ಸುಖದ ಹುಡುಕಾಟವೇಕೆ?

ಸುಖವಾಗಿ ಬಾಳುವುದೇ ಜೀವನದುದ್ದಕ್ಕೂ ನಾವು ಮಾಡುವ ಎಲ್ಲ ಕೆಲಸಗಳ ಪರಮೋದ್ದೇಶ. ಅದಕ್ಕಾಗಿ ಅನೇಕರು ಸುಖದ ಹುಡುಕಾಟದಲ್ಲಿರುತ್ತಾರೆ. ಸುಖವನ್ನು ಅರಸಿಕೊಂಡು ಹೋಗುವ ಮನುಷ್ಯನಿಗೆ ಕಾಣಿಸುವುದು ಹಣ, ಅಧಿಕಾರ, ಅಂತಸ್ತು ಇತ್ಯಾದಿ. ಇವು ಇದ್ದರೆ ನೆಮ್ಮದಿಯಾಗಿ ಇರಬಹುದೆಂದುಕೊಳ್ಳುವವರಿಗೆ ಸುಖ ಕೇವಲ ಮರೀಚಿಕೆಯಾಗಿಯೇ ಉಳಿದುಬಿಡುತ್ತದೆ.

ಪುಟ್ಟ ನಾಯಿಮರಿಯೊಂದು ತನ್ನ ಬಾಲವನ್ನು ತಾನೇ ಕಚ್ಚಿ ಹಿಡಿಯುವ ಪ್ರಯತ್ನದಲ್ಲಿತ್ತು. ಎಡಕ್ಕೊಮ್ಮೆ ಬಲಕ್ಕೊಮ್ಮೆ ಗಿರಕಿ ಹೊಡೆಯುತ್ತ, ನೆಲದ ಮೇಲೆ ಹೊರಳಾಡುತ್ತ ಕುಂಯ್ ಕುಂಯ್ ಎಂದು ಕೂಗುತ್ತ ಬಾಲವನ್ನು ಹಿಡಿಯುವ ಶತಪ್ರಯತ್ನ ಮಾಡುತ್ತಲಿತ್ತು. ಅದರ ಸಂಕಟವನ್ನು ಕಂಡು ಅಲ್ಲಿಗೆ ಬಂದ ಹಿರಿಯ ನಾಯಿಯೊಂದು ‘ಏಕೆ ಈ ರೀತಿ ವಿಚಿತ್ರವಾಗಿ ಆಡುತ್ತಿದ್ದಿಯೆ?’ ಎಂದು ಕೇಳಿತು. ಅದಕ್ಕೆ ಏನೂ ಅರಿಯದ ಆ ಪುಟ್ಟನಾಯಿ, ‘ಯಾರೋ ನನಗೆ ಹೇಳಿದರು. ಸುಖವು ನನ್ನ ಬಾಲದಲ್ಲಿದೆ ಎಂದು. ಅದಕ್ಕಾಗಿ ಆ ಸುಖವನ್ನು ಪಡೆಯಲು ಪ್ರಯತ್ನಿಸುತ್ತಿರುವೆ’ ಎಂದಿತು. ಆ ಮಾತು ಕೇಳಿದ ಆ ಜ್ಯೇಷ್ಠನಾಯಿ, ‘ಸುಖ ನಮ್ಮ ಬಾಲದಲ್ಲಿ ಇರುವುದೇನೋ ನಿಜ. ಆದರೆ ಅದನ್ನು ಹಿಡಿಯಲು ಹೋಗಬೇಡ. ನಿನ್ನ ಪಾಡಿಗೆ ನಿನ್ನ ಕೆಲಸ ಮಾಡಿಕೊಂಡು ಇರು. ಆಗ ಆ ಬಾಲ ನೀನು ಹೋದಲ್ಲೆಲ್ಲ ನಿನ್ನನ್ನೇ ಹಿಂಬಾಲಿಸಿಕೊಂಡು ಬರುತ್ತದೆ’ ಎಂದು ಹೇಳಿತು.

