ಸಂತೋಷವಾಗಿರುವುದೇ ಸಾರ್ಥಕ ಜೀವನ

ಅದೊಂದು ಕಾಲೇಜಿನಲ್ಲಿ ಪಿಯುಸಿ ಪರೀಕ್ಷೆ ಬರೆದು, ಮುಂದಿನ ವಿದ್ಯಾಭ್ಯಾಸಕ್ಕೆ ಅಣಿಯಾಗಿರುವ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ‘ಜೀವನದಲ್ಲಿ ಮುಂದೇನಾಗಲು ಬಯಸುವಿರಿ?’ ಎಂದು ಪ್ರಶ್ನಿಸಿದರು. ಕೆಲ ವಿದ್ಯಾರ್ಥಿಗಳು ವೈದ್ಯ, ಇಂಜಿನಿಯರ್ ಆಗಲು ಬಯಸುವುದಾಗಿ ಹೇಳಿದರೆ ಮತ್ತೆ ಕೆಲವರು ವಿಜ್ಞಾನಿ, ವಕೀಲ… ಎಂದೆಲ್ಲ ಉತ್ತರಿಸಿದರು. ಆದರೆ, ಒಬ್ಬ ತರುಣ ಮಾತ್ರ, ‘ನಾನು ಸಂತೋಷವಾಗಿರಲು ಬಯಸುವೆ’ ಎಂದ. ‘ನೀನು ನನ್ನ ಪ್ರಶ್ನೆಯನ್ನು ತಪ್ಪಾಗಿ ಅರ್ಥೈಸಿಕೊಂಡಿರುವೆ’ ಎಂದು ಪ್ರಾಂಶುಪಾಲರು ಹೇಳಿದಾಗ, ‘ಇಲ್ಲ ಸರ್, ನೀವೇ ಜೀವನವನ್ನು ತಪ್ಪಾಗಿ ಅರ್ಥೈಸಿಕೊಂಡಿರುವಿರಿ’ ಎಂದು ಪ್ರತ್ಯುತ್ತರಿಸಿದ. ಚಕಿತರಾದ ಪ್ರಾಂಶುಪಾಲರು ‘ನೀನು ಹೇಳಿದ್ದು ಸರಿಯಾಗಿ ಅರ್ಥವಾಗಿಲ್ಲ; ಬಿಡಿಸಿ ಹೇಳು’ ಎಂದರು. ತತ್ತ್ವಶಾಸ್ತ್ರಜ್ಞನಂತೆ ಆ ತರುಣ ಉತ್ತರಿಸತೊಡಗಿದ-‘ಜೀವನದಲ್ಲಿ ನಾವು ಏನೇ ಆದರೂ, ಅಂತಿಮವಾಗಿ ಸಂತೋಷವಾಗಿರೋದೆ ಜೀವನದ ಉದ್ದೇಶ. ನಾವು ಆರಿಸಿಕೊಳ್ಳುವ ವೃತ್ತಿ ಮುಖ್ಯವಲ್ಲ; ವೃತ್ತಿಯಿಂದ ಸಂತೋಷವಾಗಿರೋದು ಮುಖ್ಯ. ವೃತ್ತಿಯಿಂದ ದೊರಕುವ ಸಂತೃಪ್ತಿ ಮುಖ್ಯ. ಕೆಲವರು ಹಣ, ಹೆಸರಿನ ಹಿಂದೆ ಬಿದ್ದು ತಮಗೆ ಒಲ್ಲದ, ಆಸಕ್ತಿ, ಅಭಿರುಚಿ ಇಲ್ಲದ ವೃತ್ತಿಯನ್ನು ಮಾಡುತ್ತಿರುತ್ತಾರೆ. ಫಲಶ್ರುತಿಯಾಗಿ, ಸಂತೋಷದ ಹೊರತಾಗಿ ಎಲ್ಲವನ್ನೂ ಪಡೆಯುತ್ತಾರೆ. ಏನು ಪ್ರಯೋಜನ? ಹಾಗೆ ನೋಡಿದರೆ ಮನುಷ್ಯರು ಸೇರಿ ಎಲ್ಲ ಪ್ರಾಣಿಗಳ ಜೈವಿಕ ಆಸಕ್ತಿಗಳಾದ ಹಸಿವೆ-ಹಸಿವೆಯ ನಂತರದ ಆಹಾರ ಸೇವನೆ, ಸವಿನಿದ್ದೆ, ಕಾಮ-ಎಲ್ಲವೂ ಪರಿಸಮಾಪ್ತಿಯಾಗೋದು, ಸಂತೋಷವೆಂಬ ಭಾವದಿಂದ. ಒಬ್ಬೊಬ್ಬರಿಗೆ ಒಂದೊಂದರಲ್ಲಿ ಸಂತೋಷ. ಸಂಸಾರಿಗಳಿಗೆ ಸಂಸಾರದಿಂದ, ಸನ್ಯಾಸಿಗಳಿಗೆ ಸನ್ಯಾಸದಿಂದ ಸಂತೋಷ. ಕೆಲವರು ಯಶಸ್ಸಿನಿಂದ ಸಂತೋಷ ಪಟ್ಟರೆ, ಕೆಲವರು ದಾನಧರ್ಮಗಳಿಂದ ಮತ್ತು ಸಮಾಜಸೇವೆ ಮಾಡೋದರಿಂದ ಸಂತಸ ಪಡುತ್ತಾರೆ. ಏನು ಸಾಧಿಸಿದರೇನು? ಎಷ್ಟು ಪಡೆದರೇನು? ಸಂತೋಷವೊಂದು ಇಲ್ಲದಿದ್ದರೆ! ನಮ್ಮ ಸಂತೋಷವನ್ನು ಇತರ ವಿಷಯಗಳಿಗಾಗಿ ವಿಕ್ರಯ ಮಾಡಿಕೊಳ್ಳಬಾರದಲ್ಲ! ಜೀವನದ ಉದ್ದೇಶ ಸಂತೋಷವಾಗಿರೋದೇ ಸರ್’. ಹುಡುಗನ ಮಾತುಗಳಲ್ಲಿ ಅರ್ಥವಿತ್ತು. ಇದೇ ಅರ್ಥವನ್ನು ತಿಳಿಸುವ ಭೂತಾನ್ ದೊರೆಯ ಉತ್ತರವೊಂದು ಹೀಗಿದೆ. ‘ನಿಮ್ಮ ದೇಶದ ಜಿಡಿಪಿ ಎಷ್ಟು?’ ಎಂಬ ಸಂದರ್ಶಕರ ಪ್ರಶ್ನೆಗೆ ದೊರೆ ಹೇಳುತ್ತಾನೆ-‘ನಮ್ಮ ದೇಶದ ಪ್ರಗತಿಯನ್ನು ಜಿಡಿಪಿಯಿಂದ ಅಲ್ಲ ಜಿಎನ್​ಪಿ (ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್)ಯಿಂದ ಅಳೆಯುತ್ತೇವೆ’. ಎಂಥ ಮಾರ್ವಿುಕವಾದ ಉತ್ತರ. ಹೌದು, ಜೀವನದಲ್ಲಿ ಸಂತೋಷವೇ ಅತೀ ಮುಖ್ಯ, ಸಂತೋಷವಾಗಿರಲು ಶ್ರೀಮಂತರೇ ಆಗಬೇಕೆಂದಿಲ್ಲ. ಶ್ರೀಸಾಮಾನ್ಯನಾಗಿದ್ದರೂ, ಅನಕ್ಷರಸ್ಥರಾಗಿದ್ದರೂ ಪರವಾಗಿಲ್ಲ. ಸಂತೋಷ ಎನ್ನುವುದು ಎಲ್ಲ ಕಡೆ ಎಲ್ಲ ಕಾಲದಲ್ಲೂ, ಎಲ್ಲರಿಗೂ ನಾನಾ ರೂಪದಲ್ಲಿ, ನಾನಾ ರೀತಿಯಲ್ಲಿ ಲಭ್ಯವಾಗಿರುವ ವಿಷಯ, ಸುಂದರ ಅನುಭವ. ಸಂತೋಷವಾಗಿರಲು ಯಾವ ನಿಯಮಗಳೂ ಇಲ್ಲ, ನಿರ್ಬಂಧಗಳೂ ಇಲ್ಲ. ಹಾಗೂ ಇದಕ್ಕೆ ಯಾರ ಅನುಮತಿಯೂ ಬೇಕಾಗಿಲ್ಲ. ಇದು ಭಗವಂತ ಎಲ್ಲರಿಗೂ ಸರಿಸಮಾನವಾಗಿ ನೀಡಿರುವ ಮುಕ್ತ ಅವಕಾಶ. ಹಾಗಾಗಿ, ಸಂತೋಷವಾಗಿದ್ದುಕೊಂಡು ಜೀವನ ಸಾರ್ಥಕವಾಗಿಸೋಣ.

| ಡಾ.ಕೆ.ಪಿ.ಪುತ್ತೂರಾಯ

(ಲೇಖಕರು ಪ್ರಾಧ್ಯಾಪಕರು, ಸಾಹಿತಿ ಹಾಗೂ ವಾಗ್ಮಿ)

Leave a Reply

Your email address will not be published. Required fields are marked *