿ ಕೋಪಗೊಂಡ ಅವರು ಆ ವ್ಯಕ್ತಿಗೆ ಬೈದು ಇನ್ನೊಮ್ಮೆ ಸ್ನಾನ ಮಾಡಿಕೊಂಡು ಗುರುಗಳನ್ನು ಭೇಟಿಯಾಗಲು ತೆರಳಿದರು. ಆಗಲೂ ಗುರುಗಳು ಒಂದು ತಿಂಗಳು ಬಿಟ್ಟು ಬರುವಂತೆ ತಿಳಿಸುತ್ತಾರೆ. ಆ ನಂತರವೂ ಅದೇ ಘಟನೆ ಪುನರಾವರ್ತನೆಯಾಗುತ್ತದೆ. ಸೂರದಾಸರಿಗೆ ಶಿಷ್ಯತ್ವ ಲಭಿಸುವುದಿಲ್ಲ. ಮತ್ತೂ ಒಂದು ತಿಂಗಳು ಬಿಟ್ಟು ಹೋಗುವಾಗಲೂ ಕಸಗುಡಿಸುವವ ಕಸವನ್ನು ಸೂರದಾಸರ ಮೇಲೆ ಚೆಲ್ಲುತ್ತಾನೆ. ಆದರೆ ಆಶ್ಚರ್ಯ. ಈ ಬಾರಿ ಸೂರದಾಸರು ಆತನ ಮೇಲೆ ಕೋಪ ಮಾಡಿಕೊಳ್ಳುವ ಬದಲಿಗೆ, ‘ನನ್ನ ಕೋಪವನ್ನು ನಿಗ್ರಹಿಸಲು ನೀನು ಸಹಕಾರಿಯಾಗಿದ್ದೀಯ’ ಎಂದು ಧನ್ಯವಾದ ಹೇಳುತ್ತಾರೆ. ಹಿಂದೆ ತಿರುಗಿ ನೋಡಿದರೆ ಗುರುಗಳು ನಿಂತಿದ್ದಾರೆ. ‘ಈಗ ನೀನು ಆಧ್ಯಾತ್ಮಿಕ ಜೀವನಕ್ಕೆ ಅರ್ಹನಾಗಿರುವೆ’ ಎಂದು ಗುರುಗಳು ಆಶೀರ್ವದಿಸಿ ದೀಕ್ಷೆ ನೀಡುತ್ತಾರೆ.

ಯಾವುದೇ ಸಾಧನೆಗೆ ಮುಖ್ಯವಾಗಿ ಬೇಕಾದುದು ತಾಳ್ಮೆ. ಕೋಪವೆಂಬುದು ಅನರ್ಥ ಸಾಧನ, ವಿಕೃತಿ. ಅದು ತಾನು ಹುಟ್ಟಿದ ಸ್ಥಳವನ್ನೇ ಸುಡುತ್ತದೆ. ಅಕಾರಣ ಸಿಟ್ಟಿನಿಂದ ನಮ್ಮ ಅರಿವು ಹಾಗೂ ವ್ಯಕ್ತಿತ್ವ ಎರಡೂ ನಾಶವಾಗುತ್ತದೆ. ಕೋಪದ ಕೈಗೆ ಬುದ್ಧಿ ಕೊಡದೆ ತಾಳ್ಮೆ ವಹಿಸಿದರೆ ಬದುಕು ಸುಖಮಯವಾಗುತ್ತದೆ; ಅವಕಾಶಗಳು ನಮ್ಮ ಕೈಜಾರುವುದಿಲ್ಲ. ಹಾಲು ಬಿಸಿಯಾದಷ್ಟೂ ರುಚಿ ಹೆಚ್ಚು ಎನ್ನುವಂತೆ ತಾಳ್ಮೆ ವಹಿಸಿದಷ್ಟೂ ವ್ಯಕ್ತಿತ್ವದ ಘನತೆ ಹೆಚ್ಚುತ್ತದೆ. ಇಷ್ಟೆಲ್ಲ ಇದ್ದರೂ, ಇದೆಲ್ಲ ಗೊತ್ತಿದ್ದರೂ ಕೋಪವನ್ನು ಬಿಟ್ಟುಬಿಡುವುದು ಸುಲಭವಲ್ಲ. ಆದರೂ, ಪಟ್ಟುಬಿಡದೆ ದೃಢವಾಗಿ ಮನಸ್ಸು ಮಾಡಿದರೆ ಸಿಟ್ಟನ್ನು ಆಚೆನೂಕುವುದು ಸಾಧ್ಯ ಎಂಬುದಕ್ಕೆ ಮೇಲಿನ ನಿದರ್ಶನ ಕಾಣಸಿಗುತ್ತದೆ. ಆರಂಭದಲ್ಲಿ ವಿಫಲವಾದರೂ ಪಟ್ಟುಬಿಡದೆ ಪ್ರಯತ್ನ ಮುಂದುವರಿಸಿದರೆ ಕೋಪ ಜಾಗಖಾಲಿಮಾಡಬೇಕಾಗುತ್ತದೆ. ಹಾಗಾಗಿ ಕೋಪವನ್ನು ತ್ಯಜಿಸಿ ತಾಳ್ಮೆಯನ್ನು ತಪವಾಗಿಸಿಕೊಳ್ಳುವತ್ತ ಯತ್ನಿಸೋಣ.

| ಸುಮಾವೀಣಾ

(ಲೇಖಕಿ ಉಪನ್ಯಾಸಕಿ, ಹವ್ಯಾಸಿ ಬರಹಗಾರ್ತಿ)

Leave a Reply

Your email address will not be published. Required fields are marked *