ಇದೊಂದು ಪ್ರಹಸನವಷ್ಟೇ. ಆದರೆ ಸುಖದ ಹಿಂದೆ ಬೀಳುವವರಿಗೆ ಇದು ಸರಿಯಾಗಿಯೇ ಅನ್ವಯವಾಗುತ್ತದೆ. ಸುಖವನ್ನು ಬಯಸಬೇಕು ನಿಜ. ಆದರೆ ಹುಡುಕಾಟ ಬೇಕಿಲ್ಲ. ಸುಖದ ಬೆನ್ನತ್ತಿ ಹೋದ ಯಯಾತಿ ಅದೇ ಅಜ್ಞಾನದಿಂದ ತಪ್ಪುದಾರಿ ಹಿಡಿದ. ಶಾಪಕ್ಕೊಳಗಾಗಿ ವೃದ್ಧನಾದರೂ, ಯೌವನವನ್ನು ಅನುಭವಿಸಬೇಕೆಂಬ ಹಟಕ್ಕೆ ಬಿದ್ದು ಮಗನಾದ ಪುರುವಿನ ಯೌವನವನ್ನು ಕಸಿದುಕೊಂಡ. ಕೊನೆಗೆ ವಾಸ್ತವ ಅರಿವಾದಾಗ ಅವನು ಅನುಭವಿಸಿದ್ದು ಕೇವಲ ಪಶ್ಚಾತ್ತಾಪ. ನಹುಷನೆಂಬ ರಾಜನಿಗೆ ಅದೃಷ್ಟವಶಾತ್ ಇಂದ್ರಪದವಿಯ ಲಾಭವಾಯಿತು. ಆದರೆ ಇಂದ್ರನ ಪತ್ನಿ ಮೇಲೆ ವ್ಯಾಮೋಹ ಹೊಂದಿ, ಸಪ್ತಋಷಿಗಳಿಂದ ಪಲ್ಲಕ್ಕಿ ಸೇವೆ ಪಡೆದುಕೊಳ್ಳಲು ಮುಂದಾದ. ಅಧಿಕಾರದ ಸುಖದಲ್ಲಿದ್ದ ಅವನಿಗೆ ಸಿಕ್ಕಿದ್ದು ಅಗಸ್ತ್ಯರ ಶಾಪ. ಹೀಗೆ ಸುಖವನ್ನೇ ಹುಡುಕಿಕೊಂಡು, ಪಡೆಯಲು ಹೊರಟರೆ ಅದರ ಲವಲೇಶವೂ ವೇದ್ಯವಾಗದೇ ಹೋದೀತು.

ಸುಖವೆಂದರೆ ಹಣ, ಅಧಿಕಾರಾದಿಗಳಿಂದ ಪಡೆಯುವ ಸ್ವತ್ತಲ್ಲ. ಸುಖವೆಂದರೆ ಸಿಕ್ಕಿದ್ದರಲ್ಲಿಯೇ ಸಮಾಧಾನ ಪಟ್ಟುಕೊಳ್ಳುವ ನಮ್ಮ ಮನಸ್ಥಿತಿಯಷ್ಟೇ. ಸುಖಕ್ಕಾಗಿ ಪರಿತಪಿಸುವ, ಹಪಹಪಿಸುವ, ಪರಸ್ಪರ ಕಚ್ಚಾಡಿಕೊಳ್ಳುವ ನಾವು ಅದು ನಮ್ಮ ಆಂತರ್ಯದಲ್ಲಿಯೇ ಇರುವುದೆಂಬ ವಾಸ್ತವವನ್ನು ಅರಿಯುವುದೇ ಇಲ್ಲ. ಅದನ್ನು ಬಾಹ್ಯದಲ್ಲಿ ಅನ್ವೇಷಿಸುವುದು ಕೇವಲ ಮೂರ್ಖವೃತ್ತಿ. ಕಾರ್ಯವು ನಮ್ಮ ಧ್ಯಾನವಾಗಬೇಕೇ ಹೊರತು ಸುಖವಲ್ಲ. ಸುಖವನ್ನು ನಿರ್ಲಕ್ಷಿಸುವವನೇ ನಿತ್ಯಸುಖಿಯಾಗಿರುತ್ತಾನೆ ಎಂಬ ವಿಚಾರವನ್ನು ಎಂದಿಗೂ ಮರೆಯಬಾರದು.

| ಡಾ. ಗಣಪತಿ ಆರ್. ಭಟ್

(ಲೇಖಕರು ಸಂಸ್ಕೃತ ಉಪನ್ಯಾಸಕರು ಹಾಗೂ ರೇಡಿಯೋ ನಿರೂಪಕರು)

Leave a Reply

Your email address will not be published. Required fields are marked *