ಬಿಡು ಬಾಹ್ಯದೊಳು ಡಂಭವ…


ಒಂದು ನಗರದಲ್ಲಿ ಪ್ರಸಿದ್ಧ ಸೇಠ್​ಜಿಯೊಬ್ಬರ ದೊಡ್ಡದಾದ ಮನೆ ಹಾಗೂ ಸಂಪನ್ನವಾದ ಸಮೃದ್ಧ ಪರಿವಾರವಿತ್ತು. ಅವರ ಮನೆಯಲ್ಲಿಯ ದೇವರಕೋಣೆಯಲ್ಲಿ ಒಂದು ಸುವರ್ಣ ಕಲಶವಿತ್ತು. ಪರಿವಾರದವರೆಲ್ಲ ಅದನ್ನು ಒಂದು ಪುಟ್ಟ ಸುವರ್ಣತಟ್ಟೆಯ ಮೇಲಿಟ್ಟು ಪೂಜಿಸುತ್ತಿದ್ದರು. ಆ ಕಲಶದ ಪೂಜೆಯ ಫಲದಿಂದ ಸುಖ-ಸಮೃದ್ಧಿ ಹೆಚ್ಚಾಗುತ್ತದೆ ಎಂಬ ನಂಬಿಕೆ ಅವರಲ್ಲಿತ್ತು. ಆ ಸೇಠ್​ಜಿ ವ್ಯಾಪಾರದಲ್ಲಿ ಗಳಿಸಿದ ಅಪಾರ ಹಣದಿಂದ ಮುಂದಿನ ಎರಡು ತಲೆಮಾರುಗಳವರೆಗೂ ಜೀವನ ಆರಾಮವಾಗಿ ನಡೆಯಿತು. ಆದರೆ ನಂತರದ ದಿನಗಳಲ್ಲಿ ವ್ಯಾಪಾರದಲ್ಲಿ ಗಳಿಕೆ ಕಡಿಮೆಯಾಗಿ ಆರ್ಥಿಕ ಪರಿಸ್ಥಿತಿ ಬಿಗಡಾಯಿಸತೊಡಗಿತು. ಮುಂದಿನವರಿಗೆ ಅವರಲ್ಲಿರುವ ಅಂಗಡಿ, ಆಸ್ತಿ, ಒಡವೆಗಳನ್ನೆಲ್ಲ ಮಾರಬೇಕಾಯಿತು. ಕೊನೆಕೊನೆಗೆ ಸಾಲಗಾರರು ಮನೆಗೆ ಬರಲಾರಂಭಿಸಿದ ಮೇಲೆ ಪರಿವಾರದವರು ನಿರ್ವಾಹವಿಲ್ಲದೆ ಮನೆಯಲ್ಲಿಯ ಆ ಸುವರ್ಣ ಕಲಶವನ್ನು ಮಾರಿದರಾಯಿತೆಂದು ನಿರ್ಣಯಿಸಿ ಅದನ್ನು ಒಂದು ಬಂಗಾರದ ಅಂಗಡಿಗೆ ತೆಗೆದುಕೊಂಡು ಹೋದರು. ಅಂಗಡಿಯವನು ಅದನ್ನು ಒರೆಗೆ ಹಚ್ಚಿ ನೋಡಿ ಅದಕ್ಕೆ 30 ಸಾವಿರ ರೂಪಾಯಿ ಸಿಗಬಹುದೆಂದನು. ಅವರಿಗೆ ಇನ್ನೂ ಹೆಚ್ಚಿನ ಹಣದ ಅವಶ್ಯಕತೆ ಇದ್ದುದರಿಂದ, ಕಲಶವೇ ಹೋದ ಮೇಲೆ ಅದನ್ನಿಡುವ ತಟ್ಟೆ ಏಕೆ ಬೇಕೆಂದು ಅದನ್ನೂ ಅಂಗಡಿಯವನಿಗೆ ಕೊಟ್ಟು ‘ಇದಕ್ಕೆ ಎಷ್ಟು ಸಿಗಬಹುದು ನೋಡಿರಿ’ ಎಂದು ಕೇಳಿದರು. ಆದನ್ನು ಪರೀಕ್ಷಿಸಿ ಅವನು ‘ಇದಕ್ಕೆ 50 ಸಾವಿರ ರೂಪಾಯಿ ಸಿಗುತ್ತದೆ’ ಎಂದ. ಇವರಿಗೋ ಆಶ್ಚರ್ಯ. ‘ನಾವು ಇಷ್ಟೊಂದು ಭಕ್ತಿಯಿಂದ ಪೂಜಿಸುವ ದೊಡ್ಡಕಲಶದ ಬೆಲೆ, ಅದನ್ನಿಡುವ ಸಣ್ಣತಟ್ಟೆಗಿಂತ ಕಡಿಮೆಯೇ..?!’ ಎಂದು ಕೇಳಿದ್ದಕ್ಕೆ ಅಂಗಡಿಯಾತ ‘ನಿಮ್ಮ ಭಾವನೆ ನನಗೆ ಅರ್ಥವಾಗುತ್ತದೆ; ಆದರೆ ನಾನಿಲ್ಲಿ ಕಲಶ ಅಥವಾ ತಟ್ಟೆಯನ್ನು ಖರೀದಿಸುತ್ತಿಲ್ಲ ಅಥವಾ ಅವುಗಳ ಆಕಾರವನ್ನೂ ನೋಡುತ್ತಿಲ್ಲ; ಅವುಗಳಲ್ಲಿರುವ ಬಂಗಾರವನ್ನು ಮಾತ್ರ ಖರೀದಿಸುತ್ತಿದ್ದೇನೆ. ನಿಮ್ಮ ಕಲಶ ಕೇವಲ ಸುವರ್ಣಲೇಪಿತವಷ್ಟೇ; ತಟ್ಟೆ ಮಾತ್ರ ಸಂಪೂರ್ಣ ಸುವರ್ಣದ್ದಾಗಿದೆ. ಹೀಗಾಗಿ ಅದಕ್ಕೆ ಹೆಚ್ಚಿನ ಮೌಲ್ಯ’ ಎಂದ.

ನಾವೂ ಕೂಡ, ಕೇವಲ ವೇಷ-ಭೂಷಣಗಳ ಆಧಾರದ ಮೇಲೆ ಸಮಾಜದ ಕೆಲವೊಂದು ಜನರನ್ನು ‘ಮಹಾನ್ ವ್ಯಕ್ತಿಗಳು’ ಅಥವಾ ‘ಸಾಧಕರು’ ಅಂದುಕೊಂಡಿರುತ್ತೇವೆ. ಪರಂಪರೆಯಿಂದ ಬಂದದ್ದಕ್ಕೋ, ಬೇರೆಯವರ ಹೆದರಿಕೆಗೋ ಅವರನ್ನೇ ಗೌರವಿಸುತ್ತೇವೆ. ಅದರಲ್ಲಿ ಅಂಥದ್ದೇನೂ ತಪ್ಪಿರಲಿಕ್ಕಿಲ್ಲ. ಆದರೆ ಪರಿಶುದ್ಧ ವ್ಯಕ್ತಿತ್ವ, ಸದ್ಗುಣ ಹಾಗೂ ಅಪಾರಜ್ಞಾನ ಹೊಂದಿದ್ದು ಸಾಮಾನ್ಯರಲ್ಲಿಯೇ ಒಂದಾಗಿ ತಮ್ಮಷ್ಟಕ್ಕೆ ತಾವು ಸತ್ಕರ್ಮದಲ್ಲಿ ತೊಡಗಿಸಿಕೊಂಡವರನ್ನು ಮರೆತುಬಿಡುತ್ತೇವೆ. ಅದಕ್ಕೆ ಸರ್ಪಭೂಷಣ ಶಿವಯೋಗಿಗಳು ‘ಜನರು ಮೆಚ್ಚುತ ನಿನ್ನ ಕೈಲಾಸಕೊಯ್ವರೆ? ಜನ ಮೆಚ್ಚದಿರೆ ಶಿವ ಬಿಡುತಿಹನೆ? ಜನರಿಲ್ಲಿ ನಿನ್ನನು ದೊಡ್ಡಾತನೆಂದರೆ ಚಿನುಮಯ ಶಿವನಲ್ಲಿ ಅರಿಯನೇ ಮರುಳೆ. ಬಿಡು ಬಾಹ್ಯದೊಳು ಡಂಭವ’ ಎಂದಿದ್ದಾರೆ. ಅಂಥ ನೈಜ ಜನರನ್ನು ಗೌರವಿಸೋಣ ಅವರಿಂದ ಕಲಿಯೋಣ.

| ಚಿದಂಬರ ಮುನವಳ್ಳಿ

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